Tuesday, March 19, 2013

ಪಯಣ 5

ಕತೆ, ಕವನ ಕಾದಂಬರಿ ಬರಿಯುದು ಅಷ್ಟು ಸುಲಭದ ಕೆಲಸ ಅಲ್ಲ ಹೇಳುದು ಈಗ ಅರ್ಥ ಆಗ್ತಾ ಅದೆ. ಮೊದ ಮೊದಲು ನಾನು ಸಣ್ಣ ಪುಟ್ಟ ಪದ್ಯ, ಕವನ ಬರಿತ್ತಾ ಇತ್ತಿದ್ದೆ !! ಅದ್ರ ಓದಿದವು “ಲಾಯ್ಕದೆ, ಇನ್ನೂ ಬರಿ” ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹವೂ ಮಾಡಿಕೊಂಡಿತ್ತಿದ್ವು. ರಾಮಕುಂಜಲ್ಲಿ ಪಿಯುಸಿ ಮಾಡುವಾಗ ಕನ್ನಡ ಮಾಷ್ಟ್ರು ಗಣರಾಜ ಕುಂಬ್ಳೆ ಮಾವನಲ್ಲಿ ಪಾದ ಪೂಜೆ ಆದ ಮೇಲೆ ಗುರುಗಳ ಚರಣದಡಿಲಿ ಒಂದು ಪದ್ಯ ಅರ್ಪಿಸಿದೆ. ಗುರುಗಳು ಪ್ರೀತಿಂದ ಮಂತ್ರಾಕ್ಷತೆ ಕೊಟ್ಟು ಆಶೀರ್ವಾದ ಮಾಡಿದ್ವು . ಅದೇ ಹುರುಪಿಲಿ ಮತ್ತೆ ಒಂದಷ್ಟು ಪದ್ಯ ಬರ್ದೆ. ಹೆಚ್ಚಿನ ಪದ್ಯ ಎಲ್ಲಾ ಗುರುಗಳ ಬಗ್ಗೆ, ಗೋವಿನ ಬಗ್ಗೆ ಇತ್ತು. ‘ಬಿಂದು ರಾಮಾಯಣ’ ಹೇಳುವ 108 ಪದ್ಯ ಇರುವ ಒಂದು ನೀಳ್ಗವನ ಬರ್ದೆ. ಆ ಕವನಮಾಲೆಯ ಖುದ್ದು ಗುರುಗಳೇ ಓದಿ, ತಿದ್ದಿ ಆಶೀರ್ವಾದ ಮಾಡಿದ್ವು. ಶ್ರೀಭಾರತಿ ಪ್ರಕಾಶನಲ್ಲಿ ಅದ್ರ ಪ್ರಕಟಣೆ ಆಯ್ತು. ಗುರುಗಳ ಅಮೃತ ಹಸ್ತಂದ ಲೋಕಾರ್ಪಣೆಯೂ ಆಯ್ತು. ಗುರುಕೃಪೆ, ರಾಮಾನುಗ್ರಹಂದಾಗಿ ಆದ ಅಕ್ಷರ ಸೇವೆ ಅದು ಹೇಳುದು ನನ್ನ ಭಾವನೆ. ನಾನು ನಿಮಿತ್ತ ಮಾತ್ರ ಆಗಿತ್ತಿದ್ದೆ.ಮತ್ತೆ ಲೌಕಿಕ ಜೀವನದ ದಾರಿ ಬೇರೆಯೇ ಇತ್ತು. ಜೀವನದ ವಿವಿಧ ಮಜಲುಗಳಲ್ಲಿ ಕಲ್ತ ಪಾಠ ಮತ್ತೆ ಒಂದಷ್ಟು ‘ಪುಡಿ’ ಸಾಹಿತ್ಯ ಸೃಷ್ಟಿ ಮಾಡ್ಸಿತ್ತು ನನ್ನ ಕೈ ಹಿಡುದು !!! ಆದ್ರೆ ಕಾಲನ ಪೆಟ್ಟು ಸ್ವಲ್ಪ ಜಾಸ್ತಿಯೇ ಜೋರಾಗಿ ಬಿತ್ತು ನನ್ನ ಸಾಹಿತ್ಯಾಸಕ್ತಿ ಮೇಲೆ :( ಬರ್ತಾ ಬರ್ತಾ ನಾನು ಬರಿಯುದು ಕಮ್ಮಿ ಆಯ್ತು :( ಕಾರಣ ಹಲವು ಇದೀತು ಆದ್ರೆ ಫಲಿತಾಂಶ ಮಾತ್ರ ಕೆಳಮುಖ ಆಗಿ ಹೋಯ್ತು. ಮತ್ತೆ ಒಂದೆರಡು ಸರ್ತಿ ಬರಿಯುಕೆ ಪ್ರಯತ್ನ ಮಾಡಿದೆ ಆದ್ರೆ ನನ್ನ ಕೈಲಿ ಬರಿಯುಕೆ ಆದ್ದು ಬೇರೆಯೇ ಸಾಹಿತ್ಯ ಪ್ರಕಾರ !!! “ಪಯಣ” ಹೇಳುವ ಶೀರ್ಷಿಕೆ ಕೊಟ್ಟು ನನ್ನ ಬದುಕಿಲಿ ಕಂಡು, ಕೇಳಿದ್ದು, ಅನುಭವಿಸಿದ್ರ ಅಕ್ಷರಕ್ಕೆ ಇಳುಸಿದೆ…. ಎಷ್ಟೋ ಸರ್ತಿ ನನಿಗೆ ಕಾಣ್ತೆ, ಅದು ಒಂದು ಆತ್ಮ ವಿಮರ್ಶೆ(ಸ್ವಪ್ರಶಂಶೆ) ಆಗಿ ಹೋಗಿಯೇದೆ ಹೇಳಿ. “ಪಯಣ 1, 2, 3, 4″ ಭಾಗ ಬರ್ದೆ. ಒಪ್ಪಣ್ಣ.ಕಾಂ ಲಿ ಪ್ರಕಟ ಆಯ್ತು, ನನ್ನ ಬ್ಲಾಗ್ ಲಿಯೂ ಹಾಕಿಕೊಂಡೆ… ಒಂದಷ್ಟು ಜನ ಓದಿ ಬೆನ್ನು ತಟ್ಟಿದ್ವು. ಆದ್ರೆ ಬರವಣಿಗೆಯ ಓಘ ಮಾತ್ರ ಉಳುಸಿಕೊಳ್ಳುಕೆ ಆಗಲ್ಲ :( ಒಪ್ಪಣ್ಣ.ಕಾಮ್ ಲಿ ಪ್ರಕಟ ಆಗುವ ಒಳ್ಳೊಳ್ಳೆ ಪದ್ಯಂಗಳ ಓದಿ, ಅದೇ ಸ್ಪೂರ್ತಿಂದ ನಾಕು ಸಾಲು ಬರಿಯುಕೂ ಆಗಲ್ಲ ನನ್ನ ಕೈಲಿ :( ಹಠ ಹಿಡುದು ಕೂತ್ರೆ ಸ್ವಲ್ಪ ಬರಿಯುಕೆ ಆದೀತು, ಆದ್ರೆ ಬಲವಂತದ ಮಾಘಸ್ನಾನ ಒಳ್ಳೆ ಸಾಹಿತ್ಯ ಸೃಷ್ಟಿ ಮಾಡುಕೆ ಹೆಂಗೆ ಸಾಧ್ಯ ? ಯಾಕೋ ನಾನು ಸ್ವಲ್ಪ ಹಿಂದೆ ಜಾರಿದೆ ಹೇಳಿ ಕಾಣ್ತಾ  ಅದೆ :(
*************
ಸಾಹಿತ್ಯ ಸೃಷ್ಟಿಗೆ ಮೊತ್ತ ಮೊದಲು ಬೇಕಾದ್ದು ‘ಓದು’. ಎಷ್ಟು ಹೆಚ್ಚು ಓದುತ್ತೆವೋ ಅಷ್ಟು ಹೆಚ್ಚು ಬರಿಯುಕೆ ಸಾಧ್ಯ ಆಗ್ತೆ ಹೇಳುದು ನನ್ನ ಭಾವನೆ. ಆದ್ರೆ ನಾನು ಹೊಸ ಪುಸ್ತಕ ತೆಕ್ಕೊಳ್ಳದ್ದೆ ಎಷ್ಟೋ ಸಮಯ ಆಯ್ತು :( ದಿನ ನಿತ್ಯ ಪೇಪರ್ ಓದುದ್ರ ಬಿಟ್ಟು ಬೇರೆ ಯಾವುದೇ ರೀತಿಲಿ ‘ಅಕ್ಷರಭಕ್ಷಣೆ’ ಮಾಡ್ತಾ ಇಲ್ಲ ನನ್ನ ಮೆದುಳು :( ಪೇಪರ್ಲಿ ಎಂತ ಇರ್ತೆ ಮಣ್ಣಾಂಗಟ್ಟಿ ರಾಜಕೀಯ ಬಿಟ್ರೆ ? ಸಾಪ್ತಾಹಿಕ ಪುರವಣೆ ಲಿ ಬರುವ ಒಳ್ಳೊಳ್ಳೆ ಲೇಖನ, ಕತೆಗಳ ಓದುಕೆ “ವೀಕೆಂಡ್” ಬಿಡುವೇಕಲ್ಲಾ ? ಅದೂ ಸಾಧ್ಯ ಇಲ್ಲ :(
ಆಫೀಸಿಲಿ ಪುರ್ಸೊತ್ತಾಗುವಾಗ ಓದುವ ಹೇಳಿ ಕಾಣ್ತೆ  ಆದ್ರೆ ಅವಕಾಶ ಇರುದಿಲ್ಲ :( ಮೊನ್ನೆ ಯಾಕೋ ಇದ್ದಕ್ಕಿದ್ದ ಹಾಂಗೆ “e Book ಡೌನ್ಲೋಡ್ ಮಾಡಿ ಓದಿರೆ ಹೇಂಗೆ ???” ಹೇಳಿ ಕಂಡತ್ತು :) ಗೂಗಲ್ ಲಿ ಹುಡುಕಿಯಾಗುವಾಗ ಎಲ್ಲಿಯೋ ಮೂಲೆಲಿ ಸ್ವಲ್ಪ ಕನ್ನಡ ಪುಸ್ತಕಂಗಳು ಸಿಕ್ಕಿತ್ತು. ಖುಷಿಲಿ ಸೇವ್ ಮಾಡಿ ಇಟ್ಟುಕೊಂಡೆ. ಸುಮಾರು 40  ‘ಈಪುಸ್ತಕ’ ಬಂದು ಬಿತ್ತು ಕಂಪ್ಯೂಟರಿಗೆ. ಸ್ಕ್ರೀನ್ ಲಿ ಓದುದು ಅಷ್ಟು ತೃಪ್ತಿ ಕೊಡುದಿಲ್ಲ, ಪುಸ್ತಕ ಕೈಲಿ ಹಿಡ್ಕೊಂಡು ಪುಟ ತಿರುಗಿಸಿಕೊಂಡು ಓದುವಾಗ ಸಿಕ್ಕುವ ಖುಷಿ ಇರುದಿಲ್ಲ, ಆದ್ರೆ ಏನೋ ಒಂದು ಇಷ್ಟು ಅಕ್ಷರ ಕಣ್ಣಿನೊಳಗೆ ತುಂಬ್ಸಿಕೊಳ್ಳುವೋದು ಹೇಳುದೇ ಸಮಾಧಾನ :) ಶ್ರದ್ಧೆಂದ ಪುಸ್ತಕ ಸ್ಕ್ಯಾನ್ ಮಾಡಿ ಹಾಕಿದ ಆ ಪುಣ್ಯಾತ್ಮನಿಗೆ ಎಷ್ಟು ಥ್ಯಾಂಕ್ಸ್ ಹೇಳಿರೂ ಸಾಲ್ದು.
***************
ಶಿವರಾಮ ಕಾರಂತಜ್ಜನ “ಕುಡಿಯರ ಕೂಸು” ಹೇಳುವ ‘ಈಪುಸ್ತಕ’ ಕಂಪ್ಯೂಟರ್ಲಿ ಬಿಡುಸಿ ಕೂತೆ. ಮೊದಲು ನಾನು ಪಿಯುಸಿ ಲಿ ಇರುವಾಗ ಕಾರಂತಜ್ಜನ “ಬೆಟ್ಟದ ಜೀವ” ಕಾದಂಬರಿಯ ವಿಮರ್ಶಾ ಸ್ಪರ್ಧೆ ಇತ್ತು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲೆಕ್ಕಲ್ಲಿ. ನಾನೂ ಸೇರಿತ್ತಿದ್ದೆ, ಜಿಲ್ಲಾ ಮಟ್ಟಲ್ಲಿ ಫಸ್ಟ್ ಬಂದಿತ್ತು :) ಅವಾಗ ನಾನು ಬರದ ವಿಮರ್ಶೆಯ ಹಾಂಗೆ ಈಗ ಬರ್ದೇನು ಹೇಳುವ ಧೈರ್ಯ ಇಲ್ಲ :( ಆದ್ರೂ ಓದಿದ ಮೇಲೆ ನಾಕು ಸಾಲು ಬರಿಯುವ ಹೇಳಿ ಕಂಡತ್ತು.
ಕಾರಂತಜ್ಜನ ಬರವಣಿಗೆಯ ಶೈಲಿ ತುಂಬಾ ವಿಭಿನ್ನ. ಎಷ್ಟೊಂದು ಸರ್ತಿ ಅವು ಉಪಯೊಗಿಸುವ ಶಬ್ದಂಗಳು ತಲೆ ಮೇಲೆ ಹಾರಿ ಹೋಗ್ತೆ :) ಮೂಕಜ್ಜಿಯ ಕನಸು ಪುಸ್ತಕ ಓಡುಕೆ ಕೂತಾಗುವಾಗ ಹಾಂಗೆ ಆಗಿತ್ತು. ಹತ್ತು ಹದಿನೈದು ಪುಟ ಓದಿ ಆಗುವಾಗ ಹಿಂದೆ ಮೊದಲು ಎಂತ ಓದಿತ್ತಿದ್ದೆ ಹೇಳುದೆ ಮರ್ತು ಹೋಗಿತ್ತು :( (ಇದು ನನ್ನ ವೈಯುಕ್ತಿಕ ಅಭಿಪ್ರಾಯ)
ಈ ಪುಸ್ತಕವೂ ಹಾಂಗೆಯೋ ? ಹೇಳುವ ಆತಂಕ ಇತ್ತು ಆದ್ರೆ ಅಷ್ಟು ಹೈ ಲೆವೆಲ್ ಇರಲ್ಲ ನನ್ನ ಪುಣ್ಯಕ್ಕೆ :)
ಕಾರಂತಜ್ಜನ ಕಾದಂಬರಿಗಳು ಆತ್ಮೀಯ ಅನ್ಸುಕೆ ಕಾರಣ ಹಲವು. ಕಂಡು, ಅನುಭವಿಸಿದ ಜೀವನ ಸಾರವ ಮಾತ್ರ ಅಕ್ಷರರೂಪಕ್ಕೆ ಇಳುಸುದು ಕಾರಂತಜ್ಜನ ಸ್ಪೆಷಾಲಿಟಿ. ಅದ್ರಲ್ಲಿ ಸ್ವಲ್ಪ ಕಾಲ್ಪನಿಕ ಇದ್ರೂ ಬಹುತೇಕ ಸತ್ಯವೇ. ಇನ್ನೊಂದು, ಕಾರಂತಜ್ಜನ ‘ಕಾಲ’. ಸ್ವಾತಂತ್ರಪೂರ್ವ+ಸ್ವಾತಂತ್ರ್ಯಾನಂತರದ ಭಾರತ ಅವರ ಬರಹದ ಅಂಗಳ. ಗ್ರಾಮೀಣ ಭಾಗದ ಜನ, ಜೀವನ ಅವರ ಕಾದಂಬರಿಗಳ ದೇಹ, ಆತ್ಮ ಆದ ಕಾರಣ ಅದು ಅತ್ಯಂತ ಹೃದ್ಯ ಆಗ್ತೆ…. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಆಚರಣೆಗಳ ಬಗ್ಗೆ ಕೊಡುವ ಸವಿಸ್ತಾರ ವಿವರಣೆ, ವಿಶ್ಲೇಷಣೆ ಮಾಡುವ ರೀತಿಗೆ ಕಾರಂತಜ್ಜನಿಗೆ ಕಾರಂತಜ್ಜನೇ ಸಾಟಿ…. ಕಾಲ್ನಡಿಗೆಲಿ ದಕ್ಷಿಣಕನ್ನಡ, ಮಲೆನಾಡುಸೀಮೆಯ ಮೂಲೆ ಮೂಲೆ ಸುತ್ತಿ ಕಂಡ ಜೀವನಾಮೃತ ಸಾರವ ಅಕ್ಷರಕ್ಕೆ ಇಳುಸಿದ ಸಾಧಕ ಕಾರಂತಜ್ಜ. “ಬೆಟ್ಟದ ಜೀವ” ಕಾದಂಬರಿ ಒಳ್ಳೆ ಉದಾಹರಣೆ. “ಕುಡಿಯರ ಕೂಸು” ಇನ್ನೊಂದು ಪುಸ್ತಕ.
ದಕ್ಷಿಣ ಕನ್ನಡ ಜಿಲ್ಲೆಯ ದಾಟಿ ಮುಂಬೈ, ಡೆಲ್ಲಿ ಇತ್ಯಾದಿ ಉತ್ತರ ಭಾರತದ ಚಿತ್ರಣ, ಸಮುದ್ರ ದಾಟಿ ಪೂರ್ವ, ಪಶ್ಚಿಮ ಪ್ರಪಂಚದ ವಿಶಾಲ ನೋಟ, ವಿಜ್ಞಾನ, ಯಕ್ಷಗಾನ, ಶೈಕ್ಷಣಿಕ ವಿಭಾಗ, ಹೀಂಗೆ ಕಾರಂತಜ್ಜ ಕೈ ಆಡ್ಸದ್ದ ಜಾಗೆ ಇಲ್ಲ…
*****************
“ಕುಡಿಯರ ಕೂಸು” ಕಾದಂಬರಿಯ ಮುಖ್ಯ ಪಾತ್ರವರ್ಗ ಮಲೆ ಕುಡಿಯರು. ದಕ್ಷಿಣ ಕನ್ನಡ ಜಿಲ್ಲೆಯ ದಟ್ಟ ಕಾಡಿನ ಒಳಗೆ, ಆಧುನಿಕತೆಯ ಸೋಂಕು ಇಲ್ಲದ್ದೆ ಬದುಕಿಕೊಂಡು ಇದ್ದ ಮುಗ್ಧ ಜನಂಗಳ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಕಾರಂತಜ್ಜನ ಕಣ್ಣಿಗೆ/ಪೆನ್ನಿಗೆ ಸಿಕ್ಕಿಹಾಕಿಕೊಂಡ ಕುಡಿಯರು ಇರುವ ಜಾಗೆಯ ವ್ಯಾಪ್ತಿ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದ ಮಧ್ಯೆ ಇರುವ ಯಾವುದೋ ಒಂದು ಕಾಡಿನ ಮೂಲೆ. ನೆರಿಯ, ಕಾರ್ಕಳ, ಸಕಲೇಶಪುರವೂ ಮಧ್ಯೆ ಮಧ್ಯೆ ಬಂದು ಹೋಗ್ತೆ. ಕಾದಂಬರಿಯ ಕಾಲ, ದೇಶಕ್ಕೆ ಸ್ವಾತಂತ್ರ್ಯ ಬರುಕೂ ಮೊದಲಾಣದ್ದು.
ಕಿರಿಮಲೆ, ಹಿರಿಮಲೆಗಳ ಸುತ್ತ ಮುತ್ತ ಇರುವ ಕುಡಿಯರ ಬದುಕ್ಕು ಹೆಂಗೆ ಇತ್ತು ಹೇಳುವ ಕತೆ ಓದುತ್ತಾ ಹೋದ್ರೆ ನಮ್ಮ ಮನಸ್ಸು ಆ ಜಾಗೆಗೆ ಹೋಗ್ತೆ. ಮಲೆಯ ಒಂದು ಮೂಲೆಲಿ ನಿತ್ತುಕೊಂಡು ನಾವು ಕುಡಿಯರ ಬಾಳ್ವೆಯ ಒಳಗೆ ಹೊರಗೆ ನೋಡಿದ ಹಾಂಗೆ ಆಗ್ತೆ.
ಹತ್ತು ಮೂವತ್ತು ಸಂಸಾರ ಇರುವ ಕುಡಿಯರ ಕೂಟಕ್ಕೆ ಕೆಂಚ ಹೇಳುವ ಒಂದು ಅಜ್ಜ ಗುರಿಕ್ಕಾರ. ಆ ಮಲೆಗೆ ಹತ್ರವೆ ಇರುವ ಇನ್ನೊಂದು ಮಳೆ ಹಿರಿಮಲೆ. ಅಲ್ಲಿ ಇನ್ನೊಂದಷ್ಟು ಕುಡಿಯರ ಸಂಸಾರ ಅದೆ. ಎರಡೂ ಮಲೆಯ ಕುಡಿಯರು ನಂಬಿಕೊಂಡು ಬಂದ ದೈವ ‘ಕಲ್ಕುಡ’. ಕುಡಿಯರ ಬದುಕ್ಕಿನ ಕಾಯುದು ‘ಕಲ್ಕುಡ’ ಹೇಳುವ ದೃಢ ನಂಬಿಕೆ ಅವರದ್ದು. ಕುಡಿಯರ ಬೇನೆ ಬೆಚ್ಚರಕ್ಕೆ, ರೋಗ ರುಜಿನಕ್ಕೆ ಮದ್ದು ಕಲ್ಕುಡನಿಗೆ ಹರಕ್ಕೆ.
ಕುಡಿಯರು ಜೀವನೋಪಾಯಕ್ಕೆ ಬೇಕಾಗಿ ಆರಿಸಿಕೊಂಡದ್ದು ಕೃಷಿ. ಕಾಡು ಕಡುದು, ಸುಟ್ಟು, ನೆಲ ಗರ್ಪಿ, ತಟ್ಟು ಮಾಡಿ, ಭತ್ತವೋ ರಾಗಿಯೋ ಬಿತ್ತಿ ಬೆಲೆ ತೆಗಿಯುದು ಅವರ ಕ್ರಮ. ಮಳೆಗಾಲಲ್ಲಿ ಒಂದೇ ಸಮ ಬೀಳುವ ಮಳೆ, ಮೈ ಕೊರಿವ ಚಳಿ, ಮಳೆಗಾಲ ಕಳುದ ಮೇಲೆ ಇವರ ಕೃಷಿ ಶುರು. ವರ್ಷಕ್ಕೆ ಒಂದೇ ಬೆಳೆ. ಬಾಕಿ ಒಳುದ ಸಮಯಲ್ಲಿ ಬೇಟೆ. ಉರುಳು ಇಡುದು, ಕರ್ಪು ತೆಗಿಯುದು ಅವರ ರಕ್ತಲ್ಲೇ ಬಂದ ಕಲೆ. ಮನಸ್ಸು ಮಾಡಿರೆ ಆನೆಯನ್ನೂ ಕರ್ಪಿಲಿ ಹಿಡುದಾವು ಕುಡಿಯಂಗಳು.
ವಸ್ತ್ರ, ಉಪ್ಪು, ಹೊಗೆಸೊಪ್ಪು ಇತ್ಯಾದಿ ಅವಶ್ಯಕತೆಗಳಿಗೆ ಮಾತ್ರ ಹೊರ ಜಗತ್ತಿನ ಸಂಪರ್ಕ. ಮಲೆ ತುಂಬಾ ಬೆಳುದು ಒಳ್ಳೆ ಫಸಲು ಕೊಡುವ ಏಲಕ್ಕಿ ಬುಡ ಅದೆ. ಲಾಭ ತಂದುಕೊಡುವ ಏಲಕ್ಕಿ ಮೇಲೆ ‘ನಾಗರಿಕ’ರ ಕಣ್ಣು ಬೀಳುದು ಸಹಜವೇ ಆಲ್ವಾ ? ಹಾಂಗಾಗಿ ಅಲ್ಲಿ ಒಬ್ಬ ಜೈನ ಯಜಮಾನನೂ ಇದ್ದಾನೆ. ಕುಡಿಯರು ಆ ಧಣಿಗಳ ಒಕ್ಕಲು. ಕುಡಿಯರ ಹತ್ರ ಕೆಲಸ ಮಾಡ್ಸುದು, ಮಲೆಯ ಏಲಕ್ಕಿ ಕೊಯ್ಕೊಂಡು ಹೋಗಿ ಮಾರುದು, ವರ್ಷಕ್ಕೆ ಒಂದು ಸರ್ತಿ ಆಗುವ ಜಾತ್ರೆ ಸಮಯಲ್ಲಿ ಕುಡಿಯರಿಗೆ ಒಂದು ಜೊತೆ ವಸ್ತ್ರ, ಉಪ್ಪು, ಹೊಗೆಸೊಪ್ಪು ಕೊಡುದು ಬಿಟ್ರೆ ಬೇರೆ ಯಾವುದೇ ರೀತಿಲಿ ತಲೆ ಕೆಡಿಸಿಕೊಳ್ಳುವ ಜನ ಅಲ್ಲ ಆ ಜೈನ ಧಣಿ.
ಕಾಲ ಚಕ್ರ ತಿರುಗಿ, ಜೈನರ ಕೈಲಿ ಇದ್ದ ಮಲೆಯ ಒಡೆತನ ಒಬ್ಬ ಬ್ರಾಹ್ಮಣನ ಕೈಗೆ ಸೇರ್ತೆ. ಮಲೆಲಿ ತುಂಬಾ ಬದಲಾವಣೆಯೂ ಆಗ್ತೆ. ಹೊಸ ಬ್ರಾಹ್ಮಣ ಧಣಿ ಮಲೆಲಿಯೇ ಒಂದು ಗುಡಿಸಲು ಕಟ್ಟಿಕೊಂಡು ವರ್ಷದ ಕೆಲವು ತಿಂಗಳು ಉಳಿಯುದು, ಕುಡಿಯರ ಒಟ್ಟಿಗೆ ಬದ್ಕುದು, ಹೀಂಗೆ ದಿನ ಸಾಗ್ತೆ. ಆದ್ರೆ ಹೊಸ ಧಣಿಗೆ ಬರೇ ಏಲಕ್ಕಿ ಮೇಲೆ ಮಾತ್ರ ಅಲ್ಲ ಕಣ್ಣು. ಕುಡಿಯರ ಹೆಣ್ಣುಗಳ ಮೇಲೂ.
ಇತ್ತ ಕುಡಿಯರ ನಿತ್ಯ ಜೀವನಲ್ಲಿ ಎಷ್ಟೋ ಸಂಗತಿ ಆಗಿ ಹೋಗ್ತೆ. ಗುರಿಕ್ಕಾರ ಕೆಂಚನಿಗೆ ಪ್ರಾಯ ಆಗ್ತಾ ಬರ್ತೆ, ಕೆಂಚನ ಮಗ, ಸೊಸೆ ಸತ್ತು ಪುಳ್ಳಿ ಮಾತ್ರ ಒಳಿತ್ತೆ. ಕಲ್ಕುಡ ಮಗ ಸೊಸೆಯ ಬಲಿ ತೆಕ್ಕೊಂಡದೆ ಹೇಳುದು ಅಜ್ಜ ಕೆಂಚನ ಅಭಿಪ್ರಾಯ, ನಂಬಿಕೆ. ಕೆಂಚ ಹೆದರಿ ಸುಬ್ರಹ್ಮಣ್ಯಕ್ಕೆ ಹೋಗಿ ಸುಬ್ಬಪ್ಪನ ಕಾಲಿಗೆ ಅಡ್ಡ ಬೀಳ್ತೆ . ಕುಡಿಯರ ಆದಿ ದೈವವಾದ ಮಲೆರಾಯನಿಗೂ ಹರಕ್ಕೆ ಹೊರ್ತೆ. ಪುಳ್ಳಿಯ ಉಳುಸಿಕೊಳ್ಳುಕೆ. ಆದ್ರೆ ಕಾಲ ಕಾಲಕ್ಕೆ ಸಲ್ಲುವೇಕಾದ ನೇಮ, ಕೋಲ ಕೊಡದ್ರೆ ಕಲ್ಕುಡ ಸುಮ್ಮನೆ ಕೂರುಕಿಲ್ಲ ಹೇಳುದು ಕುಡಿಯರ ಮಾತು. ಹಿರಿಮಲೆ ಕಿರಿಮಲೆಯ ಕುಡಿಯರು ಒಟ್ಟಿಗೆ ಸೇರದ್ರೆ ಕೋಲ ಆಗುದಿಲ್ಲ. ಹಿರಿಮಲೆಲಿ ಧಣಿಗಳು ಬದಲಾಗಿ ಪುರ್ಬುಗಳ ಕಾರುಬಾರು ಶುರು ಆಗಿಯೆದೆ. ಪುರ್ಬುಗಳು ಕಲ್ಕುಡನ ನಂಬುದಿಲ್ಲ. ಆದ್ರೆ ಹಿರಿಮಲೆಯ ಕುಡಿಯರ ಮನ ಒಲಿಸಿ ಎಲ್ಲವೂ ಸೇರಿ ಒಂದು ಕೋಲ ಕೊಡ್ತಾವೆ.
ಕೆಂಚನಿಗೆ ಅದ್ರ ಪುಳ್ಳಿಯೇ ಮುಂದಾಣ ಗುರಿಕ್ಕಾರ ಆಗ್ವೆಕು ಹೇಳಿ ಆಸೆ. ಆದ್ರೆ ಕುಡಿಯರಲ್ಲಿ ಬೇರೆ ಕೆಲವು ಜನಕ್ಕೂ ಗುರಿಕ್ಕಾರ ಆಗ್ವೇಕು ಹೇಳಿ ಮನಸ್ಸಿನ ಮೂಲೆಲಿ ಆಸೆ ಇರ್ತೆ. ಕೆಂಚನ ಪುಳ್ಳಿ ಕರಿಯ ಸಣ್ಣ ಆದ ಕಾರಣ, ತುಕ್ರ, ತಿಮ್ಮ, ಇಬ್ಬರಿಗೂ ಗುರಿಕ್ಕಾರ ಆದ್ರೆ ಆದೀತು ಹೇಳುವ ಆಸೆ. ಕಲ್ಕುಡನ ಕೋಲಲ್ಲಿ ಕಲ್ಕುಡ ಮೈಮೇಲೆ ಬಂದಾಗುವಾಗ ಕೇಳಿಯೂ ಆಯ್ತು, ಕರಿಯನೇ ಮುಂದಾಣ  ಗುರಿಕ್ಕಾರ ಆಗ್ವೆಕು ಹೇಳಿ ಕಲ್ಕುಡನ ಬಾಯಿಲಿ ಬಂದೂ ಆಯ್ತು. ಆದ್ರೆ ಕತೆ ಇಲ್ಲಿಂದ ಮತ್ತೆ ಪೂರ್ತಿ ‘ಚೇಂಜ್’ ಆಗ್ತೆ. ಗುರಿಕ್ಕಾರಿಕೆಗೆ ಬೇಕಾಗಿ ಕುಡಿಯರ ಗುಂಪಿಲಿ ಎಂತ ಎಲ್ಲಾ ಆಗಿ ಹೋಗ್ತೆ, ಕೆಂಚ ಸತ್ತ ಮೇಲೆ ಯಾರು ಗುರಿಕ್ಕಾರ ಆಗ್ತಾವೆ ? ತುಂಬಾ ಕುತೂಹಲಕಾರಿ ಆಗಿ ಮುಂದುವರಿತ್ತೆ ಕತೆ.
ಕುಡಿಯರ ಹೊಸ ಧಣಿ ತಿರುಮಲೇಶ್ವರ ಭಟ್ರ ಚಿತ್ರಣ, ಆಗಾನ ಕಾಲಲ್ಲಿ ಇದ್ದ “ಧಣಿ-ಒಕ್ಕಲು” ಸಂಬಂಧಗಳ ವಿವರಣೆ ಓದಿರೆ ನನ್ನ ಅಜ್ಜ, ಅಪ್ಪ ಹೇಳಿಕೊಂಡಿದ್ದ ಹಳೆ ಕತೆಗಳೆಲ್ಲ ನೆನಪ್ಪಾಗ್ತೆ. ಈಗಲೂ ಕೆಲವು ಕಡೆ ಬ್ರಾಹ್ಮಣರು ಆಳುಗಳ(ಶೂದ್ರ) ಹೆಣ್ಣುಗಳ ಇಟ್ಟುಕೊಂಡ ಸುದ್ದಿ ಅಲ್ಲಿ ಇಲ್ಲಿ ಕೇಳ್ತಾ ಇರ್ತೆ. ಹೊಟ್ಟೆ ಪಾಡಿಗೋ ಅಥವಾ ಧಣಿಗಳ ಹೆದರಿಕೆಗೊ ಅಥವಾ ನಾಕು ಕಾಸು ಸಿಕ್ಕುತ್ತೆ ಹೇಳಿಯೋ ಹೆಣ್ಣುಗಳು ಧಣಿಗಳ ಹಾಸಿಗೆ ಸೇರುದರ ಓದಿ ಆಗುವಾಗ ವ್ಯವಸ್ತೆಯ ಮೇಲೆ ಆಕ್ರೋಶ ಬರ್ತೆ.
ಕೆಂಚನ ಪುಳ್ಳಿ ಕರಿಯನಿಗೆ ಬೇಟೆ ಹುಚ್ಚು. ಆದ್ರೆ ಕೊಂದು ತಿನ್ನುದಕ್ಕಿಂತಲೂ ಹಿಡುದು ಸಾಂಕುವ ಆಸೆ. ಆನೆ ಹಿಡುದು ಸಾಂಕಿ ಮಾವುತ ಆಗ್ವೆಕು ಹೇಳುವ ಕನಸು. ಕರಿಯನ ಬಾಲ್ಯ, ಯವ್ವನ ಎಲ್ಲದರ ಚಿತ್ರಣ, ಬೇಟೆ ಹುಚ್ಚು, ಪ್ರಾಣಿ ಪ್ರೇಮ, ಕೃಷಿ ಸಾಹಸಗಳು, ಅನಿವಾರ್ಯ ಕಾರಣಂದಾಗಿ ಊರು ಬಿಟ್ಟು ಹೋಗ್ವೆಕಾದ ಪರಿಸ್ಥಿತಿ, ಎಲ್ಲವನ್ನೂ ಕಾರಂತಜ್ಜ ಅಕ್ಷರಲ್ಲಿ ಸೆರೆ ಹಿಡಿಯುವ ಕೆಲಸ ಮಾಡ್ತಾ ಮುಂದೆ ಹೋಗ್ತಾ ಇದ್ರೆ ನಾವೂ ಅವರ ಒಟ್ಟಿಗೇ ಕಿರಿಮಲೆ, ಹಿರಿಮಲೆಲಿ ಓಡಾಡಿದ ಅನುಭವ ಸಿಕ್ಕುತ್ತೆ.
ಕತೆಲಿ ಬರುವ ಇತರ ಪಾತ್ರಗಳಿಗೂ ಕಾರಂತಜ್ಜ ತುಂಬಾ ನ್ಯಾಯ ಕೊಟ್ಟಿದ್ದಾವೆ. ಎರಡು ತಲೆಮಾರಿಲಿ ಕುಡಿಯರ ಬದುಕಿಲಿ ಆಗಿಹೋಗುವ ಬದಲಾವಣೆ, ಆಸಕ್ತಿದಾಯಕ ಬೆಳವಣಿಗೆ ನಮ್ಮ ಮನಸ್ಸಿನ ಹಿಡಿದು ಇರ್ಸುತ್ತೆ. ಕತೆಲಿ ಬರುವ ನರಭಕ್ಷಕ ಹುಲಿಯ ಕತೆ, ಅದ್ರ ಬೇಟೆ ಆಡುವ ಸಂದರ್ಭ ಜಿಮ್ ಕಾರ್ಬೆಟ್, ಕೆನತ್ ಆಂಡೆರ್ಸನ್ ಇತ್ಯಾದಿ ಬ್ರಿಟಿಷರ ಬೇಟೆ ಕತೆಗಳ ನೆನಪ್ಪು ತರ್ತೆ.
ಪ್ರಕೃತಿಯ ವರ್ಣನೆಲಿ ಕಾರಂತಜ್ಜ ಯಾವತ್ತೂ ಹಿಂದೆ ಬಿದ್ದ ಜನ ಅಲ್ಲ. ಪಶ್ಚಿಮ ಘಟ್ಟಗಳ ಸಂಪೂರ್ಣ ಚಿತ್ರಣ ಕಾದಂಬರಿ ಉದ್ದಕ್ಕೂ ಅದೆ. ಎಷ್ಟೋ ಸರ್ತಿ ನಮ್ಮ ದಕ್ಷಿಣ ಕನ್ನಡಲ್ಲಿ ಅಷ್ಟು ದಟ್ಟ ಕಾಡು ಇತ್ತೋ ? ಹೇಳಿ ಆಶ್ಚರ್ಯ ಆಗ್ತೆ. ಛೆ, ಈಗ ಆ ಕಾಡು ಎಲ್ಲಾ ಇಲ್ವಲ್ಲಾ, ನಾವು ಕಳಕೊಂಡು ಬಿಟ್ವಲ್ಲಾ ಹೇಳಿ ಬೇಜಾರೂ ಆಗ್ತೆ. ಆ ಸೌಂದರ್ಯ ಕಂಡು ಖುಷಿಪಟ್ಟ ಕಾರಂತಜ್ಜ ಈಗ ಇಲ್ಲ. ಆದ್ರೆ ಅವರ ಬರಹಗಳ ನಾವು ಓದಿ ಖುಷಿಪಡುದು ಮಾತ್ರ ದಕ್ಕಿಯೇದೆ ನವುಗೆ.
**************************
ಇನ್ನೊಂದು ಪುಸ್ತಕ ಹಿಡ್ಕೊಂಡಿದ್ದೇನೆ ಕಾರಂತಜ್ಜನದ್ದು, “ಚಿಗುರಿದ ಕನಸು”. ಅದನ್ನೂ ಓದಿ ಮುಗಿಸಿದ ಮೇಲೆ ಇನ್ನೊಂದಿಷ್ಟು ಬರಿಯುಕೆ ಸಾಧ್ಯ ಆಗ್ತೋ ಏನೋ ?
ಒಂದೇ ಪೆಟ್ಟಿಗೆ ಪೂರ್ತಿ ಪುಸ್ತಕ ಓದಿ ಮುಗುಸುವ ಭಾಗ್ಯ ಇಲ್ಲ ಸಧ್ಯಕ್ಕೆ :( ಸಮಯ ಸಿಕ್ಕಿಯಾಗುವಾಗ ಸ್ವಲ್ಪ ಸ್ವಲ್ಪವೇ ಓದಿ ತೃಪ್ತಿಪಡ್ವೆಕಷ್ಟೇ :( ಮೂಡಿಗೆರೆಲಿ ಬಿಎಸ್ಸಿ ಮಾಡುವಾಗ ಲೈಬ್ರರಿಲಿ ಇದ್ದ ಒಳ್ಳೊಳ್ಳೆ ಕನ್ನಡ ಪುಸ್ತಕಗಳ ಓದಿದ್ದು ನೆನಪ್ಪಾಗ್ತೆ. ಅವಾಗ ದಿನಕ್ಕೆ ಆರು ಏಳು ಘಂಟೆ ಕಾದಂಬರಿ ಓದಿಕೊಂಡು ಇರ್ತಿದ್ದೆ (ಪರೀಕ್ಷೆ ಇಲ್ಲದ್ರೆ ಪಾಠ ಪುಸ್ತಕ ಓದುವ ದುರಭ್ಯಾಸ ನನಿಗೆ ಇಲ್ಲ !!!) ಕ್ಲಾಸ್ ಲಿ ನೋಟ್ಸ್ ಮಧ್ಯೆ ಇಟ್ಟುಕೊಂಡೂ ಕಾದಂಬರಿ ಓದಿ ಮುಗ್ಸಿದ ದಿನ ಇತ್ತು ಅವಾಗ. ಈಗ ಹಾಂಗೆ ಓದುವೇಕು ಹೇಳಿ ಆಸೆ ಆಗ್ತೆ ಆದ್ರೆ ಎಂತ ಮಾಡುದು ? ಆಗುದಿಲ್ಲ. ಮುಂದೊಂದು ದಿನ ಬಂದೀತು, ನಾನು ದಿನಕ್ಕೆ ಎಂಟತ್ತು ಘಂಟೆ ಬರೀ ಕಾದಂಬರಿ, ಒಳ್ಳೊಳ್ಳೆ ಪುಸ್ತಕ ಓದಿಕೊಂಡು, ಆಸಕ್ತರ ಹತ್ರ ಆ ಪುಸ್ತಕಗಳ ಬಗ್ಗೆ ಚರ್ಚೆ ಮಾಡಿಕೊಂಡು ಇರುವ ದಿನ. ಕಾಯ್ತಾ ಇದ್ದೇನೆ……….

No comments: