Tuesday, June 3, 2008

ನಮಸ್ತೇ..

ನಮ್ಮ ಸುತ್ತಮುತ್ತಲೇ ನಡೆಯುವ ಕೆಲವೊಂದು ವಿಚಾರಗಳನ್ನ ನಾವು ಗಮನಿಸುವುದೇ ಇಲ್ಲ !! ದಿನ ನಿತ್ಯ ಆಗುವ ಈ ಘಟನೆಗಳಿಂದ ನಾವು ಪಾಠ ಕಲಿಯುವುದೂ ಇಲ್ಲ...

ನಾವು ಯಾವಾಗಲೂ ಹೋಗುವ ಹೋಟೆಲ್ ನ ಸಪ್ಲಯರ್ ನಮಗೆ ನಗು ನಗುತ್ತಾ ಬೇಕಾದ್ದನ್ನು ತಂದಿಡುತ್ತಾನೆ.. ನಿತ್ಯ ನಮ್ಮನ್ನು ಕರೆದೊಯ್ಯುವ ಆಟೋ ಡ್ರೈವರ್ ನಮ್ಮನ್ನು ಕಂಡ ಕೂಡಲೇ ನಿಲ್ಲಿಸಿ ಮುಗುಳ್ನಗುತ್ತಾನೆ.. ಸಂಜೆ "ವಾಕ್" ಹೋಗುವಾಗ ರಸ್ತೆ ಬದಿಯ ಪಾನಿ ಪೂರಿ ಅಂಗಡಿಯಾತ ನಾವು ಬಂದೊಡನೆ ಚಕ ಚಕನೆ ಈರುಳ್ಳಿ ಹೆಚ್ಚಿ ಮಸಾಲೆ ಪೂರಿ ಕೈಗೆ ಕೊಡುತ್ತಾನೆ... ಪರಿಚಯದ ಕಂಡಕ್ಟರ್ ಚಿಲ್ಲರೆ ಇಲ್ಲದಿದ್ದರೂ ಸಹಕರಿಸುತ್ತಾನೆ... ತರಕಾರಿ ಅಂಗಡಿಯ ಮುದುಕಿ ಒಂದೆರಡು ಟೊಮೇಟೊ ಜಾಸ್ತಿ ಕೊಡುತ್ತಾಳೆ... ಹೀಗೆ ನಮ್ಮ ಜೊತೆಜೊತೆಗೇ ಇರುವ ಹಲವಾರು ಮಂದಿ "ನಮ್ಮವರನ್ನು"ನಾವು ಗುರುತಿಸಿ ಗೌರವಿಸಲು ಮರೆಯುತ್ತೇವೆ.... ಅವರೊಡನೆ ಬೆರೆಯಲು ಹಿಂಜರಿಯುತ್ತೇವೆ !!! "ನಮ್ಮ ಸೇವೆ ಅವರ ಕರ್ತವ್ಯ, ಅವರು ಹೊಟ್ಟೆ ಪಾಡಿಗಾಗಿ ಆಯ್ದುಕೊಂಡ ವೃತ್ತಿ" ಎಂದು ಕೊಂಡು ಸುಮ್ಮನೆ ಮುಂದಕ್ಕೆ ಹೋಗುತ್ತೇವೆ... ಅವರೆಡೆಗೆ ಪುಟ್ಟದೊಂದು ಮುಗುಳ್ನಗು "ಎಸೆಯಲು" ನಮ್ಮ "ಪ್ರೆಸ್ಟೀಜ್" ಅಡ್ಡ ಬರುತ್ತದೆ !!!

ನಾವು ದೊಡ್ಡವರೆಂಬ ಭಾವ, ಒಣ ಜಂಭ ನಮ್ಮನ್ನು ಇತರರೊಂದಿಗೆ ಬೆರೆಯಲು ಬಿಡುವುದಿಲ್ಲ.... ಆ ದಪ್ಪ ಮುಖ ಹೊತ್ತು ಕೊಂಡು ನಾವು "ಧುಸು ಧುಸು" ಎನ್ನುತ್ತಾ ನಡೆದರೂ, "ನಮ್ಮ ತಲೆ ಬಿಸಿ ನಮಗೆ ಮಾರಾಯಾ" ಎಂದು ಅವಸರಿಸಿದರೂ ಸೇವಾ ಕ್ಷೇತ್ರದಲ್ಲಿರುವ ಮಿತ್ರರಾರೂ ನಮ್ಮತ್ತ ಕೋಪ ತೋರಿಸುವುದಿಲ್ಲ..

ಇನ್ನು ಮುಂದೆಯಾದರೂ ನಾವು ಹೊರಗೆ ವ್ಯವಹರಿಸುವಾಗ ನಮ್ಮ ಕಣ್ಣು ತೆರೆಯೋಣ... ನಮ್ಮ ಕಷ್ಟ ಏನೇ ಇದ್ದರೂ, ನಮಗಾಗಿ ಬೆವರು ಸುರಿಸುವ ನಮ್ಮವರನ್ನು ಪ್ರೀತಿಯಿಂದ ಮಾತನಾಡಿಸೋಣ... "ಎಲ್ಲರೊಳಗೊಂದಾಗೋಣ"

ಏನಂತೀರಾ ?

1 comment:

Anonymous said...

ಹಾಯ್ ಅಕ್ಷಯ್, ನಿನ್ನ ಬ್ಲಾಗ್ ನೋಡಿ ತುಂಬ ಖುಷಿಯಾಯ್ತು. ವೆಲ್ ಡನ್ . ನೀನು ಇತ್ತೀಚೆಗೆ ಕಳಿಸಿದ್ದ ಕವನ ನಂಗೆ ತುಂಬ ಇಷ್ಟ ವಾಗಿತ್ತು. ನಿಜಕ್ಕೂ ನಿನ್ನೋಳಗೊಬ್ಬ ಪ್ರತಿಭಾವಂತ ನಿದ್ದಾನೆ. ಯಾವುದೇ ಕಾರಣಕ್ಕೆ ಬರ್ಯೋದು ಬಿಡಬೇಡ. ನಿನ್ನ ಜತೆ ನಾವೆಲ್ಲ ಇದ್ದೇವೆ. ಗುಡ್ ಲಕ್