Tuesday, March 19, 2013

ಪಯಣ 5

ಕತೆ, ಕವನ ಕಾದಂಬರಿ ಬರಿಯುದು ಅಷ್ಟು ಸುಲಭದ ಕೆಲಸ ಅಲ್ಲ ಹೇಳುದು ಈಗ ಅರ್ಥ ಆಗ್ತಾ ಅದೆ. ಮೊದ ಮೊದಲು ನಾನು ಸಣ್ಣ ಪುಟ್ಟ ಪದ್ಯ, ಕವನ ಬರಿತ್ತಾ ಇತ್ತಿದ್ದೆ !! ಅದ್ರ ಓದಿದವು “ಲಾಯ್ಕದೆ, ಇನ್ನೂ ಬರಿ” ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹವೂ ಮಾಡಿಕೊಂಡಿತ್ತಿದ್ವು. ರಾಮಕುಂಜಲ್ಲಿ ಪಿಯುಸಿ ಮಾಡುವಾಗ ಕನ್ನಡ ಮಾಷ್ಟ್ರು ಗಣರಾಜ ಕುಂಬ್ಳೆ ಮಾವನಲ್ಲಿ ಪಾದ ಪೂಜೆ ಆದ ಮೇಲೆ ಗುರುಗಳ ಚರಣದಡಿಲಿ ಒಂದು ಪದ್ಯ ಅರ್ಪಿಸಿದೆ. ಗುರುಗಳು ಪ್ರೀತಿಂದ ಮಂತ್ರಾಕ್ಷತೆ ಕೊಟ್ಟು ಆಶೀರ್ವಾದ ಮಾಡಿದ್ವು . ಅದೇ ಹುರುಪಿಲಿ ಮತ್ತೆ ಒಂದಷ್ಟು ಪದ್ಯ ಬರ್ದೆ. ಹೆಚ್ಚಿನ ಪದ್ಯ ಎಲ್ಲಾ ಗುರುಗಳ ಬಗ್ಗೆ, ಗೋವಿನ ಬಗ್ಗೆ ಇತ್ತು. ‘ಬಿಂದು ರಾಮಾಯಣ’ ಹೇಳುವ 108 ಪದ್ಯ ಇರುವ ಒಂದು ನೀಳ್ಗವನ ಬರ್ದೆ. ಆ ಕವನಮಾಲೆಯ ಖುದ್ದು ಗುರುಗಳೇ ಓದಿ, ತಿದ್ದಿ ಆಶೀರ್ವಾದ ಮಾಡಿದ್ವು. ಶ್ರೀಭಾರತಿ ಪ್ರಕಾಶನಲ್ಲಿ ಅದ್ರ ಪ್ರಕಟಣೆ ಆಯ್ತು. ಗುರುಗಳ ಅಮೃತ ಹಸ್ತಂದ ಲೋಕಾರ್ಪಣೆಯೂ ಆಯ್ತು. ಗುರುಕೃಪೆ, ರಾಮಾನುಗ್ರಹಂದಾಗಿ ಆದ ಅಕ್ಷರ ಸೇವೆ ಅದು ಹೇಳುದು ನನ್ನ ಭಾವನೆ. ನಾನು ನಿಮಿತ್ತ ಮಾತ್ರ ಆಗಿತ್ತಿದ್ದೆ.ಮತ್ತೆ ಲೌಕಿಕ ಜೀವನದ ದಾರಿ ಬೇರೆಯೇ ಇತ್ತು. ಜೀವನದ ವಿವಿಧ ಮಜಲುಗಳಲ್ಲಿ ಕಲ್ತ ಪಾಠ ಮತ್ತೆ ಒಂದಷ್ಟು ‘ಪುಡಿ’ ಸಾಹಿತ್ಯ ಸೃಷ್ಟಿ ಮಾಡ್ಸಿತ್ತು ನನ್ನ ಕೈ ಹಿಡುದು !!! ಆದ್ರೆ ಕಾಲನ ಪೆಟ್ಟು ಸ್ವಲ್ಪ ಜಾಸ್ತಿಯೇ ಜೋರಾಗಿ ಬಿತ್ತು ನನ್ನ ಸಾಹಿತ್ಯಾಸಕ್ತಿ ಮೇಲೆ :( ಬರ್ತಾ ಬರ್ತಾ ನಾನು ಬರಿಯುದು ಕಮ್ಮಿ ಆಯ್ತು :( ಕಾರಣ ಹಲವು ಇದೀತು ಆದ್ರೆ ಫಲಿತಾಂಶ ಮಾತ್ರ ಕೆಳಮುಖ ಆಗಿ ಹೋಯ್ತು. ಮತ್ತೆ ಒಂದೆರಡು ಸರ್ತಿ ಬರಿಯುಕೆ ಪ್ರಯತ್ನ ಮಾಡಿದೆ ಆದ್ರೆ ನನ್ನ ಕೈಲಿ ಬರಿಯುಕೆ ಆದ್ದು ಬೇರೆಯೇ ಸಾಹಿತ್ಯ ಪ್ರಕಾರ !!! “ಪಯಣ” ಹೇಳುವ ಶೀರ್ಷಿಕೆ ಕೊಟ್ಟು ನನ್ನ ಬದುಕಿಲಿ ಕಂಡು, ಕೇಳಿದ್ದು, ಅನುಭವಿಸಿದ್ರ ಅಕ್ಷರಕ್ಕೆ ಇಳುಸಿದೆ…. ಎಷ್ಟೋ ಸರ್ತಿ ನನಿಗೆ ಕಾಣ್ತೆ, ಅದು ಒಂದು ಆತ್ಮ ವಿಮರ್ಶೆ(ಸ್ವಪ್ರಶಂಶೆ) ಆಗಿ ಹೋಗಿಯೇದೆ ಹೇಳಿ. “ಪಯಣ 1, 2, 3, 4″ ಭಾಗ ಬರ್ದೆ. ಒಪ್ಪಣ್ಣ.ಕಾಂ ಲಿ ಪ್ರಕಟ ಆಯ್ತು, ನನ್ನ ಬ್ಲಾಗ್ ಲಿಯೂ ಹಾಕಿಕೊಂಡೆ… ಒಂದಷ್ಟು ಜನ ಓದಿ ಬೆನ್ನು ತಟ್ಟಿದ್ವು. ಆದ್ರೆ ಬರವಣಿಗೆಯ ಓಘ ಮಾತ್ರ ಉಳುಸಿಕೊಳ್ಳುಕೆ ಆಗಲ್ಲ :( ಒಪ್ಪಣ್ಣ.ಕಾಮ್ ಲಿ ಪ್ರಕಟ ಆಗುವ ಒಳ್ಳೊಳ್ಳೆ ಪದ್ಯಂಗಳ ಓದಿ, ಅದೇ ಸ್ಪೂರ್ತಿಂದ ನಾಕು ಸಾಲು ಬರಿಯುಕೂ ಆಗಲ್ಲ ನನ್ನ ಕೈಲಿ :( ಹಠ ಹಿಡುದು ಕೂತ್ರೆ ಸ್ವಲ್ಪ ಬರಿಯುಕೆ ಆದೀತು, ಆದ್ರೆ ಬಲವಂತದ ಮಾಘಸ್ನಾನ ಒಳ್ಳೆ ಸಾಹಿತ್ಯ ಸೃಷ್ಟಿ ಮಾಡುಕೆ ಹೆಂಗೆ ಸಾಧ್ಯ ? ಯಾಕೋ ನಾನು ಸ್ವಲ್ಪ ಹಿಂದೆ ಜಾರಿದೆ ಹೇಳಿ ಕಾಣ್ತಾ  ಅದೆ :(
*************
ಸಾಹಿತ್ಯ ಸೃಷ್ಟಿಗೆ ಮೊತ್ತ ಮೊದಲು ಬೇಕಾದ್ದು ‘ಓದು’. ಎಷ್ಟು ಹೆಚ್ಚು ಓದುತ್ತೆವೋ ಅಷ್ಟು ಹೆಚ್ಚು ಬರಿಯುಕೆ ಸಾಧ್ಯ ಆಗ್ತೆ ಹೇಳುದು ನನ್ನ ಭಾವನೆ. ಆದ್ರೆ ನಾನು ಹೊಸ ಪುಸ್ತಕ ತೆಕ್ಕೊಳ್ಳದ್ದೆ ಎಷ್ಟೋ ಸಮಯ ಆಯ್ತು :( ದಿನ ನಿತ್ಯ ಪೇಪರ್ ಓದುದ್ರ ಬಿಟ್ಟು ಬೇರೆ ಯಾವುದೇ ರೀತಿಲಿ ‘ಅಕ್ಷರಭಕ್ಷಣೆ’ ಮಾಡ್ತಾ ಇಲ್ಲ ನನ್ನ ಮೆದುಳು :( ಪೇಪರ್ಲಿ ಎಂತ ಇರ್ತೆ ಮಣ್ಣಾಂಗಟ್ಟಿ ರಾಜಕೀಯ ಬಿಟ್ರೆ ? ಸಾಪ್ತಾಹಿಕ ಪುರವಣೆ ಲಿ ಬರುವ ಒಳ್ಳೊಳ್ಳೆ ಲೇಖನ, ಕತೆಗಳ ಓದುಕೆ “ವೀಕೆಂಡ್” ಬಿಡುವೇಕಲ್ಲಾ ? ಅದೂ ಸಾಧ್ಯ ಇಲ್ಲ :(
ಆಫೀಸಿಲಿ ಪುರ್ಸೊತ್ತಾಗುವಾಗ ಓದುವ ಹೇಳಿ ಕಾಣ್ತೆ  ಆದ್ರೆ ಅವಕಾಶ ಇರುದಿಲ್ಲ :( ಮೊನ್ನೆ ಯಾಕೋ ಇದ್ದಕ್ಕಿದ್ದ ಹಾಂಗೆ “e Book ಡೌನ್ಲೋಡ್ ಮಾಡಿ ಓದಿರೆ ಹೇಂಗೆ ???” ಹೇಳಿ ಕಂಡತ್ತು :) ಗೂಗಲ್ ಲಿ ಹುಡುಕಿಯಾಗುವಾಗ ಎಲ್ಲಿಯೋ ಮೂಲೆಲಿ ಸ್ವಲ್ಪ ಕನ್ನಡ ಪುಸ್ತಕಂಗಳು ಸಿಕ್ಕಿತ್ತು. ಖುಷಿಲಿ ಸೇವ್ ಮಾಡಿ ಇಟ್ಟುಕೊಂಡೆ. ಸುಮಾರು 40  ‘ಈಪುಸ್ತಕ’ ಬಂದು ಬಿತ್ತು ಕಂಪ್ಯೂಟರಿಗೆ. ಸ್ಕ್ರೀನ್ ಲಿ ಓದುದು ಅಷ್ಟು ತೃಪ್ತಿ ಕೊಡುದಿಲ್ಲ, ಪುಸ್ತಕ ಕೈಲಿ ಹಿಡ್ಕೊಂಡು ಪುಟ ತಿರುಗಿಸಿಕೊಂಡು ಓದುವಾಗ ಸಿಕ್ಕುವ ಖುಷಿ ಇರುದಿಲ್ಲ, ಆದ್ರೆ ಏನೋ ಒಂದು ಇಷ್ಟು ಅಕ್ಷರ ಕಣ್ಣಿನೊಳಗೆ ತುಂಬ್ಸಿಕೊಳ್ಳುವೋದು ಹೇಳುದೇ ಸಮಾಧಾನ :) ಶ್ರದ್ಧೆಂದ ಪುಸ್ತಕ ಸ್ಕ್ಯಾನ್ ಮಾಡಿ ಹಾಕಿದ ಆ ಪುಣ್ಯಾತ್ಮನಿಗೆ ಎಷ್ಟು ಥ್ಯಾಂಕ್ಸ್ ಹೇಳಿರೂ ಸಾಲ್ದು.
***************
ಶಿವರಾಮ ಕಾರಂತಜ್ಜನ “ಕುಡಿಯರ ಕೂಸು” ಹೇಳುವ ‘ಈಪುಸ್ತಕ’ ಕಂಪ್ಯೂಟರ್ಲಿ ಬಿಡುಸಿ ಕೂತೆ. ಮೊದಲು ನಾನು ಪಿಯುಸಿ ಲಿ ಇರುವಾಗ ಕಾರಂತಜ್ಜನ “ಬೆಟ್ಟದ ಜೀವ” ಕಾದಂಬರಿಯ ವಿಮರ್ಶಾ ಸ್ಪರ್ಧೆ ಇತ್ತು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಲ್ಲಿ. ನಾನೂ ಸೇರಿತ್ತಿದ್ದೆ, ಜಿಲ್ಲಾ ಮಟ್ಟಲ್ಲಿ ಫಸ್ಟ್ ಬಂದಿತ್ತು :) ಅವಾಗ ನಾನು ಬರದ ವಿಮರ್ಶೆಯ ಹಾಂಗೆ ಈಗ ಬರ್ದೇನು ಹೇಳುವ ಧೈರ್ಯ ಇಲ್ಲ :( ಆದ್ರೂ ಓದಿದ ಮೇಲೆ ನಾಕು ಸಾಲು ಬರಿಯುವ ಹೇಳಿ ಕಂಡತ್ತು.
ಕಾರಂತಜ್ಜನ ಬರವಣಿಗೆಯ ಶೈಲಿ ತುಂಬಾ ವಿಭಿನ್ನ. ಎಷ್ಟೊಂದು ಸರ್ತಿ ಅವು ಉಪಯೊಗಿಸುವ ಶಬ್ದಂಗಳು ತಲೆ ಮೇಲೆ ಹಾರಿ ಹೋಗ್ತೆ :) ಮೂಕಜ್ಜಿಯ ಕನಸು ಪುಸ್ತಕ ಓಡುಕೆ ಕೂತಾಗುವಾಗ ಹಾಂಗೆ ಆಗಿತ್ತು. ಹತ್ತು ಹದಿನೈದು ಪುಟ ಓದಿ ಆಗುವಾಗ ಹಿಂದೆ ಮೊದಲು ಎಂತ ಓದಿತ್ತಿದ್ದೆ ಹೇಳುದೆ ಮರ್ತು ಹೋಗಿತ್ತು :( (ಇದು ನನ್ನ ವೈಯುಕ್ತಿಕ ಅಭಿಪ್ರಾಯ)
ಈ ಪುಸ್ತಕವೂ ಹಾಂಗೆಯೋ ? ಹೇಳುವ ಆತಂಕ ಇತ್ತು ಆದ್ರೆ ಅಷ್ಟು ಹೈ ಲೆವೆಲ್ ಇರಲ್ಲ ನನ್ನ ಪುಣ್ಯಕ್ಕೆ :)
ಕಾರಂತಜ್ಜನ ಕಾದಂಬರಿಗಳು ಆತ್ಮೀಯ ಅನ್ಸುಕೆ ಕಾರಣ ಹಲವು. ಕಂಡು, ಅನುಭವಿಸಿದ ಜೀವನ ಸಾರವ ಮಾತ್ರ ಅಕ್ಷರರೂಪಕ್ಕೆ ಇಳುಸುದು ಕಾರಂತಜ್ಜನ ಸ್ಪೆಷಾಲಿಟಿ. ಅದ್ರಲ್ಲಿ ಸ್ವಲ್ಪ ಕಾಲ್ಪನಿಕ ಇದ್ರೂ ಬಹುತೇಕ ಸತ್ಯವೇ. ಇನ್ನೊಂದು, ಕಾರಂತಜ್ಜನ ‘ಕಾಲ’. ಸ್ವಾತಂತ್ರಪೂರ್ವ+ಸ್ವಾತಂತ್ರ್ಯಾನಂತರದ ಭಾರತ ಅವರ ಬರಹದ ಅಂಗಳ. ಗ್ರಾಮೀಣ ಭಾಗದ ಜನ, ಜೀವನ ಅವರ ಕಾದಂಬರಿಗಳ ದೇಹ, ಆತ್ಮ ಆದ ಕಾರಣ ಅದು ಅತ್ಯಂತ ಹೃದ್ಯ ಆಗ್ತೆ…. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಆಚರಣೆಗಳ ಬಗ್ಗೆ ಕೊಡುವ ಸವಿಸ್ತಾರ ವಿವರಣೆ, ವಿಶ್ಲೇಷಣೆ ಮಾಡುವ ರೀತಿಗೆ ಕಾರಂತಜ್ಜನಿಗೆ ಕಾರಂತಜ್ಜನೇ ಸಾಟಿ…. ಕಾಲ್ನಡಿಗೆಲಿ ದಕ್ಷಿಣಕನ್ನಡ, ಮಲೆನಾಡುಸೀಮೆಯ ಮೂಲೆ ಮೂಲೆ ಸುತ್ತಿ ಕಂಡ ಜೀವನಾಮೃತ ಸಾರವ ಅಕ್ಷರಕ್ಕೆ ಇಳುಸಿದ ಸಾಧಕ ಕಾರಂತಜ್ಜ. “ಬೆಟ್ಟದ ಜೀವ” ಕಾದಂಬರಿ ಒಳ್ಳೆ ಉದಾಹರಣೆ. “ಕುಡಿಯರ ಕೂಸು” ಇನ್ನೊಂದು ಪುಸ್ತಕ.
ದಕ್ಷಿಣ ಕನ್ನಡ ಜಿಲ್ಲೆಯ ದಾಟಿ ಮುಂಬೈ, ಡೆಲ್ಲಿ ಇತ್ಯಾದಿ ಉತ್ತರ ಭಾರತದ ಚಿತ್ರಣ, ಸಮುದ್ರ ದಾಟಿ ಪೂರ್ವ, ಪಶ್ಚಿಮ ಪ್ರಪಂಚದ ವಿಶಾಲ ನೋಟ, ವಿಜ್ಞಾನ, ಯಕ್ಷಗಾನ, ಶೈಕ್ಷಣಿಕ ವಿಭಾಗ, ಹೀಂಗೆ ಕಾರಂತಜ್ಜ ಕೈ ಆಡ್ಸದ್ದ ಜಾಗೆ ಇಲ್ಲ…
*****************
“ಕುಡಿಯರ ಕೂಸು” ಕಾದಂಬರಿಯ ಮುಖ್ಯ ಪಾತ್ರವರ್ಗ ಮಲೆ ಕುಡಿಯರು. ದಕ್ಷಿಣ ಕನ್ನಡ ಜಿಲ್ಲೆಯ ದಟ್ಟ ಕಾಡಿನ ಒಳಗೆ, ಆಧುನಿಕತೆಯ ಸೋಂಕು ಇಲ್ಲದ್ದೆ ಬದುಕಿಕೊಂಡು ಇದ್ದ ಮುಗ್ಧ ಜನಂಗಳ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಕಾರಂತಜ್ಜನ ಕಣ್ಣಿಗೆ/ಪೆನ್ನಿಗೆ ಸಿಕ್ಕಿಹಾಕಿಕೊಂಡ ಕುಡಿಯರು ಇರುವ ಜಾಗೆಯ ವ್ಯಾಪ್ತಿ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದ ಮಧ್ಯೆ ಇರುವ ಯಾವುದೋ ಒಂದು ಕಾಡಿನ ಮೂಲೆ. ನೆರಿಯ, ಕಾರ್ಕಳ, ಸಕಲೇಶಪುರವೂ ಮಧ್ಯೆ ಮಧ್ಯೆ ಬಂದು ಹೋಗ್ತೆ. ಕಾದಂಬರಿಯ ಕಾಲ, ದೇಶಕ್ಕೆ ಸ್ವಾತಂತ್ರ್ಯ ಬರುಕೂ ಮೊದಲಾಣದ್ದು.
ಕಿರಿಮಲೆ, ಹಿರಿಮಲೆಗಳ ಸುತ್ತ ಮುತ್ತ ಇರುವ ಕುಡಿಯರ ಬದುಕ್ಕು ಹೆಂಗೆ ಇತ್ತು ಹೇಳುವ ಕತೆ ಓದುತ್ತಾ ಹೋದ್ರೆ ನಮ್ಮ ಮನಸ್ಸು ಆ ಜಾಗೆಗೆ ಹೋಗ್ತೆ. ಮಲೆಯ ಒಂದು ಮೂಲೆಲಿ ನಿತ್ತುಕೊಂಡು ನಾವು ಕುಡಿಯರ ಬಾಳ್ವೆಯ ಒಳಗೆ ಹೊರಗೆ ನೋಡಿದ ಹಾಂಗೆ ಆಗ್ತೆ.
ಹತ್ತು ಮೂವತ್ತು ಸಂಸಾರ ಇರುವ ಕುಡಿಯರ ಕೂಟಕ್ಕೆ ಕೆಂಚ ಹೇಳುವ ಒಂದು ಅಜ್ಜ ಗುರಿಕ್ಕಾರ. ಆ ಮಲೆಗೆ ಹತ್ರವೆ ಇರುವ ಇನ್ನೊಂದು ಮಳೆ ಹಿರಿಮಲೆ. ಅಲ್ಲಿ ಇನ್ನೊಂದಷ್ಟು ಕುಡಿಯರ ಸಂಸಾರ ಅದೆ. ಎರಡೂ ಮಲೆಯ ಕುಡಿಯರು ನಂಬಿಕೊಂಡು ಬಂದ ದೈವ ‘ಕಲ್ಕುಡ’. ಕುಡಿಯರ ಬದುಕ್ಕಿನ ಕಾಯುದು ‘ಕಲ್ಕುಡ’ ಹೇಳುವ ದೃಢ ನಂಬಿಕೆ ಅವರದ್ದು. ಕುಡಿಯರ ಬೇನೆ ಬೆಚ್ಚರಕ್ಕೆ, ರೋಗ ರುಜಿನಕ್ಕೆ ಮದ್ದು ಕಲ್ಕುಡನಿಗೆ ಹರಕ್ಕೆ.
ಕುಡಿಯರು ಜೀವನೋಪಾಯಕ್ಕೆ ಬೇಕಾಗಿ ಆರಿಸಿಕೊಂಡದ್ದು ಕೃಷಿ. ಕಾಡು ಕಡುದು, ಸುಟ್ಟು, ನೆಲ ಗರ್ಪಿ, ತಟ್ಟು ಮಾಡಿ, ಭತ್ತವೋ ರಾಗಿಯೋ ಬಿತ್ತಿ ಬೆಲೆ ತೆಗಿಯುದು ಅವರ ಕ್ರಮ. ಮಳೆಗಾಲಲ್ಲಿ ಒಂದೇ ಸಮ ಬೀಳುವ ಮಳೆ, ಮೈ ಕೊರಿವ ಚಳಿ, ಮಳೆಗಾಲ ಕಳುದ ಮೇಲೆ ಇವರ ಕೃಷಿ ಶುರು. ವರ್ಷಕ್ಕೆ ಒಂದೇ ಬೆಳೆ. ಬಾಕಿ ಒಳುದ ಸಮಯಲ್ಲಿ ಬೇಟೆ. ಉರುಳು ಇಡುದು, ಕರ್ಪು ತೆಗಿಯುದು ಅವರ ರಕ್ತಲ್ಲೇ ಬಂದ ಕಲೆ. ಮನಸ್ಸು ಮಾಡಿರೆ ಆನೆಯನ್ನೂ ಕರ್ಪಿಲಿ ಹಿಡುದಾವು ಕುಡಿಯಂಗಳು.
ವಸ್ತ್ರ, ಉಪ್ಪು, ಹೊಗೆಸೊಪ್ಪು ಇತ್ಯಾದಿ ಅವಶ್ಯಕತೆಗಳಿಗೆ ಮಾತ್ರ ಹೊರ ಜಗತ್ತಿನ ಸಂಪರ್ಕ. ಮಲೆ ತುಂಬಾ ಬೆಳುದು ಒಳ್ಳೆ ಫಸಲು ಕೊಡುವ ಏಲಕ್ಕಿ ಬುಡ ಅದೆ. ಲಾಭ ತಂದುಕೊಡುವ ಏಲಕ್ಕಿ ಮೇಲೆ ‘ನಾಗರಿಕ’ರ ಕಣ್ಣು ಬೀಳುದು ಸಹಜವೇ ಆಲ್ವಾ ? ಹಾಂಗಾಗಿ ಅಲ್ಲಿ ಒಬ್ಬ ಜೈನ ಯಜಮಾನನೂ ಇದ್ದಾನೆ. ಕುಡಿಯರು ಆ ಧಣಿಗಳ ಒಕ್ಕಲು. ಕುಡಿಯರ ಹತ್ರ ಕೆಲಸ ಮಾಡ್ಸುದು, ಮಲೆಯ ಏಲಕ್ಕಿ ಕೊಯ್ಕೊಂಡು ಹೋಗಿ ಮಾರುದು, ವರ್ಷಕ್ಕೆ ಒಂದು ಸರ್ತಿ ಆಗುವ ಜಾತ್ರೆ ಸಮಯಲ್ಲಿ ಕುಡಿಯರಿಗೆ ಒಂದು ಜೊತೆ ವಸ್ತ್ರ, ಉಪ್ಪು, ಹೊಗೆಸೊಪ್ಪು ಕೊಡುದು ಬಿಟ್ರೆ ಬೇರೆ ಯಾವುದೇ ರೀತಿಲಿ ತಲೆ ಕೆಡಿಸಿಕೊಳ್ಳುವ ಜನ ಅಲ್ಲ ಆ ಜೈನ ಧಣಿ.
ಕಾಲ ಚಕ್ರ ತಿರುಗಿ, ಜೈನರ ಕೈಲಿ ಇದ್ದ ಮಲೆಯ ಒಡೆತನ ಒಬ್ಬ ಬ್ರಾಹ್ಮಣನ ಕೈಗೆ ಸೇರ್ತೆ. ಮಲೆಲಿ ತುಂಬಾ ಬದಲಾವಣೆಯೂ ಆಗ್ತೆ. ಹೊಸ ಬ್ರಾಹ್ಮಣ ಧಣಿ ಮಲೆಲಿಯೇ ಒಂದು ಗುಡಿಸಲು ಕಟ್ಟಿಕೊಂಡು ವರ್ಷದ ಕೆಲವು ತಿಂಗಳು ಉಳಿಯುದು, ಕುಡಿಯರ ಒಟ್ಟಿಗೆ ಬದ್ಕುದು, ಹೀಂಗೆ ದಿನ ಸಾಗ್ತೆ. ಆದ್ರೆ ಹೊಸ ಧಣಿಗೆ ಬರೇ ಏಲಕ್ಕಿ ಮೇಲೆ ಮಾತ್ರ ಅಲ್ಲ ಕಣ್ಣು. ಕುಡಿಯರ ಹೆಣ್ಣುಗಳ ಮೇಲೂ.
ಇತ್ತ ಕುಡಿಯರ ನಿತ್ಯ ಜೀವನಲ್ಲಿ ಎಷ್ಟೋ ಸಂಗತಿ ಆಗಿ ಹೋಗ್ತೆ. ಗುರಿಕ್ಕಾರ ಕೆಂಚನಿಗೆ ಪ್ರಾಯ ಆಗ್ತಾ ಬರ್ತೆ, ಕೆಂಚನ ಮಗ, ಸೊಸೆ ಸತ್ತು ಪುಳ್ಳಿ ಮಾತ್ರ ಒಳಿತ್ತೆ. ಕಲ್ಕುಡ ಮಗ ಸೊಸೆಯ ಬಲಿ ತೆಕ್ಕೊಂಡದೆ ಹೇಳುದು ಅಜ್ಜ ಕೆಂಚನ ಅಭಿಪ್ರಾಯ, ನಂಬಿಕೆ. ಕೆಂಚ ಹೆದರಿ ಸುಬ್ರಹ್ಮಣ್ಯಕ್ಕೆ ಹೋಗಿ ಸುಬ್ಬಪ್ಪನ ಕಾಲಿಗೆ ಅಡ್ಡ ಬೀಳ್ತೆ . ಕುಡಿಯರ ಆದಿ ದೈವವಾದ ಮಲೆರಾಯನಿಗೂ ಹರಕ್ಕೆ ಹೊರ್ತೆ. ಪುಳ್ಳಿಯ ಉಳುಸಿಕೊಳ್ಳುಕೆ. ಆದ್ರೆ ಕಾಲ ಕಾಲಕ್ಕೆ ಸಲ್ಲುವೇಕಾದ ನೇಮ, ಕೋಲ ಕೊಡದ್ರೆ ಕಲ್ಕುಡ ಸುಮ್ಮನೆ ಕೂರುಕಿಲ್ಲ ಹೇಳುದು ಕುಡಿಯರ ಮಾತು. ಹಿರಿಮಲೆ ಕಿರಿಮಲೆಯ ಕುಡಿಯರು ಒಟ್ಟಿಗೆ ಸೇರದ್ರೆ ಕೋಲ ಆಗುದಿಲ್ಲ. ಹಿರಿಮಲೆಲಿ ಧಣಿಗಳು ಬದಲಾಗಿ ಪುರ್ಬುಗಳ ಕಾರುಬಾರು ಶುರು ಆಗಿಯೆದೆ. ಪುರ್ಬುಗಳು ಕಲ್ಕುಡನ ನಂಬುದಿಲ್ಲ. ಆದ್ರೆ ಹಿರಿಮಲೆಯ ಕುಡಿಯರ ಮನ ಒಲಿಸಿ ಎಲ್ಲವೂ ಸೇರಿ ಒಂದು ಕೋಲ ಕೊಡ್ತಾವೆ.
ಕೆಂಚನಿಗೆ ಅದ್ರ ಪುಳ್ಳಿಯೇ ಮುಂದಾಣ ಗುರಿಕ್ಕಾರ ಆಗ್ವೆಕು ಹೇಳಿ ಆಸೆ. ಆದ್ರೆ ಕುಡಿಯರಲ್ಲಿ ಬೇರೆ ಕೆಲವು ಜನಕ್ಕೂ ಗುರಿಕ್ಕಾರ ಆಗ್ವೇಕು ಹೇಳಿ ಮನಸ್ಸಿನ ಮೂಲೆಲಿ ಆಸೆ ಇರ್ತೆ. ಕೆಂಚನ ಪುಳ್ಳಿ ಕರಿಯ ಸಣ್ಣ ಆದ ಕಾರಣ, ತುಕ್ರ, ತಿಮ್ಮ, ಇಬ್ಬರಿಗೂ ಗುರಿಕ್ಕಾರ ಆದ್ರೆ ಆದೀತು ಹೇಳುವ ಆಸೆ. ಕಲ್ಕುಡನ ಕೋಲಲ್ಲಿ ಕಲ್ಕುಡ ಮೈಮೇಲೆ ಬಂದಾಗುವಾಗ ಕೇಳಿಯೂ ಆಯ್ತು, ಕರಿಯನೇ ಮುಂದಾಣ  ಗುರಿಕ್ಕಾರ ಆಗ್ವೆಕು ಹೇಳಿ ಕಲ್ಕುಡನ ಬಾಯಿಲಿ ಬಂದೂ ಆಯ್ತು. ಆದ್ರೆ ಕತೆ ಇಲ್ಲಿಂದ ಮತ್ತೆ ಪೂರ್ತಿ ‘ಚೇಂಜ್’ ಆಗ್ತೆ. ಗುರಿಕ್ಕಾರಿಕೆಗೆ ಬೇಕಾಗಿ ಕುಡಿಯರ ಗುಂಪಿಲಿ ಎಂತ ಎಲ್ಲಾ ಆಗಿ ಹೋಗ್ತೆ, ಕೆಂಚ ಸತ್ತ ಮೇಲೆ ಯಾರು ಗುರಿಕ್ಕಾರ ಆಗ್ತಾವೆ ? ತುಂಬಾ ಕುತೂಹಲಕಾರಿ ಆಗಿ ಮುಂದುವರಿತ್ತೆ ಕತೆ.
ಕುಡಿಯರ ಹೊಸ ಧಣಿ ತಿರುಮಲೇಶ್ವರ ಭಟ್ರ ಚಿತ್ರಣ, ಆಗಾನ ಕಾಲಲ್ಲಿ ಇದ್ದ “ಧಣಿ-ಒಕ್ಕಲು” ಸಂಬಂಧಗಳ ವಿವರಣೆ ಓದಿರೆ ನನ್ನ ಅಜ್ಜ, ಅಪ್ಪ ಹೇಳಿಕೊಂಡಿದ್ದ ಹಳೆ ಕತೆಗಳೆಲ್ಲ ನೆನಪ್ಪಾಗ್ತೆ. ಈಗಲೂ ಕೆಲವು ಕಡೆ ಬ್ರಾಹ್ಮಣರು ಆಳುಗಳ(ಶೂದ್ರ) ಹೆಣ್ಣುಗಳ ಇಟ್ಟುಕೊಂಡ ಸುದ್ದಿ ಅಲ್ಲಿ ಇಲ್ಲಿ ಕೇಳ್ತಾ ಇರ್ತೆ. ಹೊಟ್ಟೆ ಪಾಡಿಗೋ ಅಥವಾ ಧಣಿಗಳ ಹೆದರಿಕೆಗೊ ಅಥವಾ ನಾಕು ಕಾಸು ಸಿಕ್ಕುತ್ತೆ ಹೇಳಿಯೋ ಹೆಣ್ಣುಗಳು ಧಣಿಗಳ ಹಾಸಿಗೆ ಸೇರುದರ ಓದಿ ಆಗುವಾಗ ವ್ಯವಸ್ತೆಯ ಮೇಲೆ ಆಕ್ರೋಶ ಬರ್ತೆ.
ಕೆಂಚನ ಪುಳ್ಳಿ ಕರಿಯನಿಗೆ ಬೇಟೆ ಹುಚ್ಚು. ಆದ್ರೆ ಕೊಂದು ತಿನ್ನುದಕ್ಕಿಂತಲೂ ಹಿಡುದು ಸಾಂಕುವ ಆಸೆ. ಆನೆ ಹಿಡುದು ಸಾಂಕಿ ಮಾವುತ ಆಗ್ವೆಕು ಹೇಳುವ ಕನಸು. ಕರಿಯನ ಬಾಲ್ಯ, ಯವ್ವನ ಎಲ್ಲದರ ಚಿತ್ರಣ, ಬೇಟೆ ಹುಚ್ಚು, ಪ್ರಾಣಿ ಪ್ರೇಮ, ಕೃಷಿ ಸಾಹಸಗಳು, ಅನಿವಾರ್ಯ ಕಾರಣಂದಾಗಿ ಊರು ಬಿಟ್ಟು ಹೋಗ್ವೆಕಾದ ಪರಿಸ್ಥಿತಿ, ಎಲ್ಲವನ್ನೂ ಕಾರಂತಜ್ಜ ಅಕ್ಷರಲ್ಲಿ ಸೆರೆ ಹಿಡಿಯುವ ಕೆಲಸ ಮಾಡ್ತಾ ಮುಂದೆ ಹೋಗ್ತಾ ಇದ್ರೆ ನಾವೂ ಅವರ ಒಟ್ಟಿಗೇ ಕಿರಿಮಲೆ, ಹಿರಿಮಲೆಲಿ ಓಡಾಡಿದ ಅನುಭವ ಸಿಕ್ಕುತ್ತೆ.
ಕತೆಲಿ ಬರುವ ಇತರ ಪಾತ್ರಗಳಿಗೂ ಕಾರಂತಜ್ಜ ತುಂಬಾ ನ್ಯಾಯ ಕೊಟ್ಟಿದ್ದಾವೆ. ಎರಡು ತಲೆಮಾರಿಲಿ ಕುಡಿಯರ ಬದುಕಿಲಿ ಆಗಿಹೋಗುವ ಬದಲಾವಣೆ, ಆಸಕ್ತಿದಾಯಕ ಬೆಳವಣಿಗೆ ನಮ್ಮ ಮನಸ್ಸಿನ ಹಿಡಿದು ಇರ್ಸುತ್ತೆ. ಕತೆಲಿ ಬರುವ ನರಭಕ್ಷಕ ಹುಲಿಯ ಕತೆ, ಅದ್ರ ಬೇಟೆ ಆಡುವ ಸಂದರ್ಭ ಜಿಮ್ ಕಾರ್ಬೆಟ್, ಕೆನತ್ ಆಂಡೆರ್ಸನ್ ಇತ್ಯಾದಿ ಬ್ರಿಟಿಷರ ಬೇಟೆ ಕತೆಗಳ ನೆನಪ್ಪು ತರ್ತೆ.
ಪ್ರಕೃತಿಯ ವರ್ಣನೆಲಿ ಕಾರಂತಜ್ಜ ಯಾವತ್ತೂ ಹಿಂದೆ ಬಿದ್ದ ಜನ ಅಲ್ಲ. ಪಶ್ಚಿಮ ಘಟ್ಟಗಳ ಸಂಪೂರ್ಣ ಚಿತ್ರಣ ಕಾದಂಬರಿ ಉದ್ದಕ್ಕೂ ಅದೆ. ಎಷ್ಟೋ ಸರ್ತಿ ನಮ್ಮ ದಕ್ಷಿಣ ಕನ್ನಡಲ್ಲಿ ಅಷ್ಟು ದಟ್ಟ ಕಾಡು ಇತ್ತೋ ? ಹೇಳಿ ಆಶ್ಚರ್ಯ ಆಗ್ತೆ. ಛೆ, ಈಗ ಆ ಕಾಡು ಎಲ್ಲಾ ಇಲ್ವಲ್ಲಾ, ನಾವು ಕಳಕೊಂಡು ಬಿಟ್ವಲ್ಲಾ ಹೇಳಿ ಬೇಜಾರೂ ಆಗ್ತೆ. ಆ ಸೌಂದರ್ಯ ಕಂಡು ಖುಷಿಪಟ್ಟ ಕಾರಂತಜ್ಜ ಈಗ ಇಲ್ಲ. ಆದ್ರೆ ಅವರ ಬರಹಗಳ ನಾವು ಓದಿ ಖುಷಿಪಡುದು ಮಾತ್ರ ದಕ್ಕಿಯೇದೆ ನವುಗೆ.
**************************
ಇನ್ನೊಂದು ಪುಸ್ತಕ ಹಿಡ್ಕೊಂಡಿದ್ದೇನೆ ಕಾರಂತಜ್ಜನದ್ದು, “ಚಿಗುರಿದ ಕನಸು”. ಅದನ್ನೂ ಓದಿ ಮುಗಿಸಿದ ಮೇಲೆ ಇನ್ನೊಂದಿಷ್ಟು ಬರಿಯುಕೆ ಸಾಧ್ಯ ಆಗ್ತೋ ಏನೋ ?
ಒಂದೇ ಪೆಟ್ಟಿಗೆ ಪೂರ್ತಿ ಪುಸ್ತಕ ಓದಿ ಮುಗುಸುವ ಭಾಗ್ಯ ಇಲ್ಲ ಸಧ್ಯಕ್ಕೆ :( ಸಮಯ ಸಿಕ್ಕಿಯಾಗುವಾಗ ಸ್ವಲ್ಪ ಸ್ವಲ್ಪವೇ ಓದಿ ತೃಪ್ತಿಪಡ್ವೆಕಷ್ಟೇ :( ಮೂಡಿಗೆರೆಲಿ ಬಿಎಸ್ಸಿ ಮಾಡುವಾಗ ಲೈಬ್ರರಿಲಿ ಇದ್ದ ಒಳ್ಳೊಳ್ಳೆ ಕನ್ನಡ ಪುಸ್ತಕಗಳ ಓದಿದ್ದು ನೆನಪ್ಪಾಗ್ತೆ. ಅವಾಗ ದಿನಕ್ಕೆ ಆರು ಏಳು ಘಂಟೆ ಕಾದಂಬರಿ ಓದಿಕೊಂಡು ಇರ್ತಿದ್ದೆ (ಪರೀಕ್ಷೆ ಇಲ್ಲದ್ರೆ ಪಾಠ ಪುಸ್ತಕ ಓದುವ ದುರಭ್ಯಾಸ ನನಿಗೆ ಇಲ್ಲ !!!) ಕ್ಲಾಸ್ ಲಿ ನೋಟ್ಸ್ ಮಧ್ಯೆ ಇಟ್ಟುಕೊಂಡೂ ಕಾದಂಬರಿ ಓದಿ ಮುಗ್ಸಿದ ದಿನ ಇತ್ತು ಅವಾಗ. ಈಗ ಹಾಂಗೆ ಓದುವೇಕು ಹೇಳಿ ಆಸೆ ಆಗ್ತೆ ಆದ್ರೆ ಎಂತ ಮಾಡುದು ? ಆಗುದಿಲ್ಲ. ಮುಂದೊಂದು ದಿನ ಬಂದೀತು, ನಾನು ದಿನಕ್ಕೆ ಎಂಟತ್ತು ಘಂಟೆ ಬರೀ ಕಾದಂಬರಿ, ಒಳ್ಳೊಳ್ಳೆ ಪುಸ್ತಕ ಓದಿಕೊಂಡು, ಆಸಕ್ತರ ಹತ್ರ ಆ ಪುಸ್ತಕಗಳ ಬಗ್ಗೆ ಚರ್ಚೆ ಮಾಡಿಕೊಂಡು ಇರುವ ದಿನ. ಕಾಯ್ತಾ ಇದ್ದೇನೆ……….

Thursday, August 9, 2012

ಪಯಣ 4

ಎಷ್ಟೋ ತಿಂಗಳು ಆದ ಮೇಲೆ ಮತ್ತೆ ಬರಿಯುಕೆ ಕೂತಿದ್ದೇನೆ..... ಪ್ರತಿ ಲೇಖನದ ಮಧ್ಯೆಯೂ ತುಂಬಾ ದಿನದ ಅಂತರ.... ಇಷ್ಟೊಂದು ದಿನಲ್ಲಿ ಅನುಭವಿಸಿದ ಕಷ್ಟ ಸುಖಂಗಳು, ಕಲ್ತ ಜೀವನದ ಪಾಠಗಳು ಎಲ್ಲವೂ ಕಣ್ಣ ಮುಂದೆ ಬಂದು ಕೊಣಿತ್ತಾ ಇದ್ರೆ ಮಾತ್ರ ಮನದ ಭಾವಗಳು ಅಕ್ಷರ ರೂಪಕ್ಕೆ ಇಳಿಯುಕೆ ಸಾಧ್ಯ :) ಮನುಷ್ಯನ ದೇಹ, ಮನಸ್ಸು ಎಷ್ಟು ವಿಚಿತ್ರ ಹೇಳಿರೆ, ನಂಬುಕೆ ಸಾಧ್ಯ ಆಗುದಿಲ್ಲ..... ಮನುಷ್ಯನ ಮೆದುಳು ಯಾವ ಕಂಪ್ಯೂಟರ್ಗೂ ಕಮ್ಮಿ ಇಲ್ಲ.... ನಮ್ಮ ಜೀವಮಾನದ ಪೂರ್ತಿ ಘಟನಾವಳಿಗಳ ಕಂಪ್ಯೂಟರ್ಲಿ ದಾಖಲಿಸಿ ಇಟ್ಟುಕೊಳ್ಳುಕೆ ಎಷ್ಟು ಜಿಬಿ ಹಾರ್ಡ್ ಡಿಸ್ಕ್ ಇದ್ರೂ ಸಾಲ್ದು, ಆದ್ರೆ ನಮ್ಮ ಮೆದುಳಿಲಿ ಅದೆಲ್ಲವೂ ಡಿಟ್ಟೋ ದಾಖಲಾಗಿರ್ತೆ :) ದಿನ ಕಳುದು ಹೋಗ್ತೆ, ಜನ ಅಳುದು ಹೋಗ್ತಾವೆ ಆದ್ರೆ ನೆನಪ್ಪು ಮಾತ್ರ ಶಾಶ್ವತ ಆಲ್ವಾ ???

****************
ಬದುಕಿನ ಓಟ ಎಷ್ಟು ವೇಗವಾಗಿ ಆಗ್ತೆ ಹೇಳಿರೆ ಅದ್ರ ಎದುರು ಒಲಿಂಪಿಕ್ಸ್ ಲಿ ಚಿನ್ನ ಗೆದ್ದ ಓಟಗಾರನೂ ಸೋಲುವೇಕು :) ಕಣ್ಣು ಮುಚ್ಚಿ ತೆಗಿಯುವಷ್ಟ್ರ ಒಳಗೆ ಎಲ್ಲಿಂದ ಎಲ್ಲಿಗೋ ಹೋಗಿರ್ತೆ :) ಮೊನ್ನೆ ಇತ್ತ ಗಿರಿನಗರ ಮಠಲ್ಲಿ ಕೇಳಿದ ತಾಳಮದ್ದಲೆ ನೆನಪ್ಪಾಗ್ತೆ :) ನಳ ದಮಯಂತಿ ಪ್ರಸಂಗ :) ದಮಯಂತಿಯ ಪುನರ್ ಸ್ವಯಂವರಕ್ಕೆ ನಳ ಬಾಹುಕನ ವೇಷಲ್ಲಿ ಋತುಪರ್ಣನ ಒಟ್ಟಿಗೆ ರಥಲ್ಲಿ ಹೋಗ್ತಾ ಇರುವಾಗ, ಋತುಪರ್ಣ ಮಹಾರಾಜನ ಅಂಗವಸ್ತ್ರ ಹಾರಿ ಹೋಗ್ತಂತೆ. "ಬಾಹುಕ ಒಂದು ಕ್ಷಣ ರಥ ನಿಲ್ಸು, ಕೆಳಗಿಳಿದು ನನ್ನ ಅಂಗವಸ್ತ್ರ ತೆಕ್ಕೊತ್ತೇನೆ" ಹೇಳಿ ಋತುಪರ್ಣ ಹೇಳಿಯಾಗುವಾಗ ಬಾಹುಕ ಹೇಳ್ತಾನಂತೆ, "ನಾವು ಆ ಅಂಗವಸ್ತ್ರ ಬಿದ್ದ ಜಾಗೆಂದ ಎಷ್ಟೋ ಯೋಜನ ದಾಟಿ ಮುಂದೆ ಬಂದಾಗಿಯೇದೆ". ನಮ್ಮ ಎಲ್ಲರ ಬದುಕು ಕೂಡಾ ಹಾಂಗೆ ಹೇಳಿ ಅನ್ಸುತ್ತೆ :) "ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ನಾವು ಕಳ್ಕೊಂಡಿದ್ದೇವೆ, ಅದು ಮತ್ತೆ ಬೇಕು" ಹೇಳಿ ನವುಗೆ ಅನ್ಸುವ ಹೊತ್ತಿಗೆ ನಾವು ತುಂಬಾ ದೂರ ಹೋಗಿ ಆಗಿರ್ತೆ :( ಮತ್ತೆ ಅದ್ರ ಪಡ್ಕೊಳ್ಳುಕೆ ಸಾಧ್ಯವೇ ಇಲ್ಲದ್ದಷ್ಟು ದೂರ !!!!!

ನಳನ ವಿಷಯ ಬಂದಾಗ ನನಿಗೆ ಮತ್ತೆ ನನ್ನ ಅಜ್ಜನ ನೆನಪ್ಪಾಗ್ತೆ..... ನಾನು ಸಣ್ಣಾಗಿರುವಾಗ ಪ್ರತಿ ದಿನ ಅಜ್ಜ ನನಿಗೆ ಕಥೆ ಹೇಳ್ತಾ ಇತ್ತಿದ್ರು.... ರಾಮಾಯಣ, ಮಹಾಭಾರತದ ಕತೆಗಳೇ ಜಾಸ್ತಿ..... ನಳನ ಕತೆಯನ್ನೂ ಹೇಳಿತ್ತಿದ್ರು ಅಜ್ಜ..... ಅಜ್ಜನ ಕಥೆ ಹೇಳುವ ರೀತಿಯೇ ಚಂದ :) ಮುಖ್ಯ ಕತೆಯೊಟ್ಟಿಗೆ ಬರುವ ಉಪಕತೆ, ಪಾತ್ರ ವರ್ಣನೆ, ಪ್ರತಿಯೊಂದು ಪಾತ್ರವೂ ಕಣ್ಣಿಗೆ ಕಟ್ಟುವ ಹಾಂಗೆ ಕತೆ ಹೇಳ್ತಿದ್ದದ್ದು ಹೆಂಗೆ ಮರಿಯುಕೆ ಸಾಧ್ಯ ? ರಾಮಾಯಣ ಅಥವಾ ಮಹಾಭಾರತ ಕತೆ ಶುರುವಾಯ್ತು ಹೇಳಿರೆ ಸಾಕು, ತಿಂಗಳಾನುಗಟ್ಟಲೆ ನನಿಗೆ ಅದೆ ಗುಂಗು :) ಅಜ್ಜ ಹೋದಲ್ಲಿ ಬಂದಲ್ಲಿ ಎಲ್ಲಾ "ಕತೆ ಹೇಳಿ ಅಜ್ಜಾ" ಹೇಳಿ ಅಜ್ಜನ ಬೆನ್ನ ಹಿಂದೆಯೇ ಇರ್ತಿದ್ದೆ :) ಅಜ್ಜ ಚಿಟ್ಟೆಲಿ ಕೂತು ಅಡಿಕ್ಕೆ ಸಜ್ಜಿ ಮಾಡುವಾಗ ನಾನೂ ಅಲ್ಲಿಯೇ ಕೂತುಕೊಂಡು ಕತೆ ಕೇಳುದು :) ಅಡಿಕ್ಕೆ ರಾಶಿಗೆ ಕೈ, ಕಾಲು ಹಾಕಿ ಆಟ ಆಡುದು, "ನಾನೂ ಅಡಿಕ್ಕೆ ಸಜ್ಜಿ ಮಾಡ್ತೇನೆ" ಹೇಳಿ ಅಜ್ಜನ ಹತ್ರ ಹಠ ಮಾಡುದು, ಎಲ್ಲವೂ ನೆನಪಾಗ್ತಾ ಅದೆ :)

ಅದೆಲ್ಲವೂ ಈಗ ಮುಗುದು ಹೋದ ಮಾತು :( ರಥಂದ ಹಾರಿ ಹೋದ ಋತುಪರ್ಣನ ಶಾಲಿನ ಹಾಂಗೆ.... ಮತ್ತೆಂದೂ ಸಿಕ್ಕದ್ದೇ ಇರುವಂಥದ್ದು :( ಬಾಲ್ಯದ ಆ ಖುಷಿಯ ದಿನಗಳಂದ ಬಹು ಯೋಜನ ದೂರ ಬಂದು ಬಿಟ್ಟಿದ್ದೇನೆ :( ಮನೆ ಬಿಟ್ಟು ಈ ಮಹಾನಗರಲ್ಲಿ ಬಂದು ಕೂತ ಮೇಲಂತೂ, ಎತ್ತ ಹೋಗ್ತಾ ಇದ್ದೇನೆ, ಯಾವ ವೇಗಲ್ಲಿ ಕಳೆದು ಹೋಗ್ತಾ ಇದ್ದೇನೆ ಹೇಳಿಯೇ ಗೊತ್ತಾಗ್ತಾ ಇಲ್ಲ :( "ಪರಿವರ್ತನೆ ಜಗದ ನಿಯಮ" ಹೇಳುವ ಮಾತು ಹೇಳಿಕೊಂಡು ಸಮಾಧಾನ ಮಾಡಿಕೊಳ್ವೇಕು, ಅಷ್ಟೇ :(
****************

ನನ್ನ ಬದುಕ್ಕಿಲಿ ಕೃತ್ತಿಕಾ ಬಂದದ್ದು, ನಮ್ಮ ಮದುವೆ ಆದ್ದು, ನಾವಿಬ್ರೂ ಒಂದು ಸಣ್ಣ ಬಾಡಿಗೆ ಮನೆಲಿ ಇದ್ದದ್ದು, ನಮ್ಮ ಪ್ರೀತಿ, ಜಗಳ, ಕೋಪ, ತಮಾಷೆ ಎಲ್ಲಾ ಒಂದು ಮಿಂಚಿನ ಹಾಂಗೆ ಬಂದು ಹೋಯ್ತು..... ಮದುವೆ ಆಗಿ ಒಂದು ವರ್ಷ ಆಗುವಾಗಲೇ ಒಂದು ಪುಟ್ಟು ಬಾಬೆಯೂ ಆಯ್ತು :) ಆ ಬಾಬೆಗೆ ಮೂರು ತಿಂಗಳೂ ಆಯ್ತು :) ನಾನು ಒಬ್ಬನೇ ಇಲ್ಲಿ ಇದ್ದೇನೆ :( ಬಾಬೆ ನೋಡ್ವೇಕು ಹೇಳಿ ಕಾಣ್ತೆ.... ಅದ್ರ ಒಟ್ಟಿಗೆ ಆಟ ಆಡ್ವೆಕು ಹೇಳಿ ಕಾಣ್ತೆ.... ಆದ್ರೆ ಅದಿಕ್ಕೆ ಇನ್ನೂ ಮೂರು ತಿಂಗಳು ಕಾಯುವೇಕು.... ಕೃತ್ತಿಕಾ, ಬಾಬೆ ಕರ್ಕೊಂಡು ಇಲ್ಲಿಗೆ ಬರುದು ಅಕ್ಟೋಬರ್ ಲಿ.... ಅಲ್ಲಿವರೆಗೂ ನಾನು ಮತ್ತೆ ಬ್ರಹ್ಮಚಾರಿ !! ಕಾಲದ ನಾಗಾಲೋಟಲ್ಲಿ ಈ ಮೂರು ತಿಂಗಳು ಮೂರು ನಿಮಿಷದ ಹಾಂಗೆ ಹಾರಿ ಹೋಗ್ತೆ :)
****************
ಮಳೆ ಇಲ್ಲ :( ಯಾಕೋ ಈ ವರ್ಷ ಮಳೆ ಭಾರೀ ಕೈ ಕೊಟ್ಟದೆ.... ಬೆಂಗಳೂರಿಲಿ ಅಂತೂ ಮಳೆಯೇ ಇಲ್ಲ :( (ನಮ್ಮಂಥವೆಲ್ಲಾ ಬೆಂಗಳೂರಿಲಿ ಬಂದು ಝಾಂಡಾ ಊರಿರುವಾಗ ಮಳೆ ಆದರೂ ಹೇಂಗೆ ಬಂದೀತು ???) ಮಳೆಯ ಹಿತ ಅನುಭವಿಸುವೇಕು ಹೇಳಿ ಯಾಕೋ ತೀರಾ ಅನ್ಸಿದಾಗ ನಾನು ಹೊರಟೇಬಿಟ್ಟೆ ಮೂಡಿಗೆರೆಗೆ :) ನನ್ನ ಫ್ರೆಂಡ್ ಹರೀಶ "ನಾನೂ ಬರ್ತೀನೋ" ಹೇಳಿಯಾಗುವಾಗ ಇಲ್ಲ ಹೇಳಿ ಹೇಳುಕೆ ಆಗಲ್ಲ... ಇಬ್ರೂ ಹೊರನಾಡು ಬಸ್ ಹತ್ತಿ ಹೊರಟಾಯ್ತು :) ರಾತ್ರೆ ಬಸ್ಸಿಲಿ ನಿದ್ದೆಯೇ ಬರಲ್ಲ :( ಮೂಡಿಗೆರೆಗೆ ಹೋಗ್ತಾ ಇರುವ ಖುಷಿಗೋ ಅಥವಾ ಕಾಲೇಜ್ ನ ಗೇಟಿನ ಎದುರು ಇಳಿಯುಕೆ ಮೊದಲೇ ಬಾಗಿಲಿನ ಹತ್ರ ಹೋಗಿ ಡ್ರೈವರಿಗೆ ರಿಕ್ವೆಸ್ಟ್ ಮಾಡುವೇಕು ಹೇಳುವ subconscious ಮನುಗುಕೆ ಬಿಡಲ್ವೋ ಗೊತ್ತಿಲ್ಲ :P ಅಂತೂ ಬೆಳಿಗ್ಗೆ 4 ಘಂಟೆಗೆ ತೋಟಗಾರಿಕಾ ಕಾಲೇಜ್ ನ ಹಾಸ್ಟೆಲ್  ತಲಪಿ ಆಯ್ತು :) ನನ್ನ ಇನ್ನೊಬ್ಬ ಫ್ರೆಂಡ್ ಅಕ್ಷಯ್ ಅಲ್ಲಿ ನವುಗಿಬ್ರಿಗೂ ಮನುಗುಕೆ ವ್ಯವಸ್ತೆ ಮಾಡಿ ಆಗಿತ್ತು.... ಸಣ್ಣಕ್ಕೆ ಮಳೆ ಹನಿ ಬೀಳ್ತಾ ಇತ್ತು.... ರಗ್ಗು ಹೊದ್ದು ಮನಿಗಿರೂ ನಿದ್ದೆ ಬರ್ತಾ ಇರಲ್ಲ :) ಮೂಡಿಗೆರೆ ಕಾಲೇಜ್ ಲಿ ಕಳುದ ಆ ನಾಲ್ಕು ವರ್ಷ ಕಣ್ಣ ಮುಂದೆ ಹಾಂಗೆ ಕಾಡ್ತಾ ಇತ್ತು.... ಮೂಡಿಗೆರೆಯ ಮಳೆ, ಚಳಿ, ಗಾಳಿ, ಜನ, ಸಂಸ್ಕೃತಿ ಎಲ್ಲವೂ ನೆನಪ್ಪಾಗ್ತಾ ಇತ್ತು :)

ಪಿಯುಸಿ ಮುಗುಸಿ CET ಬರ್ದು ಆದ ಮೇಲೆ "ಮುಂದೆಂತ ?" ಹೇಳುವ ಪ್ರಶ್ನೆ ಎದುರಾದಾಗ ನನ್ನ ಆಯ್ಕೆ Horticulture ಆಯ್ತು.... ವೆಟೆರಿನೆರಿ ಮಾಡ್ವೆಕು ಹೇಳಿ ಆಸೆ ಇದ್ರೂ ಸೀಟ್ ಸಿಕ್ಕುವಷ್ಟು ಮಾರ್ಕು ಇರಲ್ಲ :( ಸರಿ, ಬಿ.ಎಸ್ಸಿ. ತೋಟಗಾರಿಕೆ ಕೋರ್ಸ್ ತೆಕ್ಕೊಂಡು ಮೂಡಿಗೆರೆ ಕಾಲೇಜ್ ಸೆಲೆಕ್ಟ್ ಮಾಡಿಯೂ ಆಯ್ತು.... ಪಿಯುಸಿಲಿ ಎರಡು ವರ್ಷ ಹಾಸ್ಟೆಲ್ ಲಿ ಇದ್ದು ಅಭ್ಯಾಸ ಆಗಿದ್ದ ಕಾರಣ ಮನೆ ಬಿಟ್ಟು ಒಬ್ಬನೇ ಇರುಕೆ ಹೆದ್ರಿಕೆ ಅಂತೂ ಇರಲ್ಲ.... ಆದ್ರೂ ಘಟ್ಟದ ಮೇಲೆ, ಹೆಂಗೋ ಏನೋ ? ಊಟ ತಿಂಡಿ ಸರಿ ಅಡ್ಜಸ್ಟ್ ಆಗದ್ರೆ ಹೇಂಗೆ ಹೇಳುವ ಸಣ್ಣ ಆತಂಕ ನನಿಗೂ, ಮನೆಯವಕ್ಕೂ ಇದ್ದೆ ಇತ್ತು.... ಆದ್ರೆ ಬಿ.ಎಸ್ಸಿ. ಮುಗುಸಿ ಹೊರಡುವಾಗ ಮೂಡಿಗೆರೆ ಬಿಟ್ಟು ಬರುಕೆ ಮನಸ್ಸೇ ಇರಲ್ಲ :( ಕಣ್ಣೀರು ಹಾಕಿ ಹೊರಟವು ಎಷ್ಟು ಜನವೋ ? ನಾನಂತೂ ಕರ್ಚೀಪು ಚೆಂಡಿ ಮಾಡಿತ್ತಿದ್ದೆ :(

ಡಿಗ್ರಿ ಮುಗುಸಿ ನಾಲ್ಕು ಐದು ವರ್ಷ ಕಳುದು ಮತ್ತೆ ನಾವು ಕಲ್ತ ಕಾಲೇಜಿಗೆ, ಆ ಊರಿಗೆ ಹೋಗುವ ಖುಷಿ ಅದೆ ಅಲ್ಲಾ ? ಅದ್ರ ಅಕ್ಷರಕ್ಕೆ ಇಳುಶುದು ಕಷ್ಟ ಸಾಧ್ಯ.... ಅದ್ರ ಅನುಭವಿಸಿಯೇ ತಿಳ್ಕೊಳ್ವೆಕಷ್ಟೇ.... ಅದೇ excitement ಲಿ ಬೆಳಿಗ್ಗೆ ಎದ್ದು ಹಾಸ್ಟೆಲ್ ಇಂದ ಸೀದಾ ಕಾಲೇಜ್ ಇಗೆ ಹೋದೆ.... ತುಂಬಾ ಬದಲಾವಣೆ ಎಂತ ಆಗಿರಲ್ಲ :) ಒಂದೊಂದು ಕ್ಲಾಸ್ ರೂಮಿಗೂ ಹೋಗಿ ಫೋಟೋ ತೆಕ್ಕೊಂಡೆ :) ಕೈಲಿ ಇದ್ದ ಕ್ಯಾಮೆರಾ 14 ಮೆಗಾ ಪಿಕ್ಸೆಲ್, 4 ಜಿಬಿ ಮೆಮೊರಿ :) ಆದ್ರೆ ನಾಕು ವರ್ಷ ನಾನು ಅಲ್ಲಿ ಓಡಾಡಿ ಅನುಭವಿಸಿದ ಕ್ಷಣಂಗಳ ಸೆರೆ ಹಿಡುದ್ದು ಸಾವಿರಾರು ಮೆಗಾ ಪಿಕ್ಸೆಲ್ ನ ನನ್ನ ಕಣ್ಣು ಮತ್ತೆ unlimited ಜಿಬಿ ಮೆಮೊರಿ ಇರುವ ಮೆದುಳು :) ಪಿರಿಪಿರಿ ಮಳೆಯ ಮಧ್ಯೆಯೇ ಕೊಡೆ ಹಿಡ್ಕೊಂಡು ಕಾಲೇಜ್ ಸುತ್ತ ಒಂದು ಸುತ್ತು ಹಾಕಿದೆ....

*********************

ನಮ್ಮ ಕಾಲೇಜ್ ಇರುದು ಒಂದು ಎತ್ತರದ ಗುಡ್ಡೆಯ ಮೇಲೆ. ಸುತ್ತಲೂ ಪಶ್ಚಿಮ ಘಟ್ಟದ ಹೊದಿಕೆ..... ಕಾಲೇಜ್ ನ ಎದುರು ನಿತ್ತು ನೋಡಿರೆ ಹಸಿರೋ ಹಸಿರು :) ಹಿಂದೆಯೂ ಕಾಡು.... ಸ್ವಲ್ಪವೇ ದೂರಲ್ಲಿ ಪೂರ್ಣಚಂದ್ರ ತೇಜಸ್ವಿಯ ತೋಟ :) ಹಾಂ.... ತೇಜಸ್ವಿ ಹೆಸರು ಹೇಳಿಯಾಗುವಾಗ ಒಂದು ಘಟನೆ ನೆನಪ್ಪಾಗ್ತೆ.... ನಮ್ಮ ಕಾಲೇಜ್ ನ ನೆರೆಕರೆಲಿಯೇ ತೇಜಸ್ವಿ ಇದ್ರೂ ಅವರ ಭೇಟಿ, ಒಡನಾಟ ನವುಗೆ ಅಷ್ಟಕ್ಕಷ್ಟೇ :( ಒಂದು ಸರ್ತಿ ಕಾಲೇಜ್ ನ ಯಾವುದೋ ಒಂದು ಸಮಾರಂಭಕ್ಕೆ (Freshers Welcome party ಗೆ ಹೇಳಿ ನೆನಪ್ಪು) ಅವರ ಅತಿಥಿಯಾಗಿ ಕರಿಯುಕೆ ನಾನು ಫ್ರೆಂಡ್ಸ್ ಒಟ್ಟಿಗೆ ಹೋಗಿತ್ತಿದ್ದೆ ಒಂದು ಸರ್ತಿ.....  ಮೊದಲೆ ಅನುಮತಿ ಇಲ್ಲದ್ದೆ ಅವರ ತೋಟಕ್ಕೆ ಹೋದ್ರೆ ಬೈದು ಕಳ್ಸುತ್ತಾವೆ ಹೇಳಿ ಗೊತ್ತಿದ್ದೂ ಧೈರ್ಯ ಮಾಡಿ ಗೇಟಿನ ಒಳಗೆ ಹೋಗಿ ಆಯ್ತು.... ಮನೆಲಿ ಇತ್ತಿದ್ವು ತೇಜಸ್ವಿ.... ಹೀಂಗೆ ಹೀಂಗೆ ಕಾರ್ಯಕ್ರಮ ಅದೆ, ನೀವು ಬರ್ವೇಕು ಹೇಳಿ ಕೇಳಿಕೊಂಡಾಗುವಾಗ, "ಅಯ್ಯೋ ಇಂಥಾ ಕಾರ್ಯಕ್ರಮಗಳಿಗೆಲ್ಲಾ ನನ್ನನ್ನ ಯಾಕೆ ಕರೀತೀರಿ ಮಾರಾಯಾ ?? ಅದೂ ಅಲ್ಲದೆ ನಾವು ಆ ತಾರೀಕಿಗೆ ಮದ್ರಾಸಿಗೆ ಹೋಗ್ತಾ ಇದ್ದೇವೆ, ಬೇಜಾರು ಮಾಡ್ಕೋಬೇಡಿ" ಹೇಳಿ ನೆಗೆ ಮಾಡಿದ್ವು.... ಸರಿ ಹೇಳಿ ನಾವು ಹೊರಡುವಾಗ "ಅದೆಂಥದೋ ಒಂದು ಶಬ್ದ ಬರ್ತಾ ಇರ್ಥದಲ್ಲಾ ನಿಮ್ಮ ಕಾಲೇಜ್ ಇಂದ ??? ಎಂತ ಅದು ?? ಯಾವಾಗ ನಿಲ್ಲತ್ತೆ ???" ಹೇಳಿ ಕೇಳಿದ್ವು. ( ಯೂತ್ ಫೆಸ್ಟಿವಲ್ ಗೆ ಹೇಳಿ ನಮ್ಮ ಕಾಲೇಜ್ ಲಿ ಡೊಳ್ಳು ಕುಣಿತ ಪ್ರಾಕ್ಟೀಸ್ ಮಾಡ್ತಾ ಇತ್ತಿದ್ವು.... ದಿನಾ ಬೈಸಾರಿ ಹತ್ತು ಜನ ಹುಡುಗರು ಒಟ್ಟಿಗೆ "ಓ ಹೊಯ್" ಹೇಳಿ ಬೊಬ್ಬೆ ಹಾಕಿಕೊಂಡು ಡೊಳ್ಳು ಬಾರ್ಸುದು ತೇಜಸ್ವಿಗೆ ಕಿರಿ ಕಿರಿ ಅನ್ಸಿತ್ತೋ ಏನೋ ?? ) ನಾವು ಕ್ಷಮೆ ಕೇಳಿ, ಯೂತ್ ಫೆಸ್ಟಿವಲ್ಲಿಗೆ ಪ್ರಾಕ್ಟೀಸ್ ಮಾಡ್ತಾ ಇದ್ದೇವೆ ಹೇಳಿ ವಿವರ್ಸಿ ಆಗುವಾಗ "ಸರಿ, ಆದಷ್ಟು ಬೇಗ ಮುಗ್ಸಿ ಮಾರಾಯಾ" ಹೇಳಿ ಕಿರು ನೆಗೆ ಮಾಡಿದ್ವು :)

ಅದೇ ಮೊದಲು, ಅದೇ ಕೊನೆ ನಾವು ತೇಜಸ್ವಿ ಮನೆಗೆ ಹೋದ್ದು..... ಮತ್ತೆ ಅವಾಗ ಇವಾಗ ಮೂಡಿಗೆರೆಲಿಯೋ, ಹ್ಯಾಂಡ್ ಪೋಸ್ಟಿಲಿಯೋ ಹಿಂದಾಣ ಸೀಟ್ ಇಲ್ಲದ್ದ ಹಳೇ ಲ್ಯಾಂಬಿ ಸ್ಕೂಟರಿಲಿ ತಿರಿಗಿಕೊಂಡಿದ್ದ ತೇಜಸ್ವಿಯ ದೂರಂದ ನೋಡಿ ಖುಷಿ ಪಟ್ಟದ್ದೆ ಹೆಚ್ಚು :)

*********************

ಮತ್ತೆ ಹಳೇ ನೆನಪ್ಪುಗಳ ಎಲ್ಲಾ ಕಣ್ಣಿಲಿ ತುಂಬುಸಿಕೊಂಡು ಮನಸ್ಸು ಹಗುರ ಮಾಡಿಕೊಂಡು, ಕಾಲೇಜ್ ಗೇಟ್ ದಾಟಿ ಹೊರಗೆ ಹೋದೆ...... ಮೊದಲು ಹೇಂಗೆ ಇತ್ತೋ ಹಾಂಗೇ ಅದೇ ಆ ಜಾಗೆ..... ರಾಜಣ್ಣನ ಕ್ಯಾಂಟೀನ್ಲಿ ಕಾಪಿ ಕುಡುದು, ಶ್ರೀಕಾಂತ್ ನ ಅಪ್ಪ ಸುಬ್ಬೇಗೌಡರ ಅಂಗಡಿಗೆ ಹೋಗಿ ಗೌಡ್ರ ಹತ್ರ ಮಾತಾಡಿ ಹೊರಟೆ... ಆಚೆ ಮತ್ತೊಂದು ಸಣ್ಣ ಅಂಗಡಿ, ಅಲ್ಲಿ ಇತ್ತಿದ್ದ ಅಶ್ರಫ್ ನ  ಎಸ್.ಟಿ.ಡಿ. ಬೂತ್ ಮಾತ್ರ ಈಗ ಇಲ್ಲ :( ಪ್ರತಿಯೊಬ್ಬನ ಕೈಲೂ ಮೊಬೈಲು ಬಂದ ಮೇಲೆ ಎಸ್.ಟಿ.ಡಿ. ಬೂತ್ ಯಾರಿಗೆ ಬೇಕು ??? ಒಂದು ಕಾಲಲ್ಲಿ ನಾವು ಅಲ್ಲಿ ಕ್ಯೂ ನಿತ್ತುಕೊಂಡು ಮನೆಗೋ, ಹುಡುಗಿಯರ ಹಾಸ್ಟೆಲ್ ಗೋ ಫೋನ್ ಮಾಡಿಕೊಂಡು ಇದ್ದದ್ದು ನೆನಪ್ಪಾಗಿ ನೆಗೆ ಬಂತು :) ಹಾಂಗೇ ಮುಂದೆ ಹೋದ್ರೆ ಬಷೀರ್ ನ  ಸಣ್ಣ ದಿನಸಿ ಅಂಗಡಿ, ಹರೀಶನ ಕಟ್ಟಿಂಗ್ ಶಾಪ್ :) "ಬುಕ್ಕಾ ಎಂಚ ಉಲ್ಲಾರ್ ??" ಅದೇ ಮುಗ್ಧ ನೆಗೆ ಮಾಡಿ ಬಷೀರ್ ಮಾತಾಡಿಯಾಗುವಾಗ ಮೂಡಿಗೆರೆ, ಇಲ್ಲಿಯಾಣ ಜನ ಬದಲಾಗಲ್ಲ ಹೇಳಿ ಕಂಡು ಖುಷಿಯಾಯ್ತು :) ಹರೀಶನ ಹತ್ರ ಶೇವಿಂಗ್ ಮಾಡ್ಸಿಕೊಂಡು ತಿರುಗಿ ಹಾಸ್ಟೆಲಿಗೆ ಬಂದು ಫ್ರೆಂಡ್ಸ್ ಹತ್ರ ಎಲ್ಲಾ ಮಾತಾಡಿ ಒಟ್ಟಿಗೆ ಕಾಮನ್ ಬಾತ್ರೂಮಿಲಿ ಮಿಂದು ಹೊರಟದ್ದೂ ಆಯ್ತು :)

ಮತ್ತೆ ರಾಜಣ್ಣನ ಕ್ಯಾಂಟೀನ್ಲಿ ತಿಂಡಿ ಕಾಪಿ ಮಾಡಿ, ಹ್ಯಾಂಡ್ ಪೋಸ್ಟ್ ವರೆಗೆ ರಿಕ್ಷ ಹತ್ತಿ ಹೋದ್ರೆ ಅಲ್ಲಿ ಸಿಕ್ಕಿದ್ದು ಆಟೋ ಗಣೇಶಣ್ಣ. ಅದೇ ನೆಗೆ, ರಿಕ್ಷಾ, ಹಳೇ ನೋಕಿಯಾ ಹ್ಯಾಂಡ್ ಸೆಟ್, ಉಹುಂ ಚೇಂಜ್ ಆಗಲೇ ಇಲ್ಲ :)
************************

ಧರ್ಮಸ್ಥಳ ಬಸ್ ಹತ್ತಿ ಚಾರ್ಮಾಡಿ ಕಡೆ ಹೊರಟಾಯ್ತು ನಾನು, ಹರೀಶ್, ಅಕ್ಷಯ್ :) ಬಿದರಹಳ್ಳಿ ದಾಟಿ ಹೊರಟ್ಟಿ, ಬಡವನದಿಣ್ಣೆ, ಬಗ್ಗಸಗೋಡು, ಬಣಕಲ್, ಕೊಟ್ಟಿಗೆಹಾರ ಹೀಂಗೆ ದಾರಿ ಉದ್ದಕ್ಕೂ ಹಸಿರು, ಗದ್ದೆ ಹೂಡುತ್ತಾ ಇದ್ದ ಜನ, ನೇಜಿ ನೆಡ್ತಾ ಇದ್ದ ಹೆಂಗಸರು :) ಲೇಟ್ ಆದ್ರೂ ಸ್ವಲ್ಪ ಮಳೆ ಬಿದ್ದ ಕಾರಣ ಜನ ಕೃಷಿ ಕೆಲಸ ಶುರು ಮಾಡಿತ್ತಿದ್ವು :) ಕೊಟ್ಟಿಗೆಹಾರ ಬಸ್ ಸ್ಟ್ಯಾಂಡ್ ಲಿ ಕಾಪಿಗೆ ನಿಲ್ಸಿದ್ವು.... ಬಸ್ ಕಿಟ್ಕಿಲಿ ಹೊರಗೆ ನೋಡಿರೆ ಪೂರ್ತಿ ಮೋಡ ಮುಚ್ಚಿ ಕಸ್ತಲೆ ಆಗ್ಯೆದೆ :) ತುಳಸಿ ತೈಲ, ಟೊಪ್ಪಿ ಮಾರಿಕೊಂಡು ಬರುವ ಹುಡುಗರು, ಆರೇಳು ವರ್ಷ ಮೊದಲು ಹೇಂಗೆ ಇತ್ತೋ ಹಾಂಗೇ ಅದೇ ಈಗಲೂ :) ಅಲ್ಲಿಂದ ಹೊರಟು ಘಾಟಿ ಪ್ರವೇಶ ಮಾಡಿತ್ತು ಬಸ್ :) ಖುಷಿ ಆಗ್ತಾ ಅದೆ, ಅದೆಷ್ಟು ವರ್ಷದ ಮತ್ತೆ ಬರ್ತಾ ಇದ್ದೇನೆ ಈ ಜಾಗೆಗೆ ???

ಮಲಯ ಮಾರುತ ಗೆಸ್ಟ್ ಹೌಸ್ ಕಳುದು ಮುಂದೆ ಹೋದ್ರೆ ಜೇನುಕಲ್ಲು ಅಣ್ಣಪ್ಪ ಸ್ವಾಮಿ ದೇವಸ್ಥಾನ.... ಘಾಟಿಲಿ ಹೋಗುವ ಎಲ್ಲಾ ವಾಹನಗಳೂ ಅಲ್ಲಿ ನಿಲ್ಲಿಸಿ ಪೂಜೆ ಮಾಡಿಯೇ ಮುಂದೆ ಹೋಗುದು :) ಬಸ್ ನಿಲ್ಸಿದ ಕೂಡ್ಲೇ ನಾವು ಮೂರೂ ಜನ ಇಳುದ್ವು.... ಪಿರಿಪಿರಿ ಮಳೆ ಸ್ವಲ್ಪ ಸ್ವಲ್ಪವೇ ಜೋರಾವುಕೆ ಶುರು ಆಯ್ತು.... ಬಸ್ ಹೊರಟ ಮೇಲೆ ನಾವು ನದಿಯುಕೆ ಶುರು ಮಾಡಿದ್ವು.... ಸೋಮನಕಾಡು ದಾಟಿ ಇನ್ನೂ ಮೂರುನಾಕು ಕಿಲೋಮೀಟರ್ ಹೋದ್ರೆ ಅಲ್ಲಿ ಒಂದು ವ್ಯೂ ಪಾಯಿಂಟ್ ಅದೆ... ಅಲ್ಲಿವರೆಗೆ ನಡ್ಕೊಂಡು ಹೋಗಿ ಸಣ್ಣ ಸಣ್ಣ ಜಲಪಾತದ ಅಡಿಲಿ, ಮೋಡಗಳ ಮಧ್ಯೆ ನಿತ್ತುಕೊಂಡು ಬೇರೆ ಬೇರೆ ಪೋಸ್ ಕೊಟ್ಟು ಫೋಟೋ ತೆಕ್ಕೊಂಡು ಆಯ್ತು :) ಮತ್ತೆ ವಾಪಸ್ ಜೇನುಕಲ್ಲು ಮಾರ್ಗವಾಗಿ ಕೊಟ್ಟಿಗೆಹಾರದವರೆಗೆ ನಮ್ಮ "ದಂಡ"ಯಾತ್ರೆ :) ಮಳೆ ಜೋರಾಯ್ತು..... ತೆಕ್ಕೊಂಡು ಬಂದ ತಿಂಡಿ ಎಲ್ಲಾ ಖಾಲಿ ಆವುಕೆ ಶುರು ಆಯ್ತು.... ಆ ಗಾಳಿ ಮಳೆಗೆ ಸುಮಾರು 18 -20 ಕಿಲೋಮೀಟರ್ ನಡುದು ನಡುದು ಸಾಕಾಯ್ತು :)

ಹಳೇ ನೆನಪ್ಪುಗಳ ಮತ್ತೆ ಕೆದಕ್ಕಿಕೊಂಡು ಮೂರೂ ಜನ ಮನಸ್ಸು ಹಗುರ ಮಾಡಿಕೊಂಡೆವು :)

ಕಾಲೇಜ್ ಲಿ ಇರುವಾಗ ಸುಮಾರು ಸರ್ತಿ ಒಬ್ಬೊಬ್ಬನೇ ಟ್ರೆಕಿಂಗ್ ಬಂದಿತ್ತಿದ್ದೆ ಇಲ್ಲಿಗೆ.... ಬಿದಿರುತಳ ಹೇಳುವ ಒಂದು ಅಜ್ಞಾತ ಹಳ್ಳಿಗೂ ಹೋಗಿತ್ತಿದ್ದೆ :) ಮಳೆ, ಗಾಳಿ, ಚಳಿ ಮನಸ್ಸಿನ ಹಗುರ ಮಾಡಿತ್ತು :) ಮಲಯ ಮಾರುತ ಮುದ ಕೊಟ್ಟತ್ತು.....

ಕೊಟ್ಟಿಗೆಹಾರಂದ ಬಸ್ ಹತ್ತಿ ಹ್ಯಾಂಡ್ ಪೋಸ್ಟ್ ತಲುಪ್ಪಿ ನಡ್ಕೊಂಡು ಹಾಸ್ಟೆಲಿಗೆ ಬಂದು ಮತ್ತೊಂದು ಸರ್ತಿ ನೀರು ಕಾಸಿ ಮಿಂದೂ ಆಯ್ತು..... ಫ್ರೆಂಡ್ ಹರೀಶ ಬಾಡಿಗೆಗೆ ಇದ್ದ ಮನೆಗೆ ಹೋಗುವ ಹೇಳಿ ನಾವಿಬ್ರೂ ಹೊರಟ್ವು..... ಕ್ಯಾಂಟೀನ್ ರಾಜಣ್ಣನ ಹಳೆ ಮನೆಲಿ ಹರೀಶ ಬಾಡಿಗೆಗೆ ಇತ್ತಿದ್ದ ಮೊದಲು.... ರಾಜಣ್ಣನ ಅಮ್ಮ, ಹಣ್ಣು ಹಣ್ಣು ಮುದುಕಿ ಅಲ್ಲಿ ಇತ್ತು..... ಮೂರ್ಸಂಜೆಲಿ ನಮ್ಮ ಕಂಡು ಶುರುವಿಗೆ ಗುರ್ತ ಸಿಕ್ಕದ್ರೂ ಮತ್ತೆ ತುಂಬಾ ಖುಷಿಪಟ್ಟತ್ತು ಅಜ್ಜಿ.... ಒತ್ತಾಯ ಮಾಡಿ ರೊಟ್ಟಿ ಚಟ್ನಿ ತಿನ್ಸಿ ಚೆಂದಲ್ಲಿ ಮಾತಾಡಿತ್ತು..... ಆ ಪ್ರೀತಿ ನೋಡಿಯಾಗುವಾಗ ಮನಸ್ಸಿನ ಮೂಲೇಲಿ ನಾವು ಎಂತದೋ ಒಂದು ಕಳ್ಕೊಂಡಿದ್ದೇವೆ ಹೇಳುವ ಭಾವ :(

ರಾತ್ರಿ ಬಸ್ ಹತ್ತಿ ಮತ್ತೆ ಬೆಂದಕಾಳೂರಿಗೆ ವಾಪಸ್ :( ಮರುದಿನ ಮತ್ತೆ ಆಫೀಸ್ ಗೆ ಹೋಗ್ವೇಕಲ್ಲಾ ????

*********************

ಬದುಕು ಓಡುವ ವೇಗವೇ ಹಾಂಗೆ...... ಕಾವಿನಮೂಲೆಲಿ ಹುಟ್ಟಿದ ಒಬ್ಬ ಮಾಣಿಯ ಮುಂಡುಗಾರು ಶಾಲೆ, ಬಾಳಿಲ ಶಾಲೆ, ಸುಳ್ಯ ರೋಟರಿ ಶಾಲೆ, ರಾಮಕುಂಜ ಕಾಲೇಜ್, ಮೂಡಿಗೆರೆ ತೋಟಗಾರಿಕಾ ಕಾಲೇಜ್ ಎಲ್ಲಾ ಕಡೆ "ಹಳೆ ವಿದ್ಯಾರ್ಥಿ" ಮಾಡಿ, ಚಿಕ್ಕಮಗಳೂರು, ಕೆಮ್ಮಣ್ಣು ಗುಂಡಿಯ ಕಾಫಿ ಡೇ ಕಂಪನಿಲಿ, ಮೂಡಿಗೆರೆಯ ಪ್ಲಾಂಟ್ ಹೆಲ್ತ್ ಕ್ಲಿನಿಕ್ ಲಿ ಕೆಲಸ ಮಾಡ್ಸಿ, ಮತ್ತೆ ಎಂ.ಎಸ್ಸಿ. ಪ್ರವೇಶ ಪರೀಕ್ಷೆ ಬರ್ಸಿ, ಬೆಂಗ್ಳೂರಿಲಿ ಕೃಷಿ ವಿಶ್ವವಿದ್ಯಾಲಯಲ್ಲಿ ಎರಡು ವರ್ಷ ಮತ್ತೆ ಓದುಸಿ, ಶೋಭಾ ಡೆವಲಪರ್ಸ್ ಲಿ ಕೆಲಸಕ್ಕೆ ಸೇರ್ಸಿ, ದೂರದ ಡೆಲ್ಲಿಗೆ ಕರ್ಸಿಕೊಂಡು ಸಮಕ್ ಲ್ಯಾಂಡ್ ಸ್ಕೇಪ್  ಹೇಳುವ ಇನ್ನೊಂದು ಕಂಪನಿಲಿ ಕೆಲಸ ಮಾಡ್ಸಿ, 'ಉತ್ತರ ಭಾರತ' ಹೇಳಿರೆ ಎಂತ ಹೇಳಿ ಪಾಠ ಹೇಳಿಕೊಟ್ಟು ಮತ್ತೆ ಬೆಂಗ್ಳೂರಿಗೆ ಕರ್ಸಿ, ಮದುವೆ ಮಾಡ್ಸಿ, ಲೀಲಾ ಪ್ಯಾಲೇಸ್ ಲಿ ಚಾಕ್ರಿ ಮಾಡ್ಸಿ, ಅದೂ ಬೇಡ ಹೇಳಿ ಟೋಟಲ್ ಎನ್ವಿರೊಂಮೆಂಟ್ ಹೇಳುವ ಈ ಕಂಪೆನಿಗೆ ತಂದು ಹಾಕಿ, ಕೈಗೆ ಒಂದು ಪುಟ್ಟು ಬಾಬೆಯ ಕೊಟ್ಟು  "ಬದುಕು ಹೇಳಿರೆ ಇದೇ" ಹೇಳುವ ಬಾಲ(ಳ)ಪಾಠ ಕಲ್ಸಿದ, "ಇಷ್ಟೇ ಅಲ್ಲ ಇನ್ನೂ ಅದೆ" ಹೇಳುವ ಎಚ್ಚರಿಕೆಯನ್ನೂ ಕೊಟ್ಟ ಬದುಕಿನ ಈ "ಪಯಣ" ಇನ್ನೆಲ್ಲಿಗೆ ಕರ್ಕೊಂಡು ಹೋಗ್ತೋ ???? "ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ" ಆಲ್ವಾ ????




Thursday, August 2, 2012

ನಮಸ್ತೇ .....

ನಮಸ್ತೇ .....

ಇಂದು ಯಾಕೋ ಗೆಳತಿ ಸುಪ್ರಭಾಳ ಬ್ಲಾಗ್ www.suprabhasulthanimatt.blogspot.in  ನೋಡಿದೆ :) ತುಂಬಾ ದಿನದಿಂದ ಬರೆಯದೇ ಜಡ್ದುಕಟ್ಟಿ ಹೋಗಿದ್ದ ಮನಸ್ಸು ಮತ್ತೆ ಬ್ಲಾಗ್ನತ್ತ ಹೊರಳಿತು :) ಆದರೆ ಬರೆಯಲು ಆಗ್ತಾ ಇಲ್ಲ... ಕಡೇ ಪಕ್ಷ ಹಳತು ಲೇಖನಗಳನ್ನಾದರೂ ಬ್ಲಾಗಿಗೆ ಹಾಕುವ ಎಂದುಕೊಂಡು ಎಂದೋ ಬರೆದಿದ್ದ ಮೂರು ಲೇಖನಗಳನ್ನು ಹಾಕಿದ್ದೇನೆ :) ಇನ್ನು ಮುಂದಾದರೂ ಒಂದಷ್ಟು ಬರೆಯಲು ಅವಕಾಶ, ಮನಸ್ಸಾಗುತ್ತದೋ ನೋಡೋಣ :)

ಪಯಣ – 03

ನಾವು ಬೇಡ ಹೇಳಿರೂ, ಬೇಕು ಹೇಳಿರೂ ಬದುಕು ಮುಂದೆ ಹೋಗ್ತಾ ಇರ್ತೆ….

ಕಳುದ ಸರ್ತಿ ಮನಸ್ಸಿನ ಮಾತುಗಳ “ಪಯಣ” ಹೇಳಿ ಹೆಸರಿಟ್ಟು ಬರಿವಾಗ ನಾನು ದೂರದ ಡೆಲ್ಲಿ ಲಿ ಇತ್ತಿದ್ದೆ…….

ಗುರ್ಗಾವ್ ನ ಬದುಕಿನ ಖುಷಿ, ಬಿಸಿಗಳ ಅನುಭವಿಸ್ತಾ ಇತ್ತಿದ್ದೆ….. ಆ ದಿನ ನನಿಗೆ ಖಂಡಿತಾ ಗೊತ್ತಿರಲ್ಲ, ಇನ್ನೊಂದು ಸರ್ತಿ ನಾನು ಬರಿಯುಕೆ ಶುರು ಮಾಡುವಾಗ ಬೆಂಗ್ಳೂರಿಲಿ ಇರ್ತೇನೆ ಹೇಳಿ……

ಬದುಕಿನ ಹುಚ್ಚು ಹೊಳೆ ನನ್ನ ಮತ್ತೆ ಎಳ್ಕೊಂಡು ಬಂತು ಇಲ್ಲಿಗೆ….. ಆರು ತಿಂಗಳಿಲಿ ಮೂರು ಸರ್ತಿ ಕೆಲಸ ಬದಲ್ಸುವ ಹಾಂಗೆ ಆಯ್ತು

ಯಾವುದೇ ಲೇಖನ ಬರಿಯುಕೆ ಎಷ್ಟು ಕಷ್ಟ ಹೇಳುದು ಬರಿವವನಿಗೆ ಮಾತ್ರ ಗೊತ್ತಾಗುದು….. ಮನಸ್ಸು ಖಾಲಿ ಖಾಲಿ ಆಗಿರುವಾಗ, “ಭಾವ ಶೂನ್ಯ” ಸ್ಥಿತಿಲಿ ಇರುವಾಗ ಬರಿಯುಕೆ ಕೂತ್ರೆ ಎಂತದೂ ಬರಿಯುಕೆ ಸಾಧ್ಯ ಇಲ್ಲ, ಎಂತೆಂತದೋ ಬರುದು ಹೋದೀತು !

ಅದೇ ರೀತಿ ಎಂತಾದ್ರೂ ಬರಿವೇಕು ಹೇಳಿ ಕಾಣುವಾಗ ಬರಿಯದ್ದೆ ಇರುಕೂ ಆಗುದಿಲ್ಲ…

ಮೊದಲನೇ ಸರ್ತಿ ನಾನು ಮನಸ್ಸಿಗೆ ಕಂಡ ಸಂಗತಿಗಳ ಮನಸ್ಸಿಗೆ ಬಂದ ಹಾಂಗೆ ಬರ್ದಿತ್ತಿದ್ದೆ, ಅದೂ ರೈಲಿಲಿ ಕೂತುಕೊಂಡು !

ಟೈಮ್ ಪಾಸ್ ಮಾಡುಕೆ ಬರ್ದು ಹೇಳಿ ಹೇಳಿರೂ ತಪ್ಪಾವುಕಿಲ್ಲ….. ಹಾಂಗೆ ಬರ್ದ ಲೇಖನಕ್ಕೆ ಹೆಸರು ಕೊಡುವಾಗ “ಪಯಣ” ಹೇಳಿ ಹಾಕಿತ್ತಿದ್ದೆ….

ಆ ಲೇಖನ ಮತ್ತೆ ಮುಂದುವರಿತ್ತಾ ಅದೆ….

ಎಷ್ಟಾದ್ರೂ ಬದುಕು ಹೇಳುದು ಮುಗಿಯದ್ದ ಪ್ರಯಾಣ ಆಲ್ವಾ ?

ಒಂದೊಂದು ದಿನ ಒಂದೊಂದು ಕ್ಷಣವೂ ಹೊಸತ್ತು ಪಾಠ, ಅನುಭವ ಕೊಡ್ತಾ ಇರ್ತೆ……. ಹಳೆ ನೆನಪ್ಪು ಮತ್ತೆ ಮರುಕಳಿಸ್ತಾ ಇರ್ತೆ…..

ಎಷ್ಟೋ ಸಂದರ್ಭಲ್ಲಿ ಆ ಹಳೆ ನೆನಪ್ಪುಗಳು ಪ್ರಸ್ತುತ ಆಗ್ತೆ…. ನಮ್ಮ ಹಿರಿಯವು ಬಾಳಿ ಬದುಕ್ಕಿದ ಕತೆ, ಪಳಮ್ಮೆ ಕೇಳುಕೆ ಖುಷಿ ಆಗ್ತೆ, ನಮ್ಮ ಬದುಕಿಗೆ ಹೊಸ ಪಾಠವೂ ಕಲ್ತ ಹಾಂಗೆ ಆಗ್ತೆ…….

ಎಷ್ಟಾದ್ರೂ ಹಳೆ ಅಡಿಕೆಗೆ ರೇಟು ಜಾಸ್ತಿ ಆಲ್ವಾ ? ಹಳತ್ತು ಹೊಸತ್ತರ ಸೇರ್ಸಿ ಬಂದ ಅನುಭವಂಗಳ ಶಬ್ದ ರೂಪಕ್ಕೆ ಇಳುಸುವ ಪ್ರಯತ್ನ ಮಾಡ್ತಾ ಇದ್ದೇನೆ…..

ನಮ್ಮ ಭಾಷೆ ಸ್ವಲ್ಪ ವಿಚಿತ್ರ….. ಹವಿಗನ್ನಡದ ಒಂದು ಶಾಖೆ ಅದು…. ಶಾಲೆ ಕನ್ನಡ, ಮಡಿಕೇರಿ ಕನ್ನಡ, ಹಳೆಗನ್ನಡ ಎಲ್ಲವೂ ಸೇರಿ ಆದ “ಅವಿಲು”.

ಕೆಲವೇ ಕೆಲವು ಮನೇಲಿ ಈ ಭಾಷೆ ಮಾತಾಡುದು…. ಇತ್ತೀಚಿಗೆ ಈ ಭಾಷೆಯ ಮಾತಾಡುವವ್ವು ಕಮ್ಮಿ ಆಗ್ತಾ ಇದ್ದಾವೆ….

ಕಾರಣ ಇಷ್ಟೇ…. ಮನೆಗೆ ಹೊಸತ್ತಾಗಿ ಬರುವ ಸೊಸೆಯಕ್ಲಿಗೆ ಈ ಭಾಷೆ ಮಾತಾಡುಕೆ ಇಷ್ಟ ಇಲ್ಲ

ನಮ್ಮ ಕಾವಿನಮೂಲೆ ಮನೆತನಲ್ಲಿಯೇ ಎಷ್ಟೋ ಮನೆಲಿ ಈಗ ನಮ್ಮ ಭಾಷೆ ಮಾತಾಡುದಿಲ್ಲ !! ಮಕ್ಕಳಿಗೆ ಸಹಾ ಕಲಿಯುಕಾಗ್ದು ಹೇಳಿ ತಾಕೀತು !!!

ನಾನು ಯಾರನ್ನೂ ದೂರ್ತಾ ಇಲ್ಲ….. ಆದ್ರೆ ಒಂದು ಅಪರೂಪದ ಭಾಷೆ ನಿಧಾನಕ್ಕೆ ಕಾಣೆ ಆಗ್ತಾ ಅದೆ ಹೇಳುವ ಬೇನೆ ಮಾತ್ರ ಅದೆ ಮನಸ್ಸಿಲಿ…..

ಆದ್ರೆ ಈ ಆರೋಪಕ್ಕೆ ಅಪವಾದವೂ ಅದೆ……

ನನ್ನ ಅಜ್ಜನ ದೊಡ್ಡ ಅಣ್ಣನ ಮನೆಲಿ ಎಲ್ಲಾ ಸೊಸೆಯಕ್ಕಳೂ ನಮ್ಮ ಕನ್ನಡಲ್ಲಿಯೇ ಮಾತಾಡುದು……

ನನ್ನ ಲೇಖನಂಗಳ ಓದಿದ ಎಷ್ಟೋ ಜನ ಈ ಭಾಷೆಯ ಮೇಲೆ ಆಸಕ್ತಿ, ಪ್ರೀತಿ ತೋರ್ಸಿದ್ದಾವೆ…..

ನನ್ನ ಕೈ ಹಿಡುದ ಕೃತ್ತಿಕಾ ಈಗಾಗ್ಲೇ ನಮ್ಮ ಭಾಷೆ ಕಲ್ತಾಗಿಯೆದೆ

ಅದು ಎಷ್ಟು ಲಾಯ್ಕಲ್ಲಿ ನಮ್ಮ ಕನ್ನಡ ಮಾತಾಡ್ತೆ ಹೇಳಿರೆ, ನನ್ನ ಅಪ್ಪ ಅಮ್ಮ, ಎಲ್ಲವ್ಕೂ ಖುಷಿಯೋ ಖುಷಿ

ನಮ್ಮ ನೆಂಟ್ರು ಎಲ್ಲವ್ಕೂ ಆಶ್ಚರ್ಯ ! ಎಷ್ಟು ಬೇಗ ಕಲ್ತತ್ತು ಹೇಳಿ !!!
~*~*~
ಅಪ್ಪ, ಅಜ್ಜ ಮಾತಾಡ್ತಾ ಇದ್ದದ್ದು ನೆಂಪಾಗ್ತೆ…..

ಮೊದಲೊಂದು ಕಾಲ ಇತ್ತಂತೆ….. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಕಾಲ…..

ಕೆಲಸದ ಆಳುಗಳು ಬೆಳಿಗ್ಗೆ ಆರು ಆರೂವರೆಗೆಲ್ಲ ಕೆಲಸಕ್ಕೆ ಬಂದು ಬೈಸಾರಿ ಆರು ಏಳು ಘಂಟೆಗೆ ಕೆಲಸ ಬಿಟ್ಟು ಹೋಗ್ತಿದ್ವಂತೆ….. ಸೂರ್ಯೋದಯಂದ ಸೂರ್ಯಾಸ್ತದ ವರೆಗೆ ದುಡುದ್ರೆ ಅವುಕ್ಕೆ ಸಿಕ್ಕಿಕೊಂಡಿದ್ದದ್ದು ದಿನಕ್ಕೆ ಒಂದು ಸೇರು ಭತ್ತ, ವಾರಕ್ಕೆ ಒಂದೆರೆಡು ಸೇರು ಉಪ್ಪು…..

ಬೈಸಾರಿ ಕೆಲಸ ಮುಗುಸಿ ಅವರವರ ಮನೆಗೆ ಹೋಗಿ, ಭತ್ತ ಗುದ್ದಿ, ಅಕ್ಕಿ ಮಾಡಿ, ಗಂಜಿ ಬೇಯ್ಸಿ ಊಟ ಮಾಡ್ವೆಕು !!! ಮರುದಿನ ಬೆಳಿಗ್ಗೆ ಮತ್ತೆ ಸೂರ್ಯ ಹುಟ್ಟುಕೆ ಮೊದಲೆ ಅಂಗಳಲ್ಲಿ ನಿತ್ತುಕೊಂಡು, “ಅಯ್ಯಾ ಇನಿ ಎಂಚಿನ ಬೇಲೆ ?” ಹೇಳಿ ಕೇಳಿಕೊಂಡು ಇತ್ತಿದ್ವಂತೆ…..

ಅಷ್ಟೂ ಬಡತನ ಇತ್ತು ಊರಿಲಿ….. !!! ಇಂದು ಕಾಲ ಸಾಕಷ್ಟು ಬದಲಾಗ್ಯೆದೆ…… ಎಷ್ಟು ಹೇಳಿರೆ ಮನೆ. ತೋಟದ ಕೆಲಸಕ್ಕೆ ಆಳುಗಳೇ ಸಿಕ್ಕದ್ದಷ್ಟು !! ಈಗ ಅಪ್ಪ ಹೇಳ್ತಾವೆ, “ಅಂದು ನಾವು ಆಳುಗಳಿಗೆ ಬಯ್ಕೊಂಡಿತ್ತು, ಈಗ ದಮ್ಮಯ್ಯ ಹಾಕಿ ಕರುದ್ರೂ ಯಾರೂ ಬರುದಿಲ್ಲ”

ಮೊನ್ನೆ ಇತ್ತ “ನಿಲುಮೆ” ಹೇಳುವ ವೆಬ್ ಸೈಟ್ ಲಿ ಒಂದು ಲೇಖನ ಓದಿದೆ…. “ಒಂದು ತುತ್ತು ಅನ್ನ, ಎರಡು ತೊಟ್ಟು ಕಣ್ಣೀರು” ಹೇಳಿ….. ಮದುವೆ ಮನೆಲಿ ಉಳುದ ಅನ್ನ, ಎಂಜಲು ಬಾಳೆ ಲಿ ಉಳುದ ಆಹಾರಕ್ಕೆ ಮುಗಿ ಬೀಳುವ ಬಡವರ ಬಗ್ಗೆ ರವಿ ಮೂರ್ನಾಡು ಹೇಳುವ ಜನ ಬರ್ದ ಸುದ್ದಿ……

ಓದಿಯಾಗುವಾಗ ನಮ್ಮ ಊರಿಲಿ ಇದ್ದ ಬಡತನ, ಅನ್ನಕ್ಕೆ ಬೇಕಾಗಿ ಜನ ಕಷ್ಟಪಟ್ಟುಕೊಂಡು ಇದ್ದ ದಿನಂಗಳು ನೆನಪ್ಪಾಯ್ತು…..

ಆರಂಡ ಅದ್ದುಲ್ಲ ಇಚ್ಚ ಹೇಳುವ ಒಂದ ಜನ ಅದೆ ಅಂತೆ…..

ಭಾರೀ ಒಳ್ಳೆ ಕೃಷಿಕ, ಒಳ್ಳೆ ಗಾರ್ಡನ್ ಮಾಡುವ ಜನ…. ಈಗ ಪ್ರಾಯ ಆಗಿಯೇದೆ ಆದ್ರೆ ಮೊದಲು ಒಂದು ಕಾಲಲ್ಲಿ ತುಂಬಾ ಕಷ್ಟ ಪಟ್ಟು ದುಡುದ ಜನ….

ಅದು ಎಲ್ಲಿಯೋ ಒಂದು ನಮ್ಮವರ ತೋಟಲ್ಲಿ ಕೆಲಸಕ್ಕೆ ಹೋಯ್ಕೊಂಡಿತ್ತಂತೆ…. ಆ ಕಾಲ ಹೆಂಗಿತ್ತು ಹೇಳಿರೆ ಮರಂದ ಬಿದ್ದ ಹಲಸಿನ ಹಣ್ಣಿಗೂ ಜನ ಹಾತೊರೆಯುವ ಬಡತನ !

ಕೆಲಸದ ಆಳುಗಳು ಯಾರೂ ಹಲಸಿನ ಹಣ್ಣು ಕೊಯ್ದು ತಿನ್ನುವ ಹಾಂಗೆ ಇಲ್ಲ !

ಆ ತೋಟದ ರೈಟರ್ ಒಬ್ಬ ಇತ್ತಿದ್ದಂತೆ ನಮ್ಮವ…… ಅವನೂ ಪಾಪದವನೇ….. ಹೊಟ್ಟೆ ಪಾಡಿಗೆ ಬೇಕಾಗಿ ರೈಟನ ಕೆಲಸ ಮಾಡಿಕೊಂಡಿತ್ತಿದ್ದ…..

ಒಂದು ದಿನ ತೋಟದ ಹಲಸಿನ ಮರಲ್ಲಿ ಒಂದು ಹಲಸಿನ ಹಣ್ಣಿನ ಕಾಕೆ ಒಕ್ಕಿ ತಿಂತಂತೆ….

ಅದ್ಲಿಚ್ಚ ಇನ್ನೊಂದು ಆಳಿನ ಒಟ್ಟಿಗೆ ಹೋಗಿ ಆ ಒಟ್ಟೆ ಆದ ಹಲಸಿನ ಹಣ್ಣಿನ ಕೊಯ್ಯುಕೆ ಹೋಗಿಯಾಗುವಾಗ ರೈಟ ಬಂದು ಜೋರು ಮಾಡಿ ಆಚೆ ಕಳ್ಸಿದ…..

ಆ ಹಣ್ಣಿನ ಕೊಯ್ದು ತೋಟದ ಯಜಮಾನನಿಗೆ ತಲ್ಪಿಸಿದ…..

( ಆ ತೋಟದ ಯಜಮಾನ ಯಾರು ? ರೈಟ ಯಾರು ಹೇಳುದು ಅಪ್ರಸ್ತುತ. ರೈಟ ಅವನ ಕರ್ತವ್ಯ ಮಾಡಿದ ಅಷ್ಟೇ ! ಅವನ ತಪ್ಪಿಲ್ಲ ಅಲ್ವಾ ??)

ಆಗ ಬೇಜಾರಲ್ಲಿ ಅದ್ಲಿಚ್ಚ ಹೇಳಿದ ಮಾತು “ಛೆ ನಮ ಆ ಕಕ್ಕೆ ಆತ್ ಪುಟ್ಟೋಡಿತ್ತ್ ನ್ಡ ಪೆಲಕ್ಕಾಯಿ ಆಂಟಲಾ ತಿನ್ನೋಲಿತ್ತ್ ನ್ದ್” (” ಛೆ ನಾವು ಆ ಕಾಕೆ ಆಗಿ ಹುಟ್ಟಿರ್ತಿದ್ರೆ ಹಲಸಿನ ಹಣ್ಣಾದರೂ ತಿನ್ನುವೋದಿತ್ತು”)

ಅಪ್ಪ ಹೇಳಿದ ಆ ಕತೆ ಯಾವತ್ತಿಗೂ ಮರಿಯುಕೆ ಸಾಧ್ಯ ಇಲ್ಲ…. ಬಡತನದ ಪರಮಾವಧಿ ಇತ್ತು ಊರಿಲಿ…..

ಅನ್ನ ಹೇಳಿರೆ ದೇವರು ಹೇಳಿ ಸುಮ್ಮನೆ ಹೇಳುದಲ್ಲ ಆಲ್ವಾ ? ಜಂಬ್ರದ ದಿನ ಉಂಡ ಬಾಳೆಲೆಯ ಹೊರಗೆ ಬಿಸಾಕುದೆ ತಡ, ಹೊಲೆಯರು, ಅಜಲರು ಎಲ್ಲಾ ಬಂದು ಮುಗಿ ಬೀಳ್ತಿದ್ವಂತೆ ಅದ್ರಲ್ಲಿ ಉಳುದ ಅನ್ನವ ಹಾಳೆ ಪಡಿಗೆಲಿ ತುಂಬ್ಸಿಕೊಂಡು ಹೋಗ್ತಿದ್ವಂತೆ…..

ಊರಿಲಿ ಎಲ್ಲಿಯಾದ್ರೂ ಜಂಬ್ರ ಆಯ್ತು ಹೇಳಿರೆ ಸಾಕು, ಊರಿಗೆ ಊರೇ ಹಾಜರು !!

ಹೇಳಿಕೆ ಹೇಳಿ ಬರುದಲ್ಲ ! ಎಲ್ಲವೂ ಸಾಲುಗಟ್ಟಿ ಬರುದೇ !!! ನನ್ನ ಅಜ್ಜನ ಅಪ್ಪ (ಪಿಜ್ಜ) ನ ವರ್ಶಾಂತಿಕಲ್ಲಿ ಹಾಂಗೆ ಆಗಿತ್ತಂತೆ…..

ಮೊದಲಾಣ ಹಂತಿ ಊಟ ಮುಗ್ಸಿ ದೇರಾಜೆ ಸೀತಾರಾಮಯ್ಯ ಮೊದಲಾದವು ಗೇಟಿಂದ ಹೊರಗೆ ಬರುಕೆ ಸಾಧ್ಯ ಆಗದ್ದಷ್ಟು ನೂಕುನುಗ್ಗಲು !!!

ಹೊರಗೆ ಬರುವವರ ತಳ್ಳಿ ಒಳಗೆ ನುಗ್ಗುವ ಜನಸಾಗರ !!!

ಪುಣ್ಯಕ್ಕೆ ನಮ್ಮ ಊರಿಲಿ ಇಂದು ಆ ಸಂಕಷ್ಟದ ದಿನಂಗಳು ಇಲ್ಲ

ಆದ್ರೆ ಅನ್ನದ ಬೆಲೆಯೂ ಜನಕ್ಕೆ ಗೊತ್ತಿಲ್ಲ ಬೆಂಗ್ಳೂರಿಲಿ ಕೆಲವು ಜಾಗೆಲಿ ಅಂಥಾ ಬಡತನ ಇನ್ನೂ ಅದೆ

ಹಾಂಗೆ ಹೇಳಿ ಜಗತ್ತಿಲಿ ಪೈಸೆ ಓಡಾಡ್ತಾ ಇಲ್ವಾ ???

ಇಂದು ನಾನು ಕೆಲಸ ಮಾಡ್ತಾ ಇರುದು ಲೀಲಾ ಪ್ಯಾಲೇಸ್ ಹೇಳುವ ಫೈವ್ ಸ್ಟಾರ್ ಹೋಟೆಲ್ ಲಿ……

ಇಲ್ಲಿಯಾಣ ಒಂದು ಊಟಕ್ಕೆ ಎರಡು ಸಾವಿರಂದ ನಾಕು ಸಾವಿರ ರುಪಾಯಿ ಅದೆ !!!

ಆದರೂ ಮೊದಲೆ ಬುಕ್ ಮಾಡದ್ರೆ ಕೂರುಕೆ ಜಾಗೆ ಇಲ್ಲ !!!

ಶಿವರಾಮ ಕಾರಂತರು ಹೇಳಿತ್ತಿದ್ವಂತೆ “ಬರ ಬಂತು ಹೇಳಿ ಜನ ಮಸಾಲೆ ದೋಸೆ ತಿನ್ನುದು ಬಿಡ್ತಾವಾ ?”.
~*~*~

ಮಾಳಿಗೆ ಮೇಲೆ ನಿತ್ತುಕೊಂಡಿದ್ದ ಒಂದು ಅಜ್ಜ “ಹಲೋ” ಹೇಳಿ ಕೈ ಬೀಸಿತ್ತು…..

ನಾನು ಇದ್ಯಾಕಪ್ಪಾ ಈ ಜನ ಗುರ್ತ ಇಲ್ಲದ್ದು “ಹಲೋ” ಹೇಳ್ತಾ ಅದೆ ಹೇಳಿ ಆಶ್ಚರ್ಯಲ್ಲಿ ನೋಡಿಕೊಂದಿರುವಾಗಲೇ ನನ್ನ ಬೈಕಿನ ಎದುರಾಣ ಟಯರು ಗಸಕ್ಕನೆ ಗುಂಡಿಗೆ ಬಿತ್ತು

ಮತ್ತೆ ನೋಡಿರೆ ಎಂತ ? ಅಲ್ಲಿ ಒಂದು ಮ್ಯಾನ್ ಹೋಲಿನ ಸುತ್ತ ಮಳೆ ನೀರು ನುಗ್ಗಿ ಒಳ ಚರಂಡಿ ಕುಸುದು ಗುಂಡಿ ಆಗಿತ್ತು….

ಹೊಸತ್ತಾಗಿ ಮಾಡಿದ drainage ಎಲ್ಲಾ ತೊಳ್ಕೊಂಡು ಹೋಗಿ ನೀರು ತುಂಬಿಕೊಂಡಿತ್ತು ಗೋವಿಂದ !!

ನಾನು ಮೊದಲೆ ಆಫೀಸಿಗೆ ಲೇಟಾಯ್ತು ಹೇಳಿ ಗಡಿಬಿಡಿಲಿ ಹೊರಟಿತ್ತಿದ್ದೆ, ಬೈಕು ಗುಂಡಿಗೆ ಪಡ್ಚ !!

ಆಚೆ ಈಚೆ ನೋಡಿರೆ ಮೇಲಾಣ ಮನೆ ಅಜ್ಜ ಹೇಳ್ತಾ ಅದೆ, “I told you know ? There is a pit” ದೇವರೇ ಗತಿ ಹೇಳಿ ಬೈಕಿಂದ ಇಳುದೆ…..

ಅಷ್ಟ್ರಲ್ಲಿ ಅಲ್ಲಿ ಎರಡು ಮೂರು ಜನ ಸಣ್ಣ ಸಣ್ಣ ಮಕ್ಕಳು ಬಂದ್ವು…. ಆರ್ನೆಯೋ ಎಳ್ನೆಯೋ ಕ್ಲಾಸ್ ಇರುವೋದು….

“ಏನಾಯ್ತು ಅಂಕಲ್ ? ಜಾಸ್ತಿ ಏನೂ ಆಳ ಇಲ್ಲ ಅಂಕಲ್ ಬನ್ನಿ ಎತ್ತೋಣ” ಹೇಳಿ ಹೇಳಿಕೊಂಡು ಒಂದು ಹುಡುಗ ಎದುರಾಣ ಟಯರು, ಇನ್ನೊಂದು ಹುಡುಗ ಹಿಂದಾಣ ಚಕ್ರ ಹಿಡ್ಕೊಂಡು ನಾನು handle ಹಿಡ್ಕೊಂಡು ನೇಚಿ ಈಚೆ ಇಟ್ಟಾಯ್ತು

ನನಿಗೆ ಸಾಕೋ ಸಾಕು ಹೇಳಿ ಕಂಡತ್ತು……

ಸ್ವಲ್ಪ ಮುಂದೆ ಹೋಗಿ ನೋಡಿರೆ ಪೂರ್ತಿ ನೀರೇ ನೀರು ! ಎಲ್ಲಾ ಖಾಲಿ ಸೈಟಿನೊಳಗೆ ನೀರು ತುಂಬಿಕೊಂಡದೆ !

ನನ್ನ ಶೂವಿನ ಒಳಗೂ ಎರಡು ಪಾಟೆ ಆಗುವಷ್ಟು ನೀರು

ಮಳೆಗಾಲಲ್ಲಿ ಊರಿನ ತೋಡು, ಉಜಿರುಕಣಿ ತುಂಬಿ ಪಾಜಪಳ್ಳ ಹೊಳೆ ತುಂಬಿ ಮಾರ್ಗಲ್ಲೆಲ್ಲಾ ನೀರು ನಿತ್ರೆ ಹೆಂಗಿರ್ತೋ ಹಾಂಗೆ !!!

ಅಂತೂ ಬೈಕು ತೋಡು ದಾಟ್ಸಿದ ಅನುಭವ !! ಬೆಂಗಳೂರಿನಂಥಾ ಮಹಾ ನಗರಲ್ಲಿಯೂ ಊರಿನ ನೆನಪ್ಪು ತಂದುಕೊಟ್ಟ ರಾಜಕಾರಣಿಗಳಿಗೆ ಥ್ಯಾಂಕ್ಸ್ ಹೇಳ್ವೇಕು ಹೇಳಿ ನೆಗೆ ಮಾಡಿಕೊಂಡು ಹೊರಟೆ…….
~*~*~

ದಿನ ಎಷ್ಟು ಬೇಗ ಕಳಿತ್ತೆ ಹೇಳಿ ಗ್ರೆಶಿರೆ ಆಶ್ಚರ್ಯ ಆಗ್ತೆ !

ತೀರಾ ಇತ್ತೀಚಿಗೆ ಡೆಲ್ಲಿ ಲಿ ಕೆಲಸಲ್ಲಿ ಇತ್ತಿದ್ದೆ, ಮೊನ್ನೆ ಮೊನ್ನೆ ಲೀಲಾ ಪ್ಯಾಲೇಸ್ ಲಿ ಕೆಲಸಲ್ಲಿ ಇತ್ತಿದ್ದೆ, ಇಂದು ಆ ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಮಾಡ್ತಾ ಇದ್ದೇನೆ !

ವರ್ಷಕ್ಕೆ ಮೂರು ಕಡೆ job change ಮಾಡುದು resume ನ ಆರೋಗ್ಯಕ್ಕೆ ಒಳ್ಳೇದಲ್ಲ ಹೇಳಿ ಗೊತ್ತಿದ್ದೂ ನಾನು “ಕಂಪೆನಿಯಾಂತರ” (ಪಕ್ಷಾಂತರಕ್ಕೆ ಹೀಂಗೊಂದು ಹೆಸರು ಇಟ್ರೆ ಹೆಂಗೆ ?) ಮಾಡಿದ್ದೇನೆ !

ಈ ಎಲ್ಲಾ ಹಾರಾಟಕ್ಕೂ ನನ್ನದೇ ಆದ ‘ಸಕಾರಣ’ ಅದೆ. ಆದರೂ ಇದು ಒಳ್ಳೇದಲ್ಲ ಅಲ್ವಾ ??

ನಾನು ಬೆಂಗಳೂರಿಗೆ ಬಂದ ಶುರುವಿಗೆ ಬರೆದ ಒಂದು ಪದ್ಯ ನೆನಪ್ಪಾಗ್ತಾ ಅದೆ.

ಬೆಂದ ಕಾಳೂರಿನಲಿ
ಬೆಂದು ಹೋಗಿದೆ ಜೀವ
ಭರದಿ ಓಡುತಲಿರುವ
ಕಾಲಕ್ಕೆ ಸಿಲುಕಿ…

ದಪ್ಪ ನೋಟಿನ ಕಂತೆ,
ಕೆಟ್ಟ ನೋಟದ ಸಂತೆ,
ಬಿಸಿಗಾಳಿ ಬೆವರುಗಳ
ಸಾಗರವ ಕಲುಕಿ…..

ಬದುಕು ನನ್ನ ತೆಕ್ಕೊಂಡು ಹೋದ ಹಾಂಗೆ ನಾನು ಹೋಗ್ತಾ ಇದ್ದೇನೆ. ಎಷ್ಟೋ ಸರ್ತಿ ನಾನು ಗ್ರೆಶುತ್ತೇನೆ, ನಾನು ಬದುಕಿನ ಸೀರಿಯಸ್ ಆಗಿ ತೆಕ್ಕೊಳ್ಳುದೇ ಇಲ್ಲ ಹೇಳಿ !

ನಾನು ಇಂದು ಏನಾಗಿದ್ದೇನೆ, ಮುಂದೆ ಏನಾಗ್ವೇಕು ಹೇಳಿ ಯೋಚನೆ ಮಾಡಿ ತಲೆ ಹಾಳುಮಾಡಿಕೊಂಡ ದಿನವೂ ಇಲ್ಲದ್ದೆ ಅಲ್ಲ. ಆದ್ರೆ ಬಂದದ್ರ ಬಂದ ಹಾಂಗೆ ಸ್ವೀಕಾರ ಮಾಡಿರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಹೇಳಿ ನನ್ನ ಭಾವನೆ.
~*~*~

ಸಾವು ನಮ್ಮ ಕಾದಿದಷ್ಟು ಬೇರೆ ಯಾವುದೂ ಕಾಡುದಿಲ್ಲ ಹೇಳುದು ನನ್ನ ಭಾವನೆ. ಹುಟ್ಟು ಸಾವು ಎರಡೂ ನಮ್ಮ ಕೈಲಿ ಇಲ್ಲ ಹೇಳಿ ಗೊತ್ತಿದ್ದೂ ಸಾವು ನಮ್ಮ ಕೊರಿತ್ತೆ.

ಮೊನ್ನೆ ಇತ್ತ ನನ್ನ ಗುರ್ತದ ಒಬ್ಬ ಮಾಣಿ ತೀರಿಕೊಂಡ. ಸಣ್ಣ ಪ್ರಾಯ. ಆ ಸುದ್ದಿ ಕೇಳಿ ಮನಸ್ಸು ಎಷ್ಟು ಆಘಾತ ಆಯಿತು ಹೇಳಿರೆ, ಮನುಷ್ಯನ ಬದುಕು ಹೇಳಿರೆ ಇಷ್ಟೆಯಾ ಹೇಳಿ ಕಂಡತ್ತು.

ಹುಟ್ಟು ನಮ್ಮ ಹೆಚ್ಚು ಕಾಡುದಿಲ್ಲ ಆದ್ರೆ ಸಾವು ಮಾತ್ರ ಮನಸ್ಸಿನ ಕೊರಿತ್ತೆ. ದೀರ್ಘ ಆಲೋಚನೆಗೆ ತೊಡಗಿಸುತ್ತೆ. ನಾವು ಎಲ್ಲವೂ ಸಾಯುವವೇ ಆದ್ರೆ ಆ ಸತ್ಯ ಜೀರ್ಣ ಮಾಡಿಕೊಳ್ಳುಕೆ ಮಾತ್ರ ಕಷ್ಟ ಆಗ್ತೆ…..

ಪ್ರತಿ ದಿನ ಪ್ರತಿ ಕ್ಷಣವೂ ನಾವು ಸಾವಿನ ಮಹಾ ಮನೆಯ ಕಡೆಗೆ ಹೆಜ್ಜೆ ಹಾಕುತ್ತಾ ಇರ್ತೇವೆ.

ಗೊತ್ತಿದ್ದೋ ಗೊತ್ತಿಲ್ಲದ್ದೆಯೋ ನಾವು ಆ ಮಹಾ ಪ್ರಸ್ಥಾನಕ್ಕೆ ಮುಖ ಮಾಡಿಯೇ ಇರ್ತೇವೆ ಅಲ್ವಾ ?

ಆ ನಿತ್ಯ ಸತ್ಯದ ಕಡೆಗೆ ನಮ್ಮ ಎಲ್ಲರದ್ದೂ ಕೊನೆಯಿಲ್ಲದ “ಪಯಣ”.



~*~*~

ಪಯಣ – 2

ಅಂದು ಯಾವಾಗಲೋ ಒಂದು ದಿನ ಊರಿಂದ ಬೆಂಗ್ಳೂರಿಗೆ ಹೋಗುವಾಗ ರೈಲಿಲಿ ಕೂತು ಮನಸ್ಸಿಗೆ ಕಂಡದ್ರ ಬರ್ದಿತ್ತಿದ್ದೆ.

ಇಂದು ಅದೇ ಭಾರತೀಯ ರೈಲ್ವೇ ನನ್ನ ಇಷ್ಟು ದೂರ ತಂದು ಕೂರ್ಸಿಯೆದೆ, ದಿಲ್ಲಿಲಿ !

ಕೆಲಸದ ಹುಡುಕಾಟಲ್ಲಿ ತಲೆ ಹಾಳು ಮಾಡಿಕೊಳ್ಳದ್ದವು ಯಾರಿದ್ದಾವೆ ?

ನಾನೂ ಸ್ವಲ್ಪ ಸಮಯ ತಲೆ ಬಿಶಿ ಮಾಡಿ ಮನಸ್ಸು ಹುಳಿ ಮಾಡಿಕೊಂಡೆ. ಅವಾಗ ಸಿಕ್ಕಿದ್ದು ಈ ಕೆಲಸ.

ಡೆಲ್ಲಿ ಲಿ ಕೆಲಸ ಹೇಳಿಯಾಗುವಾಗಲೇ ಎಲ್ಲವ್ರದ್ದೂ ಒಂದೇ ಪ್ರಶ್ನೆ, ಅಷ್ಟು ದೂರವಾ ? ಎಂತಕೆ ? ಇಲ್ಲಿಯೇ ಸಿಕ್ಕುದಿಲ್ವಾ ಒಳ್ಳೆ ಕೆಲಸ ?

ನನಿಗೆ ಇಂಥಾ ಒಂದು ಬ್ರೇಕ್ ಅಪ್ ಬೇಕಿತ್ತು. ಹಿಮ ಆಗುವ ಆಸೆ !

ದಿಲ್ಲಿ ಹೇಳಿರೆ ಉತ್ತರ ಭಾರತದ ಹೃದಯ. ಅಲ್ಲಿಂದ ಹಿಮಾಲಯ ತುಂಬಾ ಹತ್ರ !

ಆ ಆಸೆಯೇ ನನ್ನ ಇಷ್ಟು ದೂರ ಕರ್ಕೊಂಡು ಬಂತು ಹೇಳಿರೂ ತಪ್ಪಾವ್ಕಿಲ್ಲ.

ಅದೊಂದು ದಿನ ಸೀದಾ ರೈಲು ಹತ್ತಿ ಡೆಲ್ಲಿಗೆ ಬಂದೇ ಬಿಟ್ಟೆ. ರೈಲಿಲಿ ಹೋಗುದು ಹೇಳಿರೆ ತುಂಬಾ ಖುಶಿ ನನಿಗೆ. ರೈಲು ಹೇಳಿರೆ ಒಂದು ಮಿನಿ ಭಾರತದ ಹಾಂಗೆ ಅಲ್ವಾ ?

ಬೆಂಗ್ಳೂರಿಂದ ರಿಸರ್ವೇಶನ್ ಸಿಕ್ಕದ್ದೆ ಚೆನ್ನೈಗೆ ಹೋಗಿ ಅಲ್ಲಿಂದ ಡೆಲ್ಲಿಗೆ ರೈಲು ಹತ್ತಿದೆ. ಊರು ಸುತ್ತುದು ಹೇಳಿರೆ ಯಾರಿಗೆ ಖುಶಿಯಾಗುದಿಲ್ಲ ???

ಚೆನ್ನೈಲಿ ನನ್ನ ಫ್ರೆಂಡ್, ದೂರದ ನೆಂಟ್ರು ರಾಧಿಕನ ಮನೆಗೆ ಹೋಗಿ ಮಾತಾಡ್ಸಿ, ಊಟ ಮಾಡಿಯೂ ಆಯ್ತು.

ಡೆಲ್ಲಿಲಿ ಪರಿಚಯದವು ಯಾರಾರು ಇದ್ದಾವಾ ಹೇಳಿ ಮೊದಲೇ ಅಲೋಚನೆ ಮಾಡಿತ್ತಿದ್ದೆ.

ಅವಾಗ ಚಿಕ್ಕಯ್ಯ ಹೇಳಿದ, ನಮ್ಮ ಶೆಟ್ರು ಇದ್ದಾವಲ್ಲಾ ? ನಾನು ಮಾತಾಡ್ತೇನೆ. ಆ ಜನ ಎಲ್ಲಾ ವ್ಯವಸ್ತೆ ಮಾಡೀತು ಹೇಳಿ.

ವಸಂತ ಶೆಟ್ಟಿ ಯ ನಂಬರೂ ಕೊಟ್ಟ ಚಿಕ್ಕಯ್ಯ.

ಡೆಲ್ಲಿ ಯ ನಿಜಾಮುದ್ದೀನ್ ರೈಲ್ವೆ ಸ್ಟೇಶನ್ ಲಿ ಬಂದು ಇಳಿಯುವಾಗ ಎಂತದೋ ಒಂದು ಹೆದ್ರಿಕೆ.

ಗೊತ್ತು ಪರಿಚಯ ಇಲ್ಲದ್ದ ಜಾಗೆಲಿ ಒಬ್ಬನೇ ಬಂದದ್ದು ಇದೇ ಮೊದಲು. ಭಾರೀ ಜಾಗ್ರತೆ ಬೇಕು ಹೇಳಿ ಎಲ್ಲವೂ ಹೇಳಿಯೇ ಕಳ್ಸಿದ್ದು.

ಆದ್ರೂ ಒಂದು ಪೊಟ್ಟು ಧೈರ್ಯ ಮಾಡಿ ಹೊರಟಾಗಿಯೆದೆ. ನೀರಿಗೆ ಇಳುದ ಮೇಲೆ ಚಳಿ ಹೇಳಿ ಹಿಂದೆ ಬರುಕಾಗ್ದಲ್ವಾ ?

ಹಾಂಗೂ ಹೀಂಗೂ ಡೆಲ್ಲಿಯ ಕರ್ನಾಟಕ ಸಂಘಕ್ಕೆ ಬಂದು ತಲ್ಪಿದೆ. ಅಲ್ಲಿ ಉಳ್ಕೊಳ್ಳುಕೆ ವ್ಯವಸ್ತೆ ಮಾಡಿ ಆಗಿತ್ತು ಶೆಟ್ರು.

ಮರುದಿನ ಗುರ್ಗಾಂವಿಗೆ ಹೊರಟೆ. ದಾರಿ ಕೇಳಿಕೊಂಡು ಹೋಗುದು ಬೆಂಗ್ಳೂರಿನಷ್ಟು ಸುಲಭ ಅಲ್ಲ ಇಲ್ಲಿ.

ಯಾರತ್ರ ಕೇಳಿರೂ ಸರಿಯಾದ ದಾರಿ ಹೇಳಿಯಾವು ಹೇಳಿ ನಂಬುವ ಹಾಂಗೆ ಇಲ್ಲ. ಇಫ್ಕೋ ಚೌಕಕ್ಕೆ ಬಂದು ಅಲ್ಲಿಂದ ಹೊಸ ಕಂಪೆನಿಗೆ ದಾರಿ ಹುಡ್ಕಿಯಾಗುವಾಗ ಸಾಕು ಸಾಕಾಯ್ತು.

*************

ಮನುಷ್ಯ ಎಷ್ಟು ಸ್ವಾರ್ಥಿ ಅಲ್ವಾ ?

ನಮ್ಮ ಒಟ್ಟಿಗೆ ಇದ್ದವು ಬಿಟ್ಟು ಹೋದ ಮೇಲೆ ಸ್ವಲ್ಪವೇ ಸಮಯಲ್ಲಿ ಅವರ ನೆನಪ್ಪೂ ನಮ್ಮ ಬಿಟ್ಟು ಹೋಗ್ತೆ !

ನಾವು ಒಟ್ಟಿಗೆ ಕಳುದ ಎಲ್ಲಾ ಸುಂದರ ಕ್ಷಣಗಳು ನೆನಪ್ಪಾಗಿ ಉಳಿತ್ತೆ, ಸ್ವಲ್ಪ ದಿನ ಕಳುದ ಮೇಲೆ ಅದೂ ಮಾಸಿ ಹೋಗ್ತೆ !

ಅಜ್ಜ ನಮ್ಮ ಬಿಟ್ಟು ಹೋಗಿ ಎರಡು ವರ್ಷ ಆಗ್ತಾ ಬಂತು. ಲ್ಯಾಪ್‌ಟಾಪಿಲಿ ಕುರುಟಿಕೊಂಡು ಇರುವಾಗ ಅಜ್ಜನ ಫೋಟೋ ಇರುವ ಫೋಲ್ಡರ್ ಕಂಡತ್ತು.

ತೆಗುದು ನೋಡಿರೆ, ಅಜ್ಜನ ನೆಗೆ ಮಾಡಿಕೊಂಡಿರುವ ಮೋರೆ !

ಎಲ್ಲಾ ಫೋಟೋ ನಾನೆ ತೆಗುದ್ದು. ನನ್ನ ಹತ್ರ ಕ್ಯಾಮರಾ ಇರಲ್ಲ ಮೊದುಲು. ಡಿಗ್ರಿ ಲಿ ಆಲ್ ಇಂಡಿಯಾ ಟೂರು ಹೋವುಕಾಗುವಾಗ ಒಂದು ಕ್ಯಾಮರಾ ತೆಕ್ಕೊಂಡೆ.

ರೀಲು ಹಾಕುವ ಕೊಡೆಕ್ ಕ್ಯಾಮರ. ಅವಾಗ ಅಜ್ಜನ ಫೋಟೊ ತೆಗ್ದ ನೆನಪ್ಪಿಲ್ಲ. ಮತ್ತೆ ಡಿಗ್ರಿ ಮುಗುಸಿ ಕಾಫಿ ಡೇ ಲಿ ಕೆಲಸಕ್ಕೆ ಸೇರಿದ ಮೇಲೆ, ತಂಗಿಯ ಮದುವೆಗಾಗುವಾಗ ಡಿಜಿಟಲ್ ಕ್ಯಾಮರಾ ತೆಕ್ಕೊಂಡೆ.

ಮತ್ತೆ ಅಜ್ಜನ ಸುಮಾರು ಫೋಟೊ ತೆಗ್ದೇನೆ. ಈಗ ಮನೆಲಿ ಗೋಡೆ ಮೇಲೆ ಇರುವ ಅಜ್ಜನ ಫೋಟೊವ ನಾನೇ ತೆಗುದ್ದು.

ಹುಟ್ಟಿ ಬೆಳ್ದ ಮನೆ ಬಿಟ್ಟು ಎರಡೂವರೆ ಸಾವಿರ ಕಿಲೋಮೀಟರ್ ದೂರ ಬಂದು ಕೂತಿದ್ದೇನೆ !

ಮೂರು ತಿಂಗಳಾಯ್ತು ಮನೆಗೆ ಹೋಗದ್ದೆ. ನಾಡುದ್ದು ಹೊರಡುದು ಊರಿಗೆ.

ಅದ್ಯಾಕೋ ಗೊತ್ತಿಲ್ಲ, ಇದ್ದಕ್ಕಿದ್ದ ಹಾಂಗೆ ಲ್ಯಾಪ್ ಟಾಪಿಲಿ ಇರುವ ಎಲ್ಲಾ ಫೋಟೋ ನೋಡುಕೆ ಶುರು ಮಾಡಿದೆ.

ಮನೆಲಿ ತೆಗ್ದ ಫೋಟೋಗಳ ನೋಡುವಾಗಳೇ ಒಂಥರಾ ಬೇಜಾರಾವುಕೆ ಶುರುವಾಯ್ತು. ಮನೆ ನೆನಪ್ಪು ಯಾರಿಗೆ ಆಗುದಿಲ್ಲ ?

ಅಮ್ಮ, ಅಪ್ಪ, ಅಜ್ಜಿ, ಚಿಕ್ಕಯ್ಯ, ಚಿಕ್ಕಮ್ಮ, ತಮ್ಮಂದ್ರು, ತಂಗಿ, ಅದ್ರ ಅಮ್ಳಿ ಮಕ್ಕುಳು, ಭಾವ, ಮನೆ, ತೋಟ, ದನದ ಹಟ್ಟಿ, ಹೀಂಗೆ ಎಲ್ಲವೂ ಕಣ್ಣು ಮುಂದೆ ಸಾಲಿಕಟ್ಟಿ ಬಂತು.

ಅಜ್ಜನ ಫೋಟೋ ನೋಡುವಾಗ ಕಣ್ಣಿಲಿ ನೀರು ಬಂತು.

*************

ಅಜ್ಜನ ನೆನಪ್ಪಾಗುವಾಗ ನನ್ನ ಕಣ್ಣಿಗೆ ಕಟ್ಟುದು ಒಂದೇ ಒಂದು ದೃಶ್ಯ, ಅಜ್ಜ ನಮ್ಮ ಬಿಟ್ಟು ಹೋದ ದಿನ, ತಣ್ಣಗಾದ ಅಜ್ಜನ ಕಾಲು ಹಿಡ್ಕೊಂಡು ನಾನು ಕೂಗಿದ್ದು.

ಆ ಕಾಲಿನ ಮೇಲೆಯೇ ಅಲ್ವಾ ನಾನು ಸಣ್ಣಾಗಿರುವಾಗ ಮನಿಕ್ಕೊಂಡಿದ್ದದ್ದು ? ಹಾಲಿಲಿ ರಸ್ಕು ಅದ್ದಿ ಅಜ್ಜ ನನ್ನ ಬಾಯಿಗೆ ಕೊಟ್ಟುಕೊಂಡಿದ್ದದ್ದು ?

ನಾನು ರಸ್ಕು ತಿಂದು ಮನಿಕ್ಕೊಂಡಿರುವಾಗಲೇ ತಾಚಿ ಮಾಡಿದ್ದು ? ಅಜ್ಜ ತೀರಿಕೊಂಡ ದಿನ ಮಂಗ್ಳೂರು ಆಸ್ಪತ್ರೆಂದ ಆಂಬ್ಯುಲೆನ್ಸಿಲಿ ಮನೆಗೆ ಬರುವಾಗ ನಾನು ಹಟ ಮಾಡಿ ಅಜ್ಜನ ಒಟ್ಟಿಗೆ ಕೂತೆ.

ನನಿಗೆ ಆ ಕಾಲಿನ ಮುಟ್ಟುವೇಕಿತ್ತು, ಅಕೇರಿಯಾಣ ಸರ್ತಿ. ಮತ್ತೆ ಯಾವತ್ತೂ ಸಿಕ್ಕುದಿಲ್ಲ ನಾನು ಮನಿಕ್ಕೊಂಡಿದ್ದ ಆ ಕಾಲು ನನಿಗೆ.

ಮನೆಗೆ ಬಂದು ಅಜ್ಜನ ದಕ್ಷಿಣಕ್ಕೆ ತಲೆ ಇರ್ಸಿ ದರ್ಭೆಲಿ ಮನಿಗಿಸಿದ ಮೇಲೂ ಕಾಲು ಬಿಡುವೇಕು ಹೇಳಿ ಕಾಣಲ್ಲ ನನಿಗೆ.

ಅಜ್ಜನ ಆಸ್ಪತ್ರೆಗೆ ಸೇರ್ಸಿ ಅಜ್ಜ ಸೀರಿಯಸ್ ಹೇಳಿ ಆದ ಮೇಲೆ ಕೂಡ್ಲೇ ಹೊರಟು ಬಾ ಹೇಳಿ ಅಪ್ಪ ಫೋನ್ ಮಾಡಿದ್ವು.

ಬೆಂಗ್ಳೂರಿಂದ ಮಂಗ್ಳೂರಿಗೆ ಬಸ್ಸಿಲಿ ಬರುವಾಗಲೇ ಕೂಗುಕೆ ಶುರುಮಾಡಿತ್ತಿದ್ದೆ ನಾನು. ಆಸ್ಪತ್ರೆಗೆ ಬಂದು ತಲ್ಪಿಯಾಗುವಾಗ ಅಜ್ಜನಿಗೆ ಆಕ್ಸಿಜನ್ ಹಾಕಿ ಮನುಗಿಸಿತ್ತಿದ್ವು.

ಪಲ್ಸ್ ರೇಟ್ ಚೂರು ಚೂರೇ ಕಮ್ಮಿ ಆಗ್ತಾ ಬರ್ತಿತ್ತು. ಕಣ್ಣೆದುರೇ ಅಜ್ಜ ನಮ್ಮಂದ ದೂರ ಆಗ್ತಾ ಇತ್ತಿದ್ರು ಆದ್ರೆ ನಮ್ಮ ಕೈಲಿ ಎಂತದೂ ಮಾಡುಕೆ ಆಗದ್ದ ಸ್ಥಿತಿ.

ಅಜ್ಜ ಇಚ್ಛಾ ಮರಣಿ.

ನಾನು ಇನ್ನು ಮನೆಗೆ ಬರುದಿಲ್ಲ, ಟ್ಯಾಂಕಿಗೆ ನೀರು ತುಂಬ ತುಂಬ್ಸಿ, ಹೇಳುವೇಕಾದವುಕ್ಕೆಲ್ಲಾ ಹೇಳಿ – ಅಜ್ಜ ಮನೆಂದ ಆಸ್ಪತ್ರೆಗೆ ಹೊರಡುವಾಗ ಹೇಳಿದ ಮಾತು.

ಸುಮಾರು ಸಮಯಂದಲೇ ಅಮ್ಮನಿಗೆ ಆರ್ಡರ್ ಆಗಿತ್ತು ಅಜ್ಜಂದು. ಕರಟ ಬಿಸಾಕುಕಾಗ್ದು, ಒಲೆಗೂ ಹಾಕುಕಾಗ್ದು.

ನನಿಗೆ ಬೇಕು ಎಲ್ಲಾ ಕರಟ ಎರಡು ಗೋಣಿ ತುಂಬಾ ಆಗಿತ್ತು ಅಜ್ಜ ಕೂಡಿಟ್ಟ ಕರಟ ! ಮಳೆಗಾಲ ಕರಟ ಬೇಕು, ಇಲ್ಲದ್ರೆ ಕಷ್ಟ ಆದೀತು ಅಜ್ಜನಿಗೆ ಹೋವುಕೆ ಮೊದಲೇ ಅಪರಕಾರ್ಯದ ಚಿಂತೆ.

ನೀನು ಹೋದ್ರೆ ಹನ್ನೊಂದು ದಿನ ಪಾರಾಯಣ ಎಲ್ಲ ಮಾಡ್ಸೆ ನಾನು ಹೇಳಿ ಅಪ್ಪ ಅಜ್ಜನ ಹತ್ರ ತಮಾಷೆ ಮಾಡಿತ್ತಿದ್ವು ಒಂದು ದಿನ.

ಅವಾಗ ಅಂಗಳಲ್ಲಿ ಇದ್ದ ಆಳುಗಳ ತೋರ್ಸಿ ಒಂದೇ ಮಾತು ಕೇಳಿದ್ದು ಅಜ್ಜ, ಪಾರಾಯಣ ಮಾಡ್ಸದ್ರೆ ಅಷ್ಟೆ ಹೋಯ್ತು, ಇವುಕ್ಕೆಲ್ಲಾ ಮೂರೂ ದಿನ ಹೊಟ್ಟೆ ತುಂಬಾ ಊಟ ಆದ್ರೂ ಹಾಕ್ಸುತ್ತಿಯೋ ಇಲ್ವೋ ?
*************

ನನ್ನ ಇಲ್ಲಿಯೇ ಸುಡುವೇಕು ಅಜ್ಜ ಮೊದಲೇ ಜಾಗೆ ತೋರ್ಸಿ ಆಗಿತ್ತು.

ಆಸ್ಪತ್ರೆಗೆ ಹೋಗುವ ದಿನ ಸುಡುವ ಜಾಗೆಗೆ ಹೋಗುವ ದಾರಿಲಿ ಪಾಲ ಹಾಕ್ಸುಕೆ ಹೇಳಿಯೇ ಅಜ್ಜ ಮನೆಂದ ಹೊರಟದ್ದು.

ಬದುಕಿನ ಎಲ್ಲಾ ಕರ್ತವ್ಯವನ್ನೂ ಮುಗ್ಸಿ ನಿಶ್ಚಿಂತೆಂದ ಹೊರಡುವ ಧೈರ್ಯ ಯಾರಿಗದೆ ?

ಅಜ್ಜ ಗ್ರೇಶಿದ ಹಾಂಗೇ ಆಯ್ತಲ್ಲಾ ? ಅಜ್ಜನ ಸುಡುವಾಗ ಸುತ್ತಲೂ ನಿತ್ತು ನೋಡಿದ ಜನ ಎಷ್ಟು ? ಅಜ್ಜನಿಗೆ ಆ ಲೆಕ್ಕಾಚಾರವೂ ಇತ್ತಾ ?

ಸಾಯುಕೆ ಎಷ್ಟೋ ದಿನ ಮೋದಲೇ ಅಜ್ಜನಿಗೆ ಕನಸು ಬೀಳ್ತಾ ಇತ್ತಂತೆ, ವಿಮಾನಲ್ಲಿ ಹಾರಿದ ಹಾಂಗೆ, ಬೇರೆ ಯಾವುದೋ ಲೋಕಕ್ಕೆ ಹೋದ ಹಾಂಗೆ, ಅಲ್ಲಿ ಎಲ್ಲವೂ ಉರ್ಬುಳಿ ಇರುವ ಹಾಂಗೆಲ್ಲಾ ಕನಸು !

ಮನೆಯ ಕೆಂಪಿ ದನ ಯಾವಾಗಲೂ ದಕ್ಷಿಣಕ್ಕೆ ಮೋರೆ ಹಾಕಿ ಸುಯಿಂಪುದು, ಹಾಯುಕೆ ಹೋಗುದು ಮಾಡಿಕೊಂಡಿತ್ತು.

ನವುಗೆ ಕಾಣದ್ದ ಯಮ ಕೆಂಪಿಗೆ ಕಾಣ್ತಿತ್ತಾ ?

ಅಜ್ಜನಿಗೆ ದನದ ಮೇಲೆ, ದನಗಳಿಗೆ ಅಜ್ಜನ ಮೇಲೆ ಇದ್ದ ಪ್ರೀತಿಯ ಹೇಂಗೆ ಹೇಳ್ಲಿ ?

ಪಾಪ, ಆದ್ರೆ ಸಾಯುಕೆ ಮೊದಲಾಣ ದೀಪಾವಳಿಯ ಗೋಪೂಜೆ ಅಜ್ಜ ಮಾಡುಕಾಗ್ಲೇ ಇಲ್ಲ.

ಆ ಸರ್ತಿ ಅಪ್ಪ ಗೋಪೂಜೆ ಮಾಡಿದ್ದು. ಆರತಿಗೆ ಆಗುವಾಗ ಅಜ್ಜ ಸಣ್ಣ ಮಕ್ಕಳ ಹಾಂಗೆ ತಾಳ ಹಿಡ್ಕೊಂಡು ನಿತ್ತಿದ್ರು.

ಅಜ್ಜನ ಮೋರೆಲಿದ್ದ ಆ ನೆಗೆಲಿ ಖುಷಿ ಇತ್ತಾ ಅಥವಾ ವಿಷಾದವಾ ? ಆ ಫೋಟೊವ ತೆಗಿಯುವ ದೌರ್ಭಾಗ್ಯವೂ ನನ್ನದೇ ಆಯ್ತು.

ನಾವು ಸಣ್ಣಾಗಿರುವಾಗ ಮನೆಲಿ ಎಷ್ಟು ದನ, ಎಮ್ಮೆ ಇತ್ತು ?

ಒಂದೇ ಒಂದು ಜಾನುವಾರನ್ನೂ ಮಾರುವ ಹಾಂಗೆ ಇರಲ್ಲ. ಎಷ್ಟು ದೊಡ್ಡ ಹಟ್ಟಿ ಇತ್ತು ? ಮನೆಯಷ್ಟೇ ದೊಡ್ಡ ಜಾನುವಾರು ಹಟ್ಟಿ !

ನನಿಗೆ ಈಗಳೂ ನೆನಪ್ಪದೆ, ಅದೊಂದು ದಿನ ಅಪ್ಪ ಯಾವುದೋ ಒಂದು ದನ ಮಾರಿದ್ವು. ಅಜ್ಜ ಮಧ್ಯಾನ ಪೂಜೆ ಮಾಡ್ತಾ ಇದ್ರು ದೇವರೊಳಗೆ.

ನಾನು ಹಟ್ಟಿಂದ ಓಡಿ ಹೋಗಿ ಅಜ್ಜನ ಹತ್ರ ಹೇಳಿತ್ತಿದ್ದೆ, ಅಜ್ಜಾ ಬೇಗ ಪೂಜೆ ಮಾಡಿ ಬನ್ನಿ, ಅಪ್ಪ ಅಲ್ಲಿ ದನ ಮಾರ್ತಾ ಇದ್ದಾವೆ ನಾನು ಅವಾಗ ಸಣ್ಣ, ಈಗ ಬೆಳುದು ಗೋಣ ಆಗಿದ್ದೇನೆ, ಆದ್ರೆ ಈಗ ಎಲ್ಲಿ ಅದೆ ಆ ಗೋ ಪ್ರೇಮ ?

ಮನೆಗೆ ಹೋದ್ರೆ ಒಂದು ದಿನ ಹಟ್ಟಿಗೆ ಹೋಗುದಿಲ್ಲ ! ಕರು ಬಿಡುಕೆ ಗೊತ್ತೇ ಇಲ್ಲ. ಮೊದುಲು ಹಟ್ಟಿಗೆ ಹೋಗಿ ಸೆಗಣಿ ಆದ್ರೂ ತೆಗಿತ್ತಾ ಇತ್ತಿದ್ದೆ, ಈಗ ಅದೂ ಇಲ್ಲ. ನೆಂಟ್ರ ಹಾಂಗೆ ಮನೆಗೆ ಹೋಗಿ ಎರಡು ಮೂರು ದಿನ ಇದ್ದು ಬರ್ತೇನೆ ಅಷ್ಟೇ !

*************

ಚಳಿ ಆಗ್ತಾ ಅದೆ ಇಲ್ಲಿ. ಉತ್ತರ ಭಾರತದ ಚಳಿ ಹೇಳಿರೆ ಎಂತ ಹೇಳಿ ಈಗ ಗೊತ್ತಾಗ್ತಾ ಅದೆ. ಹಗಲೂ ಚಳಿ, ಬಿಸಿಲಿನ ಪತ್ತೆಯೇ ಇಲ್ಲ ! ಆಫೀಸಿಗೆ ಬೈಕಿಲಿ ಬರುವಾಗ ಪ್ರಾಣ ಹೋದ ಹಾಂಗೆ ಆಗ್ತೆ.

ಚಳಿಲಿ ಕೂತುಕೊಂಡು ಕಂಪ್ಯೂಟರ್‌ಲಿ ಟೈಪ್ ಮಾಡುವಾಗ ಎಲ್ಲವೂ ನೆಂಪಾಗ್ತಾ ಅದೆ.

ಬೆಂಗ್ಳೂರಿನ ಬದುಕ್ಕೇ ಬೇರೆ ಇತ್ತು. ಶೋಭಾ ಡೆವಲಪರ್ಸ್‌ಲಿ ಕೆಲಸ ಮಾಡಿಕೊಂಡಿದ್ದಾಗ ಬೇರೆಯೇ ಜನ ಆಗಿತ್ತಿದ್ದೆ ನಾನು. ಬೇಕಾಬಿಟ್ಟಿ ಇತ್ತಿದ್ದೆ. ಹೊಸ ಕೆಲಸ ಕಲಿಯುವ ಮಾತು ಬಿಡಿ, ಇರುವ ಕೆಲಸವನ್ನೂ ಸರಿ ಮಾಡಿಕೊಂಡಿತ್ತಿಲ್ಲ.

ಉದಾಸಿನದ ಮುದ್ದೆ ಆಗಿತ್ತಿದ್ದೆ ಅಲ್ಲಿ ಇರುವಾಗ.

ಆದ್ರೆ ಇಲ್ಲಿ ಪೂರ್ತಿ ಉಲ್ಟಾ ! ಕೆಲಸ ಕಲಿತ್ತಾ ಇದ್ದೇನೆ.

ಹೊಸ ಊರು, ಹೊಸ ಜನ, ಹೊಸತ್ತು ಪ್ರಪಂಚ ! ಬದುಕಿನ ಹೊಸ ಹೊಸ ಮುಖಂಗಳ ಪರಿಚಯ ಆಗ್ತಾ ಅದೆ ಇಲ್ಲಿ. ಬದುಕ್ವೇಕಾರೆ ಎಷ್ಟು ಮುಖವಾಡ ಹಾಕ್ವೇಕು ಇಲ್ಲಿ ? ಉಫ್ !

ಆದ್ರೆ ಒಂದು ಮಾತ್ರ ಸತ್ಯ. ಬದುಕಿನ ಹತ್ತು ಮುಖಂಗಳ ಕಾಣ್ತಾ ಇದ್ದೇನೆ ಇಲ್ಲಿ.
*************

ಜೀವನದ ಪಯಣ ನನ್ನ ಎಲ್ಲೆಲ್ಲಿಗೋ ಎಳ್ಕೊಂಡು ಬಂದದೆ.

ಮತ್ತೆ ಹಿಂದೆ ತಿರುಗಿ ಹೋಗದ್ದಷ್ಟು ದೂರ ಅಂತೂ ಖಂಡಿತಾ ಅಲ್ಲ. ಮತ್ತೆ ಹೊರಡ್ತಾ ಇದ್ದೇನೆ ನಾಳೆ, ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್.

ಸಂಪರ್ಕಲ್ಲಿ ಕ್ರಾಂತಿ ಆದಷ್ಟೂ ಜಾಸ್ತಿ ಮನುಷ್ಯ ಮನುಷ್ಯ ದೂರ ಆಗ್ತಾವೆ ಅಲ್ವಾ ???

ಮನೆ, ಊರಿಂದ ತುಂಬಾ ದೂರ ಬಂದು ಬಿಟ್ಟಿದ್ದೇನೆ. ಸಾವಿರಾರು ಕಿಲೋಮೀಟರ್ ದೂರ ಬಂದು ಮತ್ತೆ ಮನೆಗೆ ಹೋಗುವಾಗ ಮನಸ್ಸಿಲಿ ಎಂತ ಎಲ್ಲಾ ಬಂದು ಹೋಗ್ತೆ.

ಹಳೆ ವಿಷಯ, ಬೇಕಾದ್ದು, ಬೇಡದ್ದು ಎಲ್ಲವೂ ಕಣ್ಣ ಮುಂದೆ ಬರ್ತೆ.

ನಾಳೆ ಇಷ್ಟೊತ್ತಿಗೆ ರೈಲಿಲಿ ಇರ್ತೇನೆ.

ಅದೇ ರಶ್ಶು, ಆದ್ರೆ ಹೊಸ ಹೊಸ ಮೋರೆ, ಹೊಸ ವ್ಯಕ್ತಿತ್ವ, ಜನರ ಗಜಿಬಿಜಿ ಮಾತು, ಮಾರಿಕೊಂಡು ಬರುವವರ ಬೊಬ್ಬೆ, ಚಾಯ್ ಚಾಯ್ ಗರಮಾ ಗರಂ ಚಾಯ್ ಎರಡು ದಿನ ಕಳುದ್ರೆ ಬೆಂಗ್ಳೂರಿಲಿ ಇರ್ತೆನೆ.

ಯಶ್ವಂತಪುರ ರೈಲ್ವೆ ಸ್ಟೇಶನ್, ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್, ಕಾಣಿಯೂರು ಬಸ್ಸು ಹತ್ತಿ ನಿಂತಿಕಲ್ಲಿಲಿ ಇಳುದು ಪಾಜಪಳ್ಳಕ್ಕೆ ಬಂದು ಅಲ್ಲಿಂದ ಬೊಮ್ಮಣಮಜಲಿಲ್ಯಾಗಿ, ಹೊಳೆ ದಾಟಿ, ಮುತ್ತಪ್ಪನ ಮನೆ ದಾಟಿ, ಗದ್ದೆ ಕರೆಲಿ ಮುಂದೆ ಹೋಗಿ, ಕೆಜಿ ಮಾವನ ಮನೆ ಕಳುದು, ಗೋಕುಲದ ಗೇಟು ದಾಟಿ ಚಡಾವು ಹತ್ತಿ ಬಾಲಕೃಷ್ಣನ ಮನೆ ಹತ್ರ ಎಡತ್ತಿಗೆ ತಿರುಗಿರೆ ನಮ್ಮ ಮನೆ ಬರ್ತೆ.

ಮತ್ತೆ ಸುರೇಂದ್ರಣ್ಣನ ಮದುವೆ ಗೆ ಹೊರಡುವೇಕು, ಆ ದಿನ ರಾತ್ರಿ ಮತ್ತೆ ಬೆಂಘ್ಳೂರಿಗೆ, ಮರುದಿನ ಅಮಿತ್ ನ ಮದುವೆ, ಮಂಗಳವಾರ ಸುಪ್ರಭನ ಮದುವೆ, ಶುಕ್ರವಾರ ನನ್ನ ಬದ್ಧ, ಶನಿವಾರ ಮಂಗ್ಳೂರಿಂದ ಮತ್ತೆ ರೈಲು ಹತ್ತುವೇಕು ಡೆಲ್ಲಿಗೆ.

ಎಷ್ಟಾದ್ರೂ ಬದುಕು ಮುಗಿಯದ್ದ ಪಯಣ ಅಲ್ವಾ ???

ಪಯಣ

ಬೆಂಗಳೂರು ರೈಲಿಗೆ ಹತ್ತಿದ ಮೇಲೆ ಅದೆಂಥದೋ ತಳಮಳ.


ಸುಬ್ರಹ್ಮಣ್ಯ ದಾಟಿ ರೈಲು ಘಟ್ಟ ಹತ್ತುಕೆ ಶುರುವಾದ ಮೇಲಂತೂ ಎನೋ ಒಂದು ವಿಚಿತ್ರ ಮನಸ್ಥಿತಿ.!

ಸುರಂಗಗಳ ಒಳಗೆ ಹೋಗಿ ಸಂಕದಾಟಿ ರೈಲು ಮುಂದೆ ಹೋಗ್ತಾ ಇದ್ರೂ ಮನಸ್ಸು ಎಲ್ಲಿಯೋ ಉಳುದು ಹೋದ ಭಾವ.

ಹೊರಗೆ ನೋಡುವಾ ಹೇಳಿ ರೈಲಿನ ಬಾಗಿಲಿಲಿ ಕೂತ್ರೂ ಸಮಾಧಾನ ಇಲ್ಲ. “ಸರಿ ಎಂತಾರೂ ಬರಿವ” ಹೇಳಿ ಪೆನ್ನು ಕಾಗದ ಹಿಡ್ಕೊಂಡು ಕೂತ್ರೆ “ಎಂತ ಬರಿಯುದು ?” ಹೇಳುವ ಪ್ರಶ್ನೆ.

ಬದುಕು ಎಷ್ಟು ವಿಚಿತ್ರ ಅಲ್ವಾ ?

ಎಲ್ಲೆಲ್ಲಿಗೋ ಕರ್ಕೊಂಡು ಹೋಗ್ತೆ.

ಒಂದೇ ದಾರಿಲಿ ಹೋವುಕೆ ಇದೆಂಥ ರೈಲಾ ? ಟ್ರ್ಯಾಕ್ ತಪ್ಪದ್ದೆ ಒಂದೇ ಸಮ ಹೋಗುವಂಥದಲ್ಲ ಬದುಕು.

ನೂರು ಕವಲು, ಸಾವಿರ ದಾರಿ. ಅದೆಷ್ಟೋ ಜೀವ, ಅವು ಕೊಡುವ ಪ್ರೀತಿ, ವಿಶ್ವಾಸ, ಮೃದು ಭಾವ ಬದುಕಿನ ಉದ್ದಕ್ಕೂ ಕಾಡುತ್ತಾ ಇರ್ತೆ.

ಎಲ್ಲಿಯೋ ಹುಟ್ಟಿ ಇಲ್ಲಿಯ ವರೆಗೆ, ಈ ಕ್ಷಣದವರೆಗೆ ಬೆಳೆದು ಬಂದು ನಿಂತ ದಾರಿ ಅದೆ ಅಲ್ವಾ ? ಅದು ನಿಜವಾಗಿಯೂ ವಿಚಿತ್ರ.

 ನಾನು ಸಣ್ಣಾಗಿರುವಾಗ ಅಜ್ಜನ ಕಾಲಿಲಿ ಮನಿಕ್ಕೊಂಡು ಇರ್ತಿದ್ದೆ ಅಂತೆ. ಅಜ್ಜ ನನಿಗೆ ಹಾಲಿಲಿ ಅದ್ದಿದ ರಸ್ಕು ತಿನ್ಸುತ್ತಿದ್ರಂತೆ.

ಅಜ್ಜ ರಾಮಾಯಣ, ಮಹಾಭಾರತ ಕತೆ ಹೇಳ್ತಾ ಇರುವಾಗ ನನಿಗೆ ಬೇರೆ ಎಂತದೂ ಬೇಡ್ವಂತೆ. ರೈಲು ಯಾವುದೋ ಒಂದು ಸಣ್ಣ ಹೊಳೆ ಮೇಲೆ ದಾಟಿತ್ತು. ನೀರು ಬೆಳಿ ಬೆಳಿ ನೊರೆ ಚೆಲ್ಲಿ ಹರಿತ್ತಾ ಅದೆ.

ಯೋಚನಾ ಲಹರಿಗೆ ಸಣ್ಣ ತಡೆ ಆಯ್ತು. ಅಜ್ಜನ ಕಣ್ಣಿಲಿ ಪ್ರೀತಿ. ನಾನು ಅಜ್ಜನ ದೊಡ್ಡ ಪುಳ್ಳಿ (ಮಾಣಿ ಪುಳ್ಳಿ) ನನ್ನ ಕಂಡ್ರೆ ಅಜ್ಜನಿಗೆ ಕೊಂಡಾಟ ಜಾಸ್ತಿ.

ಅಂದು ಫಾದರ್ ಮುಲ್ಲರ್ ಆಸ್ಪತ್ರೆಲಿ ಹಂದದ್ದೆ ಮನಿಕ್ಕೊಂಡಿದ್ದ ಅಜ್ಜನ ಕಾಲು ಮುಟ್ಟಿ ನೋಡಿದೆ. ತಣ್ಣಗಾಗಿತ್ತು. ನನ್ನ ಮನಿಗಿಸಿದ ಕಾಲು, ನನ್ನ ತಾಚಿ ಅಂಟಿದ ಕಾಲು. ಅಜ್ಜನ ದೇಹ ತಣ್ಣಗಾಗಿ ಆಗಿತ್ತು. ಅಜ್ಜ ನನ್ನ ಮೇಲೆ ಇಟ್ಟಿದ್ದ ಪ್ರೀತಿ, ನಂಬಿಕೆ, ಅದೆಷ್ಟು ಸರ್ತಿ ಅದಿಕ್ಕೆ ಭಂಗ ತಂದಿದ್ದೇನೋ ?

ನಾನು ಕೂಗಿದ್ದು ಸತ್ಯ. ಅಜ್ಜನ ಕಾಲು ಕಾಣುವಾಗ ನನಿಗೆ ನೆಂಪಾದ್ದು ನನ್ನ ಬಾಲ್ಯ ಮಾತ್ರ.
ಅಜ್ಜ ತುಂಬಾ ನೆಂಪಾಗ್ತಾ ಇದ್ದಾರೆ ಇಂದು. ಸಣ್ಣಾಗಿರುವಾಗ ನನ್ನ ಎತ್ತಿ ಆಡ್ಸಿದ ಅಜ್ಜ, ಅಡಿಕೆ ಮಾರುಕೆ ಪುತ್ತೂರಿಗೋ ಮಂಗ್ಳೂರಿಗೋ ಹೋಗುವಾಗ ಕೇಳ್ತಾ ಇತ್ತಿದ್ವಂತೆ “ನಿನ್ನಿಗೆಂತ ಬೇಕು ಮಗಾ ?”

ಅಜ್ಜ ನನ್ನ ಬಿಟ್ಟು ಎಲ್ಲಿಗೋ ಹೋಗ್ತಾರೆ ಹೇಳುದೇ ನನಿಗೆ ಅವಗ ದೊಡ್ಡ ವಿಷಯ ಆಗಿತ್ತು. ಎಷ್ಟಾಗ್ತೋ ಅಷ್ಟು ದೊಡ್ಡ ಪಟ್ಟಿ ಹೇಳ್ತಿದ್ದೆ ನಾನು. “ಏಪಾಲು”, “ಉಂಬಿ”, ಕೋಟು”. ಅಜ್ಜ ತಂದು ಕೊಡ್ತಿದ್ರು.

ಈ ದಟ್ಟ ಕಾಡಿಲಿ ಒಳಗೆ ಹೋಗಿ ಕಾಣೆ ಆಗ್ವೇಕು. ಅದೊಂದು ಹುಚ್ಚು ನನಿಗೆ.

ಚಾರಣ, ತಿರುಗುದು ಹೇಳಿರೆ ತುಂಬಾ ಖುಶಿ. ಯಾರೂ ಇಲ್ಲದ್ದ ಕಡೆ, ನಾಣೊಬ್ಬನೇ ಕೂತು ಇಡೀ ದಿನ ಕಳಿವೇಕು.

ನನ್ನತ್ರ ಮಾತಾಡುಕೆ, ಉಪದ್ರ ಮಾಡುಕೆ ಯಾರೊಬ್ಬನೂ ಇರುಕಾಗ್ದು. ಅಮ್ಮನ ಹೊಟ್ಟೆಲಿ ಇರುವಾಗ ಹೇಂಗೆ ಇತ್ತಿದ್ನೋ ಹಾಂಗೆ. ಏಕಾಂತ, ಮೌನ.

ಅಮ್ಮನ ಎದೆ ಬಡಿತ ಮಾತ್ರ ಕೇಳುದು. ಅದು ಮಾತ್ರ ಸಾಕು. ಎಷ್ಟೋ ಸರ್ತಿ ಒಬ್ಬೊಬ್ಬನೇ ಚಾರಣ ಹೋಗಿದ್ದೇನೆ. ಯಡಕುಮೇರಿ ರೈಲ್ವೇ ಟ್ರಾಕಿಲಿ ಇನ್ನೊಂದು ಸರ್ತಿ ನಡ್ಕೊಂಡು ಬರುವೇಕು. ಒಬ್ಬನೇ ಬಂದು ಫೋಟೋ ತೆಕ್ಕೊಂಡು ಕುಶಿಪಡ್ವೇಕು. ಪ್ರಪಂಚದ ಪ್ರತಿಯೊಂದು ಜೀವಿಯ ಒಟ್ಟಿಗೆ ಇದ್ರೂ ನಾನು ಒಬ್ಬನೇ ಹೇಳುವ ನಿರ್ಲಿಪ್ತತೆ ನನ್ನ ಒಳಗೆ ಬರುವೇಕು. ಅವಾಗಳೇ ನಾನು ಬೆಳಿಯುಕೆ ಸಾಧ್ಯ.
ಅಜ್ಜನ ಬಗ್ಗೆ ಎಂತ ಹೇಳುದು ನಾನು ? ನನ್ನಂದಲೂ ಹೆಚ್ಚು ಅಜ್ಜನೊಟ್ಟಿಗೆ ಆತ್ಮೀಯ ಆಗಿತ್ತಿದ್ದಿದ್ದು ಅಪ್ಪ. ಅವಿಬ್ರೂ ಒಳ್ಳೆ ಫ್ರೆಂಡ್ಸ್.

ಎಷ್ಟು ಅರ್ಥ ಮಾಡಿಕೊಂದಿತ್ತಿದ್ವು ? ನನ್ನ ಅಪ್ಪನ “ಅಣ್ಣ” ಹೇಳಿಯೇ ಕರ್ಕೊಂಡು ಇದ್ದದ್ದು ಅಜ್ಜ.
ಸಕಲೇಶಪುರ ಹತ್ರ ಬಂತು. ಅದೆಷ್ಟು ಜನ ಕೆಲಸದವು ? ಧಾರವಾಡ ಕಡೆಯವು ಇದ್ದಾವೆ ರೈಲು ಟ್ರ್ಯಾಕಿನ ಕೆಲಸಕ್ಕೆ.

ಮನೆ, ಜಾಗೆ ಎಲ್ಲ ಬಿಟ್ಟು ಇಲ್ಲಿಗೆ ಬಂದು ದುಡಿತ್ತಾವೆ. ಟರ್ಪಲು ಶೆಡ್ಡು ಹಾಕಿ ಇಲ್ಲಿಯೇ ಗಂಜಿ ಬೇಯ್ಸಿ ತಿಂತಾವೆ. ಅವುಕ್ಕೆ ಇದು ಅನಿವಾರ್ಯ.

ಬರ, ನೆರೆ, ಎರಡೂ ಪ್ರಾಣ ತಿನ್ನುಕೆ ಕಾಯ್ತಾ ಇರುವಾಗ ಅವಾದ್ರೂ ಎಂತ ಮಾಡ್ತಾವೆ ಪಾಪ ? ಹಾಂಗೆ ಹೇಳಿ ತೋಟಕ್ಕೆ ಜನ ಇಲ್ಲ ! ಡಾಮಾರು ಹಾಕುಕೆ, ರೈಲು ಕಂಬಿ ರಿಪೇರಿಗೆ, ಫೋನಿನ ಲೈನು ಗುಂಡಿ ತೆಗಿಯುಕೆ ಬರುವ ಜನ ಅಡಿಕ್ಕೆ ಹೆರ್ಕುಕೆ, ತೋಟದ ಕೆಲಸಕ್ಕೆ ಬಂದಿದ್ರೆ ಅಪ್ಪನ ಟೆನ್ಶನ್ ಸ್ವಲ್ಪ ಕಮ್ಮಿ ಆಗ್ತಿತ್ತು. ಅಂದೊಂದು ಸರ್ತಿ ಕೆಲಸಕ್ಕೆ ಬರ್ತೇವೆ ಹೇಳಿ ದುಡ್ಡು ತೆಕ್ಕೊಂಡು ನಾಮ ಹಾಕಿತ್ತಿದ್ವು ಮೂರು ಜನ ‘ಘಟ್ಟದ ಮೇಲಾಣವು ’.

ಅವು ಹಾಂಗೆ ಮಾಡಿದ್ವು ಹೇಳಿ ಎಲ್ಲವರನ್ನೂ ಒಂದೇ ತಕ್ಕಡಿಲಿ ತೂಗುಕಾಗ್ದು.
ಮನೆಲಿ ಎಂತಾರೂ ವಿಷಯ ಚರ್ಚೆ ಆಗುವಾಗ ಅಪ್ಪ, ಅಜ್ಜ ಇಬ್ರೂ ವಾದ ಮಾಡ್ತಿದ್ವು. ಯಾವುದಾರು ಕೆಲಸ ಮಾಡ್ಸುಕೆ, ಎಂತಾರೂ ಒಂದು ನಿರ್ಧಾರ ತೆಕ್ಕೊಳ್ಳುಕೆ ಮೊದ್ಲು ಚರ್ಚೆಯೇ ಚರ್ಚೆ.

ಹಾಂಗೆ ಹೇಳಿ ಇನ್ನೊಬ್ಬನ ಮನಸ್ಸಿಗೆ ಬೇನೆ ಮಾಡಿ “ನನ್ನದೇ ಆಗ್ವೇಕು, ನಾನು ಹೇಳಿದ ಹಾಂಗೇ” ಹೇಳಿ ಯಾವತ್ತೂ ಮಾಡಿದ ಜನ ಅಲ್ಲ ಅಜ್ಜ. ನಾನು ಬಿ.ಎಸ್ಸಿ. ಹಾರ್‍ಟಿಕಲ್ಚರ್ ಮುಗುಸಿ ಕೆಲಸಕ್ಕೆ ಸೇರುವಾಗಳೂ ಅಷ್ಟೇ. ಅಜ್ಜನಿಗೆ ನಾನು ‘ಎಸ್ಟೇಟ್ ಚಾಕ್ರಿ ’ ಮಾಡುದು ಇಷ್ಟ ಇಲ್ಲದ್ರೂ ಕಳಿಸಿ ಕೊಟ್ರು.
ಹುಂ ! ಕಾಫಿ ಹೂ ಪರಿಮಳ ಬರ್ತಾ ಅದೆ. ನಾನು ‘ಕಾಫಿ ಡೇ’ ಕಂಪೆನಿಲಿ ಕೆಲಸ ಮಾಡಿದ್ದು, ಬಿ.ಎಸ್ಸಿ. ಮಾಡುವಾಗ ಮೂಡಿಗೆರೆಲಿ ನಾಕು ವರ್ಷ ಇದ್ದದ್ದು, ಅಲ್ಲಿಯಾಣ ಕಾಫಿ ಹೂವಿನ ಪರಿಮಳ ಎಲ್ಲಾ ನೆಂಪಾಗ್ತೆ. ಪಶ್ಚಿಮ ಘಟ್ಟ ನನಿಗೆ ತುಂಬಾ ಇಷ್ಟ. ಆ ಕಾಡಿನೊಳಗೆ ಯಾವಾಗ ಬೇಕಾರೂ, ಎಷ್ಟು ಸರ್ತಿ ಬೇಕಾರೂ ಹೋವುಕೆ ರೆಡಿ ನಾನು. ಅಕಾಲಲ್ಲಿ ಮಳೆ ಬಿದ್ದು ಕಾಫಿಗಿಡ ಹೂ ಬಿಟ್ಟದೆ.

ತಂಗಿ ಮದ್ವೆ ಸಂದರ್ಭಲ್ಲಿ ಅಜ್ಜ ಹೇಳಿದ್ದು, “ಅವು ಇಬ್ರೂ ಇಷ್ಟಪಟ್ಟಿದ್ದಾವೆ ಅಲ್ವಾ ? ಮತ್ತೆ ನಮ್ಮದೆಂತ ?” ಮತ್ತೆ ಬೇರೆ ಆಲೋಚನೆಯೇ ಮಾಡಲ್ಲ. “ದಿನ ನೋಡಿ ಕೊಡುದೇ ” ಆ ನಿರ್ಧಾರ ಸರ್ವಾಧಿಕಾರಿಯಾಗಿ ಹೇಳಿದ್ದಲ್ಲ ಅಜ್ಜ. “ಕಷ್ಟವೋ ಸುಖವೋ ಹೊಂದಿಕೊಂಡು ಬಾಳ್ವೇಕಾದವು ಅವು ಇಬ್ರು” ಹೇಳಿ ಹೇಳಿದ ಮಾತು ಚಿನ್ನದ್ದು. ಅಪ್ಪ ಈಗಳೂ ನೆಂಪು ಮಾಡಿಕೊಂಡು ಹೇಳ್ತಾರೆ. ನನ್ನ ವಿಷಯಲ್ಲಿ ಅಪ್ಪ ಹೇಳುದೂ ಅದೇ ಮಾತು. “ನಿನಿಗೆ ಬೇಕಾದ ಅಂಗಿಯ ನೀನೇ ಹೊಲಿಸಿಕೊಳ್ಳುವೇಕು ”.
ಅಜ್ಜ ನಮ್ಮ ಮನೆಗೆ ಬೇಕಾಗಿ ಎಷ್ಟು ಕಷ್ಟಪಟ್ಟಿದ್ದಾವೆ ಹೇಳುದ್ರ ಗ್ರೇಶಿರೇ ಕೂಗುಕೆ ಬರ್ತೆ. ಒಂದಿಡೀ ಜೀವಮಾನ ನವುಗೆ ಬೇಕಾಗಿ ದುಡುದು ಕಳುದ್ರು. ವಾರಕ್ಕೊಂದು ಸರ್ತಿ ಮಾರುವ ಕೊಕ್ಕೊ ಕೊಯ್ಯುಕೆ ಅಜ್ಜ ವಾರ ಇಡೀ ತೋಟ ಸುತ್ತುತ್ತಿದ್ರು. ಕೈಲಿ ಒಂದು ಕೊಕ್ಕೆ, ಒಂದು ಗೋಣಿ ಹಿಡ್ಕೊಂಡು ಬೆಳಿಗ್ಗೆ ಒಂಭತ್ತಕ್ಕೆ ಹೊರಟ್ರೆ, ಹನ್ನೊಂದಕ್ಕೆ ಮನೆಗೆ ಬರುದು. ಅಜ್ಜನ ಮೈ ಮೇಲೆ ಎಲ್ಲಾ ಬೆಗರು. ಅಜ್ಜನ ಮೋರೆಲಿ ಇಳುದ ಆ ಬೆಗರೇ ನಮ್ಮ ಸಾಂಕಿದ್ದು.

ಸಕಲೇಶಪುರ ರೈಲ್ವೇ ಸ್ಟೇಶನ್ ಬಂತು. ಈಗ ಎಂತಾರೂ ತೆಕ್ಕೊಂಡು ಊಟ ಮಾಡ್ವೇಕು.

ಊಟ ಮಾಡಿದ ಮೇಲೆ ಒಂದಷ್ಟು ಹೊತ್ತು ಮೌನ. ರೈಲಿನ ಸ್ಪೀಡು ಜಾಸ್ತಿ ಆಗಿಯೆದೆ. ರೈಲು ಹೋಗುವ ದಾರಿಲಿ ಅಲ್ಲಿ ಅಲ್ಲಿ ನಿತ್ತುಕೊಂಡು ರೈಲಿಗೆ ಟಾಟಾ ಮಾಡುವ ಪುಟ್ಟು ಮಕ್ಳ ಕಂಡ್ರೆ ನನಿಗೆ ತುಂಬಾ ಕುಶಿ. ಅವರ ಮನಸ್ಸಿಲಿ ಎಂತ ಭಾವನೆ ಇದ್ದೀತು ? ಆಲೋಚನೆ ಮಾಡುಕೆ ಸ್ವಲ್ಪ ಕಷ್ಟವೇ. ಆದ್ರೆ ಒಂದು ಮಾತ್ರ ನನಿಗೆ ಕಾಣುದೆಂತ ಹೇಳಿರೆ, ಅವರ ಮನಸ್ಸಿಲಿ ಒಂದು ಬಗೆಯ ಪ್ರೀತಿ ರೈಲಿನ ಮೇಲೆ. ರೈಲಿಲಿ ಹೋಗುವವರ ಮೇಲೆ ಎಂತದೋ ಒಂದು ಆಕರ್ಷಣೆ.

ಹಾಸನ ಹತ್ರ ಬಂತು. ಅದ್ಯಾಕೋ ಗೊತ್ತಿಲ್ಲ, ಘಟ್ಟದ ಕೆಳಗೆ ಹಸಿರು ನೋಡ್ತಾ ಇದ್ರೆ ಅಜ್ಜ ನೆಂಪಾಗ್ತಾರೆ, ಘಟ್ಟದ ಮೇಲೆ ಬಯಲಿಲಿ ಸ್ವಲ್ಪ ಕಮ್ಮಿ. ಅಡಿಕೆ, ತೆಂಗು, ಕೊಕ್ಕೊ ತೋಟ ನೋಡ್ತಾ ಇದ್ರೆ ನನಿಗೆ ಅಜ್ಜನ ಮೋರೆ ಕಣ್ಣಿಗೆ ಕಟ್ಟುತ್ತೆ. ನಾಣು ತೆಗ್ದ ಒಂದು ಫೋಟೋಲ್ಲಿ ಅಜ್ಜನ ಆ ಮೋರೆ ಬಂದದೆ. ಕೊಕ್ಕೊ ಕೊಯಿದು ಬಚ್ಚಿ ಬಚ್ಚಿ ಮನೆಗೆ ಬರುವಾಗ ಅಜ್ಜ ಹೇಂಗೆ ಕಾಣ್ತಿದ್ರು ? ಅಬ್ಬಾ ! ನವುಗಾಗಿ ಜೀವ ತೇಯ್ದ ಅಜ್ಜ.

ಹನ್ನೊಂದು ಘಂಟೆಗೆ ಒಂದು ಗ್ಲಾಸು ಕಾಪಿ ಕುಡುದು ಮತ್ತೆ ಅಡಿಕ್ಕೆ ಸಜ್ಜಿ ಮಾಡುದು. ಹನ್ನೆರೆಡಕ್ಕೆ ಒಂದು ಬಾಳೆಹಣ್ಣು ಅಥವಾ ಒಂದು ತುಂಡು ಬೆಲ್ಲ ಬಾಯಿಗೆ ಹಾಕಿಕೊಂಡು ಪೂಜೆಗೆ ಹೂ ಕೊಯ್ಯುದು. ಮತ್ತೆ ಅಬ್ಬಿಗೆ ಹೋಗಿ ಶ್ರೀ ಸೂಕ್ತ, ದುರ್ಗಾ ಸೂಕ್ತ ಹೇಳಿಕೊಂಡು ಮೀಯುದು. ರಾತ್ರೆ ಮೀಯುವಾಗ್ಳೂ ಶ್ರೀ ಸೂಕ್ತ, ದುರ್ಗಾ ಸೂಕ್ತ. ಗಾಯತ್ರಿ ಹೇಳಿ ಜಪ ಮಾಡಿದ್ರ ನಾನು ಕಾಣಲ್ಲ (ನನಿಗೆ ನೆಂಪಿಲ್ಲ). ಮೊದ್ಲು ಜಪ ಮಾಡಿಕೊಂಡು ಇತ್ತಿದ್ರಂತೆ. ಕುತ್ತಿಗೆ, ಶ್ವಾಸಕೋಶಲ್ಲಿ ಗೆಡ್ಡೆ ಬೆಳ್‌ದ್ರೂ ಅಜ್ಜನ ಕಾಪಾಡಿದ್ದು ಆ ಶ್ರೀ ಸೂಕ್ತ, ದುರ್ಗಾ ಸೂಕ್ತವೇ ಹೇಳಿ ನಾಗೇಶಣ್ಣ ಅಜ್ಜನ ಜಾತಕ ನೋಡಿ ಹೇಳಿತ್ತಿದ್ವು. ಅಜ್ಜ ಪೂಜೆ ಮಾಡುದ್ರ ನೋಡುದೇ ಒಂದು ಚಂದ. ನಿತ್ಯ ರುದ್ರ, ಚಮೆ, ಪುರುಷಸೂಕ್ತ ಹೇಳಿ ಪಂಚಾಯತನ ಪೂಜೆ. ಒಂದು ಪಾವು ಅಕ್ಕಿಯ ಅನ್ನದ ನೈವೇದ್ಯ. ಪೂಜೆ ಆಗದ್ದೆ ಊಟ ಇಲ್ಲ.

ಮದ್ಯಾನ ಊಟ ಆಗಿ ಅಜ್ಜನಿಗೆ ಒಂದು ಸಣ್ಣ ನಿದ್ದೆ. ನನಿಗೆ ಆಟ ಆಡುಕೆ ಆಚೆ ಮನೆಗೆ ( ‘ಹಿಮಗಿರಿ’ಗೆ) ಹೋವುಕೆ ‘ಅರ್ಜೆಂಟು’. ಅಜ್ಜನ ಹತ್ರ ಕೇಳಿರೆ ಪರ್ಮಿಶನ್ ಸಿಕ್ಕೀತು ಹೇಳಿ ಗೊತ್ತದೆ. ಅರ್ಧಂಬರ್ಧ ನಿದ್ದೆ ಹತ್ತುವಲ್ಲಿ ವರೆಗೆ ಅಜ್ಜನ ಹತ್ರವೇ ಕೂತು ಕೇಳುದು, “ಅಜ್ಜ ! ನಾನು ಹಿಮಗಿರಿಗೆ ಹೋಗಿ ಬರ್ತೇನೆ”. ಪಾಪ ಅಜ್ಜ ನಿದ್ದೆಲಿ “ಹಾಂ” ಹೇಳಿ ಹೂಂಗುಟ್ಟಿದ್ದೇ ಸಾಕು ಹೇಳಿ ನಾನು ‘ಪದ್ರಾಡ್’. ಮತ್ತೆ ಮನೆಗೆ ಎತ್ತುದು ಕಸ್ತ್ಲೆ ಆದ ಮೇಲೆಯೇ ! ಅಪ್ಪ, ಅಮ್ಮ ಕೇಳಿರೆ ಹೇಳುದು, “ನಾನು ಅಜ್ಜನ ಹತ್ರ ಕೇಳಿಯೇ ಹೋದ್ದು”.

ಹಾಸನ ದಾಟಿ ಅರಸೀಕೆರೆಗೆ ಹೋಗ್ತಾ ಅದೆ ರೈಲು. ಹೊರಗೆ ನೋಡಿರೆ ಭತ್ತದ ಗದ್ದೆ. ಇನ್ನೂ ಇಲ್ಲಿ ಭತ್ತ, ರಾಗಿ ಬೆಳಿತ್ತಾ ಇರುವ ಕಾರಣವೇ ನಾವೆಲ್ಲಾ ಊಟ ಮಾಡ್ತೇವೆ. ಮೊದ್ಲೆಲ್ಲಾ ಎಷ್ಟು ಭತ್ತ ಬೆಳಿತ್ತಾ ಇತ್ತಿದ್ವು ? ಈಗ ಯಾರೂ ಬೇಸಾಯ ಮಾಡುದಿಲ್ಲ. ನಮ್ಮ ಮನೆಲಿಯೇ ಸುಮಾರು ಗದ್ದೆ ಇತ್ತಂತೆ ಮೊದ್ಲು. ಈಗ ಒಂದು ಚೂರೂ ಇಲ್ಲ. ಹಳೆ ಕತೆಗಳ ಎಲ್ಲಾ ಹೇಳ್ತಿದ್ರು ಅಜ್ಜ. ಅವರ ಅಪ್ಪನ ಕಾಲಲ್ಲಿ ಹೇಂಗಿತ್ತು ?, ಅವರ ಜವ್ವನಲ್ಲಿ ಹೇಂಗಿತ್ತು ? ಎಲ್ಲಾ ಈಗ ನೆಂಪು ಮಾತ್ರ. ನಾನು ಸಣ್ಣಾಗಿರುವಾಗ ಮಳೆಗಾಲಲ್ಲಿ, ಕರೆಂಟಿಲ್ಲದ್ದ ರಾತ್ರಿ, ಚಿಮಿಣಿ ಎಣ್ಣೆ ದೀಪ ಇಟ್ಟುಕೊಂಡು ಪೋರ್ಟಿಕೊದ ಮರದ ಬೆಂಚಿಲಿ ಕೂರುದು. ಅಜ್ಜನ ಕತೆ ಕೇಳುದು. ಹುಂ ! ಆ ದಿನ ಇನ್ನು ಯಾವತ್ತೂ ಬರುಕಿಲ್ಲ ನನ್ನ ಜೀವನಲ್ಲಿ. “ಕಾಲು ಮೇಲೆ ಇಟ್ಟು ಕೂತುಕೋ, ಮೈನ್ ಸುಚ್ಚು ಆಫ್ ಮಾಡಿ ಆಯ್ತಾ ? ಫೋನ್ ಕನೆಕ್ಷನ್ ತೆಗಿರಿ” ಅಜ್ಜನ ಜಾಗ್ರತೆ. “ಮಿಂಚುತ್ತೆ, ಕಿಟ್ಕಿ ಹತ್ರ ಕೂರ್ವೇಡಿ”.

ಅಡಿಕ್ಕೆ ಸೊಲಿಯುದು, ಅದ್ರ ಸಜ್ಜಿ ಮಾಡುದು ಅಜ್ಜನ ಇಷ್ಟದ ಕೆಲಸ. ಪುರ್ಸೊತ್ತು ಇರುವಾಗ ಎಲ್ಲಾ ಅಜ್ಜ ಚಿಟ್ಟೆಲಿ ಕೂತು ಅಡಿಕ್ಕೆ ರಿಪೇರಿ, ಸಜ್ಜಿ ಮಾಡಿಯಾರು. ಒಳ್ಳೆ ಅಡಿಕ್ಕೆ, ಅದ್ರಲ್ಲಿಯೂ ‘ಮೋರ’ ಬೇರೆ, ‘ಚೆಪ್ಪು ಗೋಟು ’, ‘ಪಠೋರ’, ‘ಕೋಕ’ ಎಲ್ಲಾ ಬೇರೆ ಬೇರೆ ಹೆಡಿಗೆಗೆ ಹಾಕಿರೆ ಒಂದೇ ಒಂದು ಅಡಿಕ್ಕೆಯೂ ಆಚೆ ಈಚೆ ಆವುಕಿಲ್ಲ. ಮಧ್ಯೆ ಯಾರಾರೂ ಬಂದ್ರೂ “ಏನು ?” “ಒಳ್ಳೆದು” “ಬಾಯಾರಿಕೆ ಬೇಕಾ ?” ಕೇಳಿ ಸ್ವಲ್ಪ ಮಾತಾಡಿ ಮತ್ತೆ ಅಡಿಕ್ಕೆ ಹೆಡಿಗೆ ಹತ್ರ ಕೂತಾಯ್ತು.

ಹುಂ ! ಈ ನೆನಪ್ಪು ಮನುಷ್ಯ ಕಾಡಿದಷ್ಟು ಮತ್ಯಾರೂ ಕಾಡುದಿಲ್ಲ. ಒಳ್ಳೆದೋ ಹಾಳೋ, ನಾವು ಮಾಡಿದ್ದು, ಬೇರೆಯವು ನವುಗೆ ಮಾಡಿದ್ದು, ಹೇಳಿದ್ದು, ಕೇಳಿದ್ದು, ಪ್ರತಿಯೊಂದೂ ನೆಂಪಾಗ್ತೆ. ಒಟ್ಟಿಗೆ ಇದ್ದವು, ಬಿಟ್ಟು ಹೋದವು, ಕುಶಿ, ಬೇಜಾ‌ಋ ಎಲ್ಲವೂ ನೆಂಪಾಗಿಕೊಂಡೇ ಇರ್ತೆ.

ಅಬ್ಬಾ ! ಎಷ್ಟು ದೂರ ನೋಡಿರೂ ತೆಂಗಿನ ತೋಟವೇ ಕಾಣ್ತಾ ಅದೆ. ಅರಸೀಕೆರೆ, ತಿಪ್ಟೂರು ಸುತ್ತಮುತ್ತ ತೆಂಗು ಜಾಸ್ತಿ. ಎಸ್ ಎಲ್ ಭೈರಪ್ಪನ ಕಾದಂಬರಿ ಓದಿರೆ, ಈ ಹೋಡೆಂii ವಿವರಣೆ ಸಿಕ್ಕುತ್ತೆ. ಹಾಸನ, ಚನ್ನರಾಯಪಟ್ಣ, ಅರಸೀಕೆರೆ, ಬಯಲುಸೀಮೆ ನನ್ನ ಊಹೆಯ ವ್ಯಾಪ್ತಿಗೆ ಮೀರಿದ್ದು. ಬಯಲು ಸೀಮೆಯ ಬಗ್ಗೆ, ಅಲ್ಲಿಯಾಣ ಸಂಸ್ಕೃತಿ, ಜನಂಗಳ ಬಗ್ಗೆ ನನಿಗೆ ಗೊತ್ತಾದ್ದು ಭೈರಪ್ಪನ ಕಾದಂಬರಿಗಳ ಓದುಕೆ ಶುರುಮಾಡಿದ ಮತ್ತೆಯೇ.

‘ತಬ್ಬಲಿಯು ನೀನಾದೆ ಮಗನೇ’ ಕಾದಂಬರಿ ಓದಿ ಕಣ್ಣೀರು ಬಂದಿತ್ತು. ಅಜ್ಜನಿಗೂ ತಂದುಕೊಟ್ಟಿತ್ತಿದ್ದೆ ಓದುಕೆ. ದನಗಳ ಬಗ್ಗೆ, ಮೂಕಪ್ರಾಣಿಗಳ ಬಗ್ಗೆ ನನ್ನ ಅಜ್ಜನಿಗೆ ಇದ್ದ ಪ್ರೀತಿಯ ಮೇಲೆ ಒಂದು ಪುಸ್ತಕವೇ ಬರಿವೋದು. ಮನೆಯ ಹಟ್ಟಿ ತುಂಬ ದನ, ಎಮ್ಮೆ ಇದ್ರೂ ಅಜ್ಜನಿಗೆ ಅದು ಕಮ್ಮಿಯೇ ! ದನವ ಮಾರುವ ಪ್ರಶ್ನೆಯೇ ಇಲ್ಲ. ನಾನು ಸಣ್ಣಾಗಿರುವಾಗ ಅಜ್ಜ ದನ ಮಾರಿದ್ರ ಯಾವತ್ತೂ ನೋಡ್ಲೇ ಇಲ್ಲ. ಬರ್ತಾ ಬರ್ತಾ ಅಪ್ಪ, ಚಿಕ್ಕಯ್ಯ ಅನಿವಾರ್ಯವಾಗಿ ದನ ಮಾರುವೇಕಾಗಿ ಬಂದಾಗುವಾಗ ಅಜ್ಜ ಮನಸ್ಸಿಲ್ಲದ್ದ ಮನಸ್ಸಿಂದ ಒಪ್ಪುತ್ತಿದ್ರು. ಆದ್ರೆ ಕೊಡುವ ದಿನ ಹಟ್ಟಿ ಹೊಡೆಗೆ ಹೋಗ್ತೇ ಇತ್ತಿಲ್ಲ. ದನ ಮಾರಿದ ದಿನ ಅಜ್ಜ ‘ಡಲ್ಲು’. ಹಟ್ಟಿಗೆ ಹೋದಷ್ಟು ಸರ್ತಿ ಹಿಂಡಿ, ಬೈಹುಲ್ಲು ಎಂತಾರೂ ದನಕ್ಕೆ ಹಾಕದ್ರೆ ಸಮಾಧಾನವೇ ಇಲ್ಲ. ಅಪ್ಪ ಎಷ್ಟು ಚರಿಪಿರಿ ಮಾಡಿರೂ ಅಜ್ಜನ ಮೋರೆಲಿ ಒಂದು ಸಣ್ಣ ನೆಗೆ ಮಾತ್ರ.

ರೈಲು ಅರಸೀಕೆರೆಲಿ ನಿತ್ತದೆ. ಇಲ್ಲಿ ಸುಮಾರು ಹೊತ್ತು ನಿಲ್ತೆ. “ಚಾಯ್, ಕಾಫಿ, ಇಡ್ಲಿ, ದೋಸೆ ” ಗಲಾಟೆಯೇ ಗಲಾಟೆ. ಎಲ್ಲಾ ಬಗೆ ಜನ ಇಲ್ಲಿ ಕಾಣ್ವೋದು. ಎಷ್ಟಾದ್ರೂ ರೈಲು ಹೇಳಿರೆ ‘ಮಿನಿ ಭಾರತ’ ಅಲ್ವಾ ?

ಇಲ್ಲಿಂದ ತಿಪ್ಟೂರು, ತುಮ್ಕೂರು, ಯಶ್ವಂತಪುರ, ಅಲ್ಲಿಂದ ಹೆಬ್ಬಾಳಕ್ಕೆ ಬಸ್ಸು. ಬ್ಯಾಟರಾಯನಪುರಲ್ಲಿ ಇಳುದ್ರೆ ಚರಣ್ ಬೈಕ್ ತೆಕ್ಕೊಂಡು ಬರ್ತಾನೆ ಹೇಳಿ ರೂಂಮೇಟ್ ರವಿ ಆಗ್ಲೇ ಫೋನ್ ಮಾಡಿ ಆಗ್ಯೆದೆ. ಮತ್ತೆ ಬೆಂಗ್ಳೂರಿಲಿ ಇರ್ವೇಕು. ಆ ಟ್ರಾಫಿಕ್, ಗಲಾಟೆ, ಹೊಗೆ, ಟೆನ್ಶನ್ ಎಲ್ಲವೂ ಕಾಯ್ತಾ ಅದೆ ನನಿಗೆ. ಅದೆಲ್ಲಾ ನನಿಗೆ ಮಾತ್ರ ಅಲ್ಲ. ಆ ಮಹಾನಗರಕ್ಕೆ ಕಾಲಿಡುವ ಪ್ರತಿಯೊಬ್ಬನಿಗೂ. ಒಬ್ಬೊಬ್ಬನಿಗೆ ಒಂದೊಂದು ಥರ ಕಾಣ್ತೆ ಬೆಂಗ್ಳೂರು. ಜಾಸ್ತಿ ಭಾವುಕ ಆದ್ರೂ ಕಷ್ಟ ಅಲ್ವಾ ?

ಮನೆ ನೆಂಪಾಗ್ತಾ ಅದೆ.

ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಯ್ಯ, ಚಿಕ್ಕಮ್ಮ, ತಮ್ಮಂದ್ರು, ತಂಗಿ, ಭಾವ, ತಂಗಿಯ ಅಮಳಿ ಮಕ್ಳು, ನನ್ನ ಮುದ್ದು ಸೊಸೆಯಂದ್ರು, ದನ, ಕರು, ತೋಟ, ಎಲ್ಲವೂ ನೆಂಪಾಗ್ತಾ ಅದೆ.

ನನ್ನ ಮನೆ, ನನ್ನ ಕನಸು, ನನ್ನ ಕಲ್ಪನೆ, ಮುಂದಾಣ ಬದ್ಕು, ಅಲ್ಲಿ ನಾನು ಹೇಂಗೆ ಇರ್ತೇನೆ ?

ನನ್ನ ಕನಸಿನ ಹುಡುಗಿ, ಅದ್ರ ಮನೆಯವ್ವು, ನನ್ನ ಮದ್ವೆ, ಮೊನ್ನೆಂದ ಕಳ್ದ ನಾಕು ದಿನ, ಸುತ್ತಿದ್ದು, ಮಂಗ್ಳೂರು, ಆಸ್ಪತ್ರೆ, ಪುತ್ತೂರು, ಬಾಲವನ, ಕೃತ್ತಿಕಾ, ಪುತ್ತೂರು ಬಸ್ಟ್ಯಾಂಡು, ರೈಲ್ವೇ ಸ್ಟೇಶನ್, ಬೆಂಗ್ಳೂರು, ಜಿಕೆವಿಕೆ, ನನ್ನ ‘ರೀಸರ್ಚು’, ಎಂಎಸ್ಸಿ ಡಿಗ್ರಿ, ನನ್ನ ಗೈಡು, ಪಾರ್ಟ್ ಟೈಮ್ ಕೆಲಸ, ಜರ್ಬೆರಾ ಗಿಡ, ಈ ರೈಲು, ರೈಲಿನ ಒಳಗೆ ಎಲ್ಲಿಯೋ ಹಾಡ್ತಾ ಇರುವ ಅಂತ್ಯಾಕ್ಷರಿ, ಮಾರುವವ್ರ “ಬಾಳೆಹಣ್ಣು, ಚಾಯ್, ಕಾಫಿ, ಕಾಫಿ, ಕಾಫಿ…… ”



Saturday, May 9, 2009

















ನನ್ನ ಕವನಗಳು
















ನಮಸ್ತೇ....
ಸಮಯವಿದ್ದಾಗಲೆಲ್ಲ ಗೀಚಿದ ಒಂದಷ್ಟು ಕವನಗಳನ್ನು ಕೆಲವು ಚಿತ್ರಗಳ ಮೇಲೆ ಹಚ್ಚಿದ್ದೇನೆ....

Tuesday, March 31, 2009

ಚಿತ್ರ ವಿಚಿತ್ರ ಮನಸ್ಥಿತಿ ಇರುವಾಗ ಬ್ಲಾಗ್ ಬರೆಯಲು ಹೊರಟರೆ ಆಗುವ ಎಡವಟ್ಟು ಗಳೇ ಹೀಗೆ... ಏನನ್ನು ಬರೆಯಬೇಕು ಎಂಬ ಸ್ಪಷ್ಟ ಅರಿವಿಲ್ಲದೆ ಬರೆಯುವ ಬರಹಗಳು ತಲೆ ಬುದವಿಲ್ಲದೆ ಬಡಬಡಿಸುವ ಮಾತುಗಳಾಗುತ್ತವೆ... ಏನೇನೋ ಹುಚ್ಚು ವಾಕ್ಯಗಳನ್ನು ಪೋಣಿಸಿ ಹೊಡೆಯುವ ಭಾಷಣವಾಗುತ್ತದೆ..
ಮತ್ತದೇ ಗೋಳು.... ತುಂಬಾ ದಿನಗಳ ಜಡತ್ವ.. ಸೋಮಾರಿತನವೇ ಮೈವೆತ್ತ ಅಕ್ಷಯರಾಮ ಮತ್ತೆ ಕೀ ಬೋರ್ಡ್ ಎದುರು ಕುಳಿತಿದ್ದಾನೆ... ಏನೇನೋ ಬಾಯಿಗೆ ಬಂದಂತೆ, ಮನಸಿಗೆ ತೋಚಿದಂತೆ ಗೀಚುತ್ತಿದ್ದಾನೆ..... ಓದುವರಾರೋ ? ಓದಿ ಕಿವಿ ಹಿಂಡುವರಾರೋ ? ಸರಿ ದಾರಿಗೆ ಎಳೆಯುವರಾರೋ ? ದೇವರಿಗೇ ಗೊತ್ತು...

ನನ್ನ ಕವನ

ಮಧ್ಯ ರಾತ್ರಿಯಲೆನ್ನ
ಎದೆಯೊಳೆದ್ದಿಹ ಭಾವ
ಕವನವಾಗುವ ತವಕದಲ್ಲಿ
ಕುಣಿದು..
ಒಂದೆರಡು ಸಾಲುಗಳ
ಚುಟುಕ ರೂಪದಿ ಬಂದು
ಸರಿದು ಹೋಯಿತು ಒಡಲ
ಬೇಗೆ ತಣಿದು

Saturday, August 2, 2008

"ಮಳೆ ಹನಿ"

ಇಳೆಗೆ ತಂಪನು ಕೊಡುವ
ಮಳೆ ಹನಿಯು ಒಮ್ಮೊಮ್ಮೆ,
ಮನಕೆ ಕಿಚ್ಚನು ಹಚ್ಚಿ
ಮೋಜು ನೋಡುವುದು..
ಸುರಿವ ಮಳೆ ಹನಿ ನಡುವೆ
ಮುರಿದ ಮನವದು ಕುಳಿತು
ಹಳೆಯ ನೆನಪಿನ ಬುತ್ತಿ
ಉಣ್ಣುತಿಹುದು...

Saturday, July 19, 2008

ನಮಸ್ತೇ.. ತುಂಬಾ ದಿನಗಳ ನಂತರ ಬ್ಲಾಗ್ ಬರೆಯಲು ಕುಳಿತಿದ್ದೇನೆ.. ಸ್ನಾತಕೋತ್ತರ ತರಗತಿಗೆ ಸೇರುವ ತಲೆಬಿಸಿಯಲ್ಲಿ ಇದ್ದ ಕಾರಣ ಅಂತರ್ಜಾಲದ ಕಡೆಗೆ ಮುಖ ಮಾಡಿರಲಿಲ್ಲ !!!

ಮತ್ತೆ ಕೀಬೋರ್ಡ್ ಮುಂದೆ ಕುಳಿತಾಗ ಏನು ಬರೆಯಬೇಕು ಎಂದೇ ತಿಳಿಯುತ್ತಿಲ್ಲ !!!

ಈ ಮಧ್ಯೆ ಗೀಚಿದ ಕೆಲವೊಂದು ಕಿರು ಕವನಗಳು ಕಿಸೆಯಲ್ಲಿವೆ......

ಒಂದೊಂದಾಗಿ ಬರೆಯುತ್ತಾ ಹೋಗುತ್ತೇನೆ... ಆಯಿತಾ ???

ಟಾಟಾ...

Sunday, June 15, 2008

ನಮಸ್ತೇ..

ತುಂಬಾ ದಿನಗಳ ನಂತರ ಮತ್ತೆ ಬ್ಲಾಗ್ ಬರೆಯಲು ಕುಳಿತಿದ್ದೇನೆ....

ಮನವೇಕೋ ಭಣ ಭಣ.. ಅದ್ಯಾಕೋ ಗೊತ್ತಿಲ್ಲ, ಒಂಥರಾ ಬೇಜಾರು... ನನ್ನ ಮೇಲೆ ನನಗೇ ಕೋಪ... ನಿರುತ್ಸಾಹ....

ಒಮ್ಮೊಮ್ಮೆ ಎಲ್ಲಿಲ್ಲದ ಸಂತೋಷ, ಉತ್ಸಾಹ, ಖುಷಿ... ಸ್ವಲ್ಪ ಹೊತ್ತು ಕಳೆದರೆ ಪ್ರಪಂಚವೇ ಮುಳುಗಿ ಹೋದ ಭಾವ... ಎರಡು ಶೃಂಗಗಳ ಮಧ್ಯೆ ತುಯ್ದಾಡುತ್ತಿದ್ದೇನೆ... ಈ ದ್ವಂದ್ವಗಳ ಬಂಧನದಿಂದ ಮನಸ್ಸು ಯಾಕೋ ತೀರಾ ಘಾಸಿ ಆಗಿದೆ !

ಯಾವುದೇ ಸ್ಥಿತಿ ಶಾಶ್ವತ ಅಲ್ಲ ಅನ್ನೋದು ನನಗೇ ಚೆನ್ನಾಗಿ ಗೊತ್ತು... ಆದರೆ, ಈ ರೀತಿಯ "ಬೈ ಪೋಲಾರ್ ಮೂಡ್" ಖಾಯಿಲೆ ಒಳ್ಳೆಯದಲ್ಲ....

ಇದೆಲ್ಲದಕ್ಕೂ ಒಂದು ಒಳ್ಳೆಯ ಕೌನ್ಸೆಲ್ಲಿಂಗ್ ಮಾಡಿಸಿಕೊಂಡರೆ ಸರಿ ಆಗುತ್ತದೆ.. ಆದರೆ ನನಗೆ ಅದೆಲ್ಲಕ್ಕಿಂತಲೂ ಹೆಚ್ಚಾಗಿ ಬೇಕಾದದ್ದು ನನ್ನ ಅಮ್ಮನ "ಸನ್ನಿಧಿ".....

ನನ್ನ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿದರೆ ಎಲ್ಲವೂ ಸರಿ ಹೋಗುತ್ತದೆ...

ನನ್ನ ಅಮ್ಮ , ಅಪ್ಪ, ಅಜ್ಜ, ಅಜ್ಜಿ, ಮನೆಯವರನ್ನು ಒಮ್ಮೆ ನೋಡಿದರೆ, ಒಂದಷ್ಟು ದಿನ ಅಲ್ಲಿ ನಾನಿದ್ದು ಬಂದರೆ ನನ್ನ ಈ ಮನ ಸ್ಥಿತಿ ಬದಲಾಗುತ್ತದೆ...

ಹುಂ... ಯಾಕೋ ಕುಯ್ತಾ ಇದ್ದಾನೆ ಅಂತ ಅನ್ನಿಸ್ತಾ ? ಮನಸ್ಸಿನಲ್ಲಿ ಇರೋದನ್ನು ಯಾರ ಹತ್ತಿರವಾದರೂ ಹಂಚಿಕೊಳ್ಳುವ ಅಂತ ಅನ್ನಿಸಿತು... ಹಾಗಾಗಿ ಇದನ್ನೆಲ್ಲಾ ಬರೆದೆ...

ಮತ್ತೊಮ್ಮೆ ಬ್ಲಾಗ್ ನ ಅಂಗಳಕ್ಕೆ ಬಂದಾಗ ಇಂಥಾ ಭಾವಗಳ್ಯಾವುವೂ ನನ್ನ ಮನದಲ್ಲಿ ಇರಲಾರವು.. ಇನ್ಯಾವುದೋ ಹೊಸತೊಂದು ಖುಷಿ ಅಥವಾ ದುಃಖ ಅಲ್ಲಿ ಕುಳಿತು ಕಾಯುತ್ತಾ ಇರುತ್ತದೆ... ಮನದ ಭಾವಗಳನ್ನು ಇದ್ದದ್ದು ಇದ್ದ ಹಾಗೆ ನಿಮ್ಮ ಮುಂದೆ ಇರಿಸುವುದೊಂದೇ ನನ್ನ ಕೆಲಸ... "ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ"

Wednesday, June 11, 2008

"ವಿಪರ್ಯಾಸ"

ಕೆಲವೊಂದು ತಿರುವುಗಳು

ಬಹು ಕ್ರೂರವಿಹುದಮ್ಮ,

ಕೆಲವೊಮ್ಮೆ ತಂಗಾಳಿಯೂ

ಸುಡುವ ಬೆಂಕಿ...

ತಂಪ ನೀಡುವ ಬದಲು

ಕಿಚ್ಚು ಹಚ್ಚುವ ಬಂಧ,

ಸಂತೈಸುವುದ ಬಿಟ್ಟು

ಅಣಕಿಪುದು ಬದುಕು...

Saturday, June 7, 2008

"ಚಾರಣ"

ಎತ್ತಿನ ಭುಜಕ್ಕೆ ಚಾರಣ...
ನನ್ನೊಡನೆ ಸಂದೀಪ..
ಭುಜದ ಕೆಳಗೆ!
ಬುಲೆಟ್ (ತೋಟೆ....) ಬೇಕಾ ?
ಭುಜಕ್ಕೆ ಏರಲು ಹೋಗಿ ಬಾಲಕ್ಕೆ ಏರಿದ್ದು !

"ನನ್ನ ಕೇರಳ ಪ್ರವಾಸ"


ಕೊಚಿನ್ ನಲ್ಲಿ ಸಮುದ್ರ ಯಾನ..


ಟೀ ಎಸ್ಟೇಟ್... ರಾಜ ಮಲೈ..
ಕ್ಯಾರೆಟ್ ಬೇಕಾ ??
ಮುನ್ನಾರ್ ನಲ್ಲಿ ದೋಣಿ ಸವಾರಿ.....

ಮುನ್ನಾರ್ ನ ದೃಶ್ಯ..


"ಮುದ್ದು ನೀಲ್ ಘಾಯ್.."

"ರಾಜ ಮಲೈ" ಕೇರಳ, ತಮಿಳುನಾಡು ಗಡಿ ಭಾಗದ ರಕ್ಷಿತಾರಣ್ಯ..
"ನೀಲ ಘಾಯ್" ಎಂಬ ಮುದ್ದು ಜೀವಿಯ ವಾಸ ಸ್ಥಾನ...

Thursday, June 5, 2008

"ಇರುವುದೆಲ್ಲವ ಬಿಟ್ಟು ಇರದಿರದೆಡೆಗೆ ತುಡಿಯುವುದೇ ಜೀವನ" ಅನ್ನೋ ಕವಿ ವಾಣಿ ಎಷ್ಟು ಸತ್ಯ ಅಲ್ವಾ ?

"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ" ಎಂಬ ಜಿ. ಎಸ್. ಎಸ್. ರ ಮಾತು ಈ ಸಂಬಂಧಗಳಿಗೂ ಅನ್ವಯಿಸುತ್ತದೆ ಅಂತ ನಂಗೆ ಅನ್ನಿಸುತ್ತದೆ... ನಮ್ಮ ಹತ್ತಿರವೇ ಇರುವ ನಮಗೋಸ್ಕರ ಎಂಥಾ ತ್ಯಾಗಕ್ಕೂ ಸಿದ್ಧರಾಗಿರುವ ನಮ್ಮ ಸ್ನೇಹಿತರನ್ನು ಬಿಟ್ಟು ನಾವು ಇನ್ಯಾರನ್ನೋ ನಮ್ಮ "ಆತ್ಮೀಯರು" ಎಂದುಕೊಂಡು ಭ್ರಮಿಸುತ್ತೇವೆ ! ನಮ್ಮ ನಿಜದ ಗೆಳೆಯರ ಮನಕ್ಕೆ ನೋವು ಕೊಟ್ಟು ಇನ್ಯಾರನ್ನೋ ಮೆಚ್ಚಿಸ ಹೊರಡುತ್ತೇವೆ.. ವಿಪರ್ಯಾಸ ಅಂದರೆ, we never repent for that !

ಹಾಂ.. ಇವನ್ಯಾವನೋ ದೊಡ್ಡ ವೇದಾಂತಿಯ ಹಾಗೆ ಭಾಷಣ ಹೊಡೀತಾ ಇದ್ದಾನೆ ಅಂತ ಅನ್ಕೋ ಬೇಡಿ... ಇದು ನನ್ನ ಸ್ವಂತ ಅನುಭವ.. ಇಂಥಾ ಅನೇಕ ಘಟನೆಗಳು ನಮ್ಮ ನಿಮ್ಮೆಲ್ಲರ ಬದುಕಲ್ಲೂ ಆಗಿ ಹೋಗಿರುತ್ತದೆ.. ನೀವೂ ಇಂಥದ್ಯಾವುದಾದರೂ ಅನುಭವ ಹೊಂದಿದ್ದರೆ ಮಾತ್ರ ನನ್ನ ಮಾತು ಸತ್ಯ ಅಂತ ಅನ್ನಿಸಬಹುದು.. ಏನಂತೀರಾ ?

ನಮಸ್ತೇ..

ಈ ಸಂಬಂಧಗಳು ತುಂಬಾ ವಿಚಿತ್ರ.. ನಾವು ಯಾರನ್ನು ಬಯಸುತ್ತೇವೋ ಅವರು ನಮಗೆ ಸಿಗುವುದಿಲ್ಲ.. ಯಾರು ನಮ್ಮನ್ನು ಬಯಸುತ್ತಾರೋ ಅವರಿಗೂ ನಾವು ಸಿಗುವುದಿಲ್ಲ (ನಾವು ಅವರೆಡೆಗೆ ಹೋಗುವುದಿಲ್ಲ !!!) ಕೈಗೆ ಸಿಕ್ಕದ ಕನಸುಗಳತ್ತ ಕನವರಿಸುತ್ತೇವೆ ! ನಮ್ಮ ಹತ್ತಿರ ಇರುವವರಿಗೆ ನಿತ್ಯವೂ ನೋವು ಕೊಡುತ್ತೇವೆ.. ದೂರ ಇರುವವ್ರಿಗೊಸ್ಕರ ನಾವು ನೋವು ತಿನ್ನುತ್ತೇವೆ !!!

Wednesday, June 4, 2008

ನನ್ನ ಬ್ಲಾಗ್ ಗೆ ಒಂದು ಸುಂದರ ರೂಪ ಕೊಟ್ಟ ರಮೇಶಣ್ಣ ನಿಗೆ ಧನ್ಯವಾದಗಳು..

"ಆಶಯ"

ಹಸಿರಾಗಬೇಕು ಮನ
ಬಿಸಿಯಾರಬೇಕು...
ಕಟ್ಟಿಟ್ಟ ಭಾವಗಳ
ಕಟ್ಟು ಒಡೆಯಲುಬೇಕು,
ಎದೆಯಾಳದಲಿ ಕುಳಿತ
ಸಿಟ್ಟು ಕಳೆಯಲು ಬೇಕು,

ಹಸಿರಾಗಬೇಕು ಮನ
ಬಿಸಿಯಾರಬೇಕು...

ಹೃದಯಕ್ಕೆ ಮೆತ್ತಿರುವ
ಕೊಳೆಯ ತೊಳೆಯಲುಬೇಕು,
ಕಣ್ಣೀರ ಗಂಗೆಯಲಿ
ಪಾಪ ಕಳೆಯಲುಬೇಕು,
ಹಸಿರಾಗಬೇಕು ಮನ
ಬಿಸಿಯಾರಬೇಕು...

ನಮಸ್ತೇ..

ಎಷ್ಟೋ ಸಲ ನಾವು ನಮ್ಮಿಂದ ಚಿಕ್ಕವರಿಗೆ, ಕಿರಿಯರಿಗೆ, ಮಿತ್ರರಿಗೆ, ಉಪದೇಶ ಮಾಡುತ್ತಾ ಇರುತ್ತೇವೆ... "ಅದನ್ನು ಮಾಡು, ಇದನ್ನು ಮಾಡು, ಹಾಗೆ ಮಾಡಬೇಡ, ಹೀಗೆ ಮಾಡಬೇಡ.... "

ಆದರೆ ಅವರೆಲ್ಲರಿಗಿಂತ ಎಷ್ಟೋ ಹೆಚ್ಚಿನ ತಪ್ಪು ಕೆಲಸ ನಾವು ಮಾಡುತ್ತಿರುತ್ತೇವೆ....

ಉದಾಹರಣೆಗೆ ನನ್ನ ಕಿರಿಯ ಮಿತ್ರರಿಗೆ "ಧೂಮಪಾನ ಕೆಟ್ಟದ್ದು ಬಿಟ್ಟು ಬಿಡು" ಅಂತ ಪ್ರವಚನ ನೀಡುವ ನಾನು, ಎಷ್ಟೋ ಸಲ ಸಿಗರೇಟು ಹಚ್ಚಿ ಹೊಗೆ ಉಗುಳಿದ್ದೇನೆ !!!!

ಊರು ಉದ್ಧಾರ ಮಾಡುವ ಭರದಲ್ಲಿ ನಾವು ನಮ್ಮ ಮನೆ ಅಂಗಳದ ಕಸ ಗುಡಿಸುವುದನ್ನೇ ಮರೆತು ಬಿಡುತ್ತೇವೆ !! ಎಂಥಾ ವಿಪರ್ಯಾಸ ಅಲ್ವಾ ?

ಒಮ್ಮೆ ಒಬ್ಬನೇ ಕುಳಿತು ಆತ್ಮಾವಲೋಕನ ಮಾಡಿಕೊಂಡರೆ ಸಾಕು, ನಮ್ಮ ಬಂಡವಾಳ ನಮಗೇ ತಿಳಿದು ಹೋಗುತ್ತದೆ !!

ಹುಂ.... ಯಾವಾಗ ನಾನು ಈ ಕೆಟ್ಟ ಚಾಳಿಯನ್ನು ಬಿಡುತ್ತೇನೋ ?

ಪರಿವರ್ತನೆ ಜಗದ ನಿಯಮ ಅಲ್ವಾ ? ಪ್ರತಿ ದಿನವೂ ಪ್ರತಿ ಕ್ಷಣವೂ ನಾವು ಬದಲಾಗುತ್ತಾ ಇರುತ್ತೇವೆ, ಬದಲಾಗಬೇಕು ಕೂಡಾ.. ಆದರೆ ಆ ಬದಲಾವಣೆ ಒಳ್ಳೆಯದಕ್ಕಾಗಿರಲಿ.. ನಮ್ಮ ಹೊಸ ಮುಖವು ಹಳೆಯದಕ್ಕಿಂತ ಸುಂದರವಾಗಿರಲಿ, ಸ್ವಚ್ಚವಾಗಿರಲಿ, ಸಹ್ಯವಾಗಿರಲಿ...

ಹೊಸತನದ ತುಡಿತ ಹರುಷದಾಯಕವಾಗಿರಲಿ..

ನಮ್ಮಿಂದ ಆದಷ್ಟು ಮಟ್ಟಿಗೆ ನಾವು ಉತ್ತಮರಾಗೋಣ.. ಕೆಟ್ಟ ಭಾವನೆಗಳನ್ನು ದೂರವಿರಿಸೋಣ.....

ಏನಂತೀರಾ ?

Tuesday, June 3, 2008

ನಮಸ್ತೇ..

ನಮ್ಮ ಸುತ್ತಮುತ್ತಲೇ ನಡೆಯುವ ಕೆಲವೊಂದು ವಿಚಾರಗಳನ್ನ ನಾವು ಗಮನಿಸುವುದೇ ಇಲ್ಲ !! ದಿನ ನಿತ್ಯ ಆಗುವ ಈ ಘಟನೆಗಳಿಂದ ನಾವು ಪಾಠ ಕಲಿಯುವುದೂ ಇಲ್ಲ...

ನಾವು ಯಾವಾಗಲೂ ಹೋಗುವ ಹೋಟೆಲ್ ನ ಸಪ್ಲಯರ್ ನಮಗೆ ನಗು ನಗುತ್ತಾ ಬೇಕಾದ್ದನ್ನು ತಂದಿಡುತ್ತಾನೆ.. ನಿತ್ಯ ನಮ್ಮನ್ನು ಕರೆದೊಯ್ಯುವ ಆಟೋ ಡ್ರೈವರ್ ನಮ್ಮನ್ನು ಕಂಡ ಕೂಡಲೇ ನಿಲ್ಲಿಸಿ ಮುಗುಳ್ನಗುತ್ತಾನೆ.. ಸಂಜೆ "ವಾಕ್" ಹೋಗುವಾಗ ರಸ್ತೆ ಬದಿಯ ಪಾನಿ ಪೂರಿ ಅಂಗಡಿಯಾತ ನಾವು ಬಂದೊಡನೆ ಚಕ ಚಕನೆ ಈರುಳ್ಳಿ ಹೆಚ್ಚಿ ಮಸಾಲೆ ಪೂರಿ ಕೈಗೆ ಕೊಡುತ್ತಾನೆ... ಪರಿಚಯದ ಕಂಡಕ್ಟರ್ ಚಿಲ್ಲರೆ ಇಲ್ಲದಿದ್ದರೂ ಸಹಕರಿಸುತ್ತಾನೆ... ತರಕಾರಿ ಅಂಗಡಿಯ ಮುದುಕಿ ಒಂದೆರಡು ಟೊಮೇಟೊ ಜಾಸ್ತಿ ಕೊಡುತ್ತಾಳೆ... ಹೀಗೆ ನಮ್ಮ ಜೊತೆಜೊತೆಗೇ ಇರುವ ಹಲವಾರು ಮಂದಿ "ನಮ್ಮವರನ್ನು"ನಾವು ಗುರುತಿಸಿ ಗೌರವಿಸಲು ಮರೆಯುತ್ತೇವೆ.... ಅವರೊಡನೆ ಬೆರೆಯಲು ಹಿಂಜರಿಯುತ್ತೇವೆ !!! "ನಮ್ಮ ಸೇವೆ ಅವರ ಕರ್ತವ್ಯ, ಅವರು ಹೊಟ್ಟೆ ಪಾಡಿಗಾಗಿ ಆಯ್ದುಕೊಂಡ ವೃತ್ತಿ" ಎಂದು ಕೊಂಡು ಸುಮ್ಮನೆ ಮುಂದಕ್ಕೆ ಹೋಗುತ್ತೇವೆ... ಅವರೆಡೆಗೆ ಪುಟ್ಟದೊಂದು ಮುಗುಳ್ನಗು "ಎಸೆಯಲು" ನಮ್ಮ "ಪ್ರೆಸ್ಟೀಜ್" ಅಡ್ಡ ಬರುತ್ತದೆ !!!

ನಾವು ದೊಡ್ಡವರೆಂಬ ಭಾವ, ಒಣ ಜಂಭ ನಮ್ಮನ್ನು ಇತರರೊಂದಿಗೆ ಬೆರೆಯಲು ಬಿಡುವುದಿಲ್ಲ.... ಆ ದಪ್ಪ ಮುಖ ಹೊತ್ತು ಕೊಂಡು ನಾವು "ಧುಸು ಧುಸು" ಎನ್ನುತ್ತಾ ನಡೆದರೂ, "ನಮ್ಮ ತಲೆ ಬಿಸಿ ನಮಗೆ ಮಾರಾಯಾ" ಎಂದು ಅವಸರಿಸಿದರೂ ಸೇವಾ ಕ್ಷೇತ್ರದಲ್ಲಿರುವ ಮಿತ್ರರಾರೂ ನಮ್ಮತ್ತ ಕೋಪ ತೋರಿಸುವುದಿಲ್ಲ..

ಇನ್ನು ಮುಂದೆಯಾದರೂ ನಾವು ಹೊರಗೆ ವ್ಯವಹರಿಸುವಾಗ ನಮ್ಮ ಕಣ್ಣು ತೆರೆಯೋಣ... ನಮ್ಮ ಕಷ್ಟ ಏನೇ ಇದ್ದರೂ, ನಮಗಾಗಿ ಬೆವರು ಸುರಿಸುವ ನಮ್ಮವರನ್ನು ಪ್ರೀತಿಯಿಂದ ಮಾತನಾಡಿಸೋಣ... "ಎಲ್ಲರೊಳಗೊಂದಾಗೋಣ"

ಏನಂತೀರಾ ?

Monday, June 2, 2008

"ಬೆಂಗಳೂರಿನ ಬದುಕು"

ಬೆಂದ ಕಾಳೂರಿನಲಿ

ಬೆಂದು ಹೋಗಿದೆ ಜೀವ

ಭರದಿ ಓಡುತಲಿರುವ

ಕಾಲಕ್ಕೆ ಸಿಲುಕಿ...

ದಪ್ಪ ನೋಟಿನ ಕಂತೆ,

ಕೆಟ್ಟ ನೋಟದ ಸಂತೆ,

ಬಿಸಿ ಗಾಳಿ ಬೆವರುಗಳ

ಸಾಗರವ ಕಲುಕಿ...

ನಮಸ್ತೆ.... ಮನಕ್ಕೆ ಮುಸುಕಿದ ಮೋಡ ಮರೆಯಾಗಿದೆ... ಸ್ವಚ್ಚ ಬಾನಿನಲ್ಲಿ ಸುಂದರ ಸೂರ್ಯೋದಯವಾಗಿದೆ.. ಮನದ ಆಳದಲ್ಲಿ ತುಂಬಿಕೊಂಡಿದ್ದ ಕೊಳೆಯನ್ನು ಕಳೆಯುವ ಕಾರ್ಯ ಪ್ರಾರಂಭವಾಗಿದೆ... ಸತ್ಪಥದಲ್ಲಿ ಹೆಜ್ಜೆಯಿಡುವತ್ತ ಸಾಗಿದ್ದೇನೆ..

ತೃಪ್ತಿಯಿದೆ.. ಸಮಾಧಾನವಿದೆ...

ನಗುವಿದೆ... ಗೆಲುವಿದೆ...

Friday, May 30, 2008

ನಮಸ್ಕಾರ....

Wednesday, May 28, 2008

"ವಿಷಾದ"

ಮೊನ್ನೆ ತಾನೇ "ಬೆಂದ ಕಾಳೂರು" ಎಂಬ ಬೆಂಗಳೂರಿನ ಬೀದಿ ಒಂದರಲ್ಲಿ ಹೋಗುತ್ತಿದ್ದಾಗ ಫುಟ್ ಪಾತ್ ಮೇಲೆ ಕುಳಿತು ಸಿಗರೇಟು ಸೇದುತ್ತಿದ್ದ ಪುಟ್ಟ ಹುಡುಗನನ್ನು ನೋಡಿದೆ.... ಎಳಸು ಬಾಲಕನ ಬಾಯಿ ತುಂಬಾ ಹೊಗೆ! ಪಕ್ಕದಲ್ಲೇ ಇನ್ನೊಬ್ಬ ಪೋರ ಕುಳಿತು ತನ್ನ ಸರದಿಗಾಗಿ ಕಾಯುತ್ತಿದ್ದ.. ಬಳಪ ಹಿಡಿಯಬೇಕಾದ ಕೈಯಲ್ಲಿ "ಬತ್ತಿ" !!!

ಇದು ತಪ್ಪು ಎಂದು ಬುದ್ದಿ ಹೇಳುವವರಿಲ್ಲ... ರಾಜಧಾನಿಯ ಮಹಾಜನತೆ ತಮ್ಮ ತಮ್ಮ ಕೆಲಸಗಳಲ್ಲೇ ಮಗ್ನ !

ರಾಜಕೀಯದ ಅತಿರಥ ಮಹಾರಥರೆಲ್ಲರೂ ಚುನಾವಣೆಯಲ್ಲಿ "ಬ್ಯುಸಿ"ಯಾಗಿದ್ದರೆ, ಕನ್ನಡದ ಸೇನಾನಿಗಳೆಲ್ಲ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವುದರಲ್ಲಿ ತಲ್ಲೀನ..

ಪ್ರತಿ "ಕ್ಷಣ"ವೂ ಹಣ ಬೇಡುವ ನಗರವಲ್ಲವೇ ?

ಆ ಪುಟ್ಟ ಕಂದನ ಭವಿಷ್ಯವನ್ನು ನೆನೆದಾಗ ಕಂಡದ್ದು.....

"ವಿಷಾದ"

" ಹೊಗೆಯು ಹೊಮ್ಮುತಲಿಹುದು

ಕೆಮ್ಮು ಚಿಮ್ಮುತಲಿಹುದು

ರಸ್ತೆ ಬದಿ ಕುಳಿತಿರುವ

ಹುಡುಗನೆದೆಯಿಂದ...

ಪುಟ್ಟ ಕಂದನ ಕೈಲಿ

ಸುಡು ಸುಡುವ ಹೊಗೆಬತ್ತಿ...

ಜಗವು ನೋಡುತಲಿಹುದು

ನಿರ್ಭಾವದಿಂದ..."

ಮಳೆಗಾಲಕ್ಕೆ ಮುನ್ನುಡಿ..

ಗೆಳೆಯರೇ... ಮಳೆಗಾಲ ಪ್ರಾರಂಭವಾಗಿದೆ.... ಸುತ್ತಲೂ ಧೋ ಎಂದು ಮಳೆ ಸುರಿಯುತ್ತಿದೆ... ಮನೆಯೊಳಗೆ ಕುಳಿತುಕೊಂಡು ಬೆಚ್ಚಗೆ ಕಾಫಿ ಕುಡಿಯುತ್ತ, ನಮ್ಮ ಇಷ್ಟದ ಪುಸ್ತಕ ಕೈಯಲ್ಲಿ ಹಿಡಿದು ಕುಳಿತರೆ ಸಾಕು ಅದೇ ಸ್ವರ್ಗ.... ಜೊತೆಗೆ ನಾಲ್ಕು ಹಪ್ಪಳ ಸಿಕ್ಕಿದರಂತೂ.... ಆಹಾ... ಅಂದ ಹಾಗೆ ನಾನು ಈ ಬಾರಿಯ ಮಳೆಗಾಲವನ್ನೂ ಮೂಡಿಗೆರೆಯಲ್ಲೇ ಕಳೆಯುವ ಅವಕಾಶ ದೊರಕಿದೆ.. ಮೂಡಿಗೆರೆಯ ಮಳೆಯಂತೂ ತುಂಬಾ ವಿಶಿಷ್ಟ... ಅದರ ಮಜಾವನ್ನು ಅನುಭವಿಸಿಯೇ ಸವಿಯಲು ಸಾಧ್ಯ.. ಚಳಿ ಗಾಳಿ, ಆಕಾಶದ ತುಂಬಾ ಕವಿದ ಮೋಡ, ಸೂರ್ಯನ ಪತ್ತೆಯೇ ಇಲ್ಲ... ಹುಂ.. ಅದೆಲ್ಲ ಬೇಕಾದ್ರೆ ನೀವು ಇಲ್ಲಿಗೇ ಬರಬೇಕು...
ಈ ಧಾರಾಕಾರ ಮಳೆಯ ಮಧ್ಯೆಯೂ ಒಂದು ಸಣ್ಣ ಚಾರಣ ಮಾಡುವ ಯೋಜನೆಯೂ ಇದೆ.. ನನ್ನ ಪ್ರೀತಿಯ ಘಾಟಿ ಕನ್ಯೆ "ಚಾರ್ಮಾಡಿ" ನನ್ನನ್ನ ಕೈ ಬೀಸಿ ಕರೆಯುತ್ತಾ ಇದ್ದಾಳೆ.. ಜೊತೆಗೆ ನನ್ನ ಆಜನ್ಮ ಮಿತ್ರರಾದ ಜಿಗಣೆಗಳೂ.... ಹೋಗದೇ ಇರೋದಿಕ್ಕಗುತ್ತದಾ ? ನೀವೇ ಹೇಳಿ ?
ಒಂದು ಸುಂದರ ಭಾನುವಾರ ನಾನು ಚಾರ್ಮಾಡಿಯತ್ತ ಹೆಜ್ಜೆ ಹಾಕಲಿದ್ದೇನೆ... ಮೋಡಗಳಿಗೆ ಮುತ್ತು ಕೊಡುವ ಆಸೆ ನಂಗೆ.. ನೀವೂ ಬರಬೇಕು ಅಂತ ಅನ್ನಿಸ್ತಿದೆಯಾ ?
ಉಹುಂ... ನಾನು ಒಬ್ಬನೇ ಹೋಗುತ್ತಾ ಇರೋದು....
ಹೋಗಿ ಬಂದ ಮೇಲೆ ಆ ಕತೆ ಹೇಳ್ತೇನೆ... ಆಯಿತಾ ?
ಟಾಟಾ...

Tuesday, May 27, 2008

"ಮುರಿದ ಮನ"

ಸುಡುವ ಭಾವಗಳಿಂದು

ಮನಕೆ ಕಿಡಿ ಹಚ್ಚಿಹವು

ತಣಿಸೋ ತಂಗಾಳಿಯದು

ಬಹು ದೂರವಿಹುದು..

ಸಂತಯಿಸುವಾ ಮಾತು,

ಸ್ಪರ್ಶಕ್ಕಾಗಿಯೇ ಕಾದು

ಮರುಗುತ್ತ ಕುಳಿತಿಹುದು

ಜೀವ ಬೆಂದು...

ಮನದ ಮಾತುಗಳು

ಬ್ಲಾಗ್ ಲೋಕಕ್ಕೆ ಕಾಲಿಡುವಾಗ ಏನೋ ಒಂದು ಭಯ.... ನನ್ನ ಬರಹಗಳನ್ನು, ಹುಚ್ಚು ಭಾವನೆಗಳನ್ನು ಎಲ್ಲರೆದುರು ತೆರೆದಿಡಲು ಏನೋ ಸಂಕೋಚ..... ಬರವಣಿಗೆಯ ಮೊದಲ ಹಂತದಲ್ಲಿ ಕಾಣುವ ಈ ಹಿಂಜರಿತವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದೇನೆ... ಹಾಂ.... ನನಗೆ ಬ್ಲಾಗ್ ತೆರೆಯಲು ಸಹಕರಿಸಿದ ನನ್ನ ಪ್ರೀತಿಯ ರಮೇಶಣ್ಣನಿಗೆ ತುಂಬಾ ತುಂಬಾ ಥ್ಯಾಂಕ್ಸ್ !!!

ನನ್ನ ಈ ಪಯಣದಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ.... ನಿಮ್ಮ ಪ್ರೋತ್ಸಾಹ, ಹಾರೈಕೆಗಳೇ ನನಗೆ ಸ್ಪೂರ್ತಿ.....

ನನ್ನ ಕವನಗಳು, ಕೆಲವೊಂದು ಬರಹಗಳು, ಚಾರಣದ ಕತೆಗಳು, ಹೀಗೆ ಎಲ್ಲವನ್ನೂ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಾ ಇದ್ದೇನೆ.......

ಓದಿ ಅಭಿಪ್ರಾಯ ಬರೆಯುತ್ತೀರಲ್ವ ???

"ಚಿಂತೆ"

ಮನದ ಭಾವಗಳನ್ನು

ಹಂಚಿಕೊಳ್ಳಲು ಬೇಕು,

ಮುಚ್ಚಿಟ್ಟ ದುಃಖವದು ಕಿಚ್ಚಿನಂತೆ....

ಎದೆಯ ತೆರೆಯಲು ಬೇಕು,

ತುಟಿ ಬಿಚ್ಚಿದರೆ ಸಾಕು,

ನೋವು ತಾ ಕರಗುವುದು ಮಂಜಿನಂತೆ....

ನಮಸ್ಕಾರ



ಮೊಟ್ಟ ಮೊದಲ ಬಾರಿಗೆ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಚರಣಗಳಿಗೆ ವಂದಿಸುತ್ತೇನೆ.
ಎಲ್ಲರಿಗೂ ನಮಸ್ಕಾರಗಳು. ನಾನು ಅಕ್ಷಯರಾಮ, ಕಾವಿನಮೂಲೆ....
ನಾನು "ತೋಟಗಾರಿಕೆ" ಯಲ್ಲಿ ಪದವೀಧರ... ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ...