Saturday, August 2, 2008

"ಮಳೆ ಹನಿ"

ಇಳೆಗೆ ತಂಪನು ಕೊಡುವ
ಮಳೆ ಹನಿಯು ಒಮ್ಮೊಮ್ಮೆ,
ಮನಕೆ ಕಿಚ್ಚನು ಹಚ್ಚಿ
ಮೋಜು ನೋಡುವುದು..
ಸುರಿವ ಮಳೆ ಹನಿ ನಡುವೆ
ಮುರಿದ ಮನವದು ಕುಳಿತು
ಹಳೆಯ ನೆನಪಿನ ಬುತ್ತಿ
ಉಣ್ಣುತಿಹುದು...

Saturday, July 19, 2008

ನಮಸ್ತೇ.. ತುಂಬಾ ದಿನಗಳ ನಂತರ ಬ್ಲಾಗ್ ಬರೆಯಲು ಕುಳಿತಿದ್ದೇನೆ.. ಸ್ನಾತಕೋತ್ತರ ತರಗತಿಗೆ ಸೇರುವ ತಲೆಬಿಸಿಯಲ್ಲಿ ಇದ್ದ ಕಾರಣ ಅಂತರ್ಜಾಲದ ಕಡೆಗೆ ಮುಖ ಮಾಡಿರಲಿಲ್ಲ !!!

ಮತ್ತೆ ಕೀಬೋರ್ಡ್ ಮುಂದೆ ಕುಳಿತಾಗ ಏನು ಬರೆಯಬೇಕು ಎಂದೇ ತಿಳಿಯುತ್ತಿಲ್ಲ !!!

ಈ ಮಧ್ಯೆ ಗೀಚಿದ ಕೆಲವೊಂದು ಕಿರು ಕವನಗಳು ಕಿಸೆಯಲ್ಲಿವೆ......

ಒಂದೊಂದಾಗಿ ಬರೆಯುತ್ತಾ ಹೋಗುತ್ತೇನೆ... ಆಯಿತಾ ???

ಟಾಟಾ...

Sunday, June 15, 2008

ನಮಸ್ತೇ..

ತುಂಬಾ ದಿನಗಳ ನಂತರ ಮತ್ತೆ ಬ್ಲಾಗ್ ಬರೆಯಲು ಕುಳಿತಿದ್ದೇನೆ....

ಮನವೇಕೋ ಭಣ ಭಣ.. ಅದ್ಯಾಕೋ ಗೊತ್ತಿಲ್ಲ, ಒಂಥರಾ ಬೇಜಾರು... ನನ್ನ ಮೇಲೆ ನನಗೇ ಕೋಪ... ನಿರುತ್ಸಾಹ....

ಒಮ್ಮೊಮ್ಮೆ ಎಲ್ಲಿಲ್ಲದ ಸಂತೋಷ, ಉತ್ಸಾಹ, ಖುಷಿ... ಸ್ವಲ್ಪ ಹೊತ್ತು ಕಳೆದರೆ ಪ್ರಪಂಚವೇ ಮುಳುಗಿ ಹೋದ ಭಾವ... ಎರಡು ಶೃಂಗಗಳ ಮಧ್ಯೆ ತುಯ್ದಾಡುತ್ತಿದ್ದೇನೆ... ಈ ದ್ವಂದ್ವಗಳ ಬಂಧನದಿಂದ ಮನಸ್ಸು ಯಾಕೋ ತೀರಾ ಘಾಸಿ ಆಗಿದೆ !

ಯಾವುದೇ ಸ್ಥಿತಿ ಶಾಶ್ವತ ಅಲ್ಲ ಅನ್ನೋದು ನನಗೇ ಚೆನ್ನಾಗಿ ಗೊತ್ತು... ಆದರೆ, ಈ ರೀತಿಯ "ಬೈ ಪೋಲಾರ್ ಮೂಡ್" ಖಾಯಿಲೆ ಒಳ್ಳೆಯದಲ್ಲ....

ಇದೆಲ್ಲದಕ್ಕೂ ಒಂದು ಒಳ್ಳೆಯ ಕೌನ್ಸೆಲ್ಲಿಂಗ್ ಮಾಡಿಸಿಕೊಂಡರೆ ಸರಿ ಆಗುತ್ತದೆ.. ಆದರೆ ನನಗೆ ಅದೆಲ್ಲಕ್ಕಿಂತಲೂ ಹೆಚ್ಚಾಗಿ ಬೇಕಾದದ್ದು ನನ್ನ ಅಮ್ಮನ "ಸನ್ನಿಧಿ".....

ನನ್ನ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿದರೆ ಎಲ್ಲವೂ ಸರಿ ಹೋಗುತ್ತದೆ...

ನನ್ನ ಅಮ್ಮ , ಅಪ್ಪ, ಅಜ್ಜ, ಅಜ್ಜಿ, ಮನೆಯವರನ್ನು ಒಮ್ಮೆ ನೋಡಿದರೆ, ಒಂದಷ್ಟು ದಿನ ಅಲ್ಲಿ ನಾನಿದ್ದು ಬಂದರೆ ನನ್ನ ಈ ಮನ ಸ್ಥಿತಿ ಬದಲಾಗುತ್ತದೆ...

ಹುಂ... ಯಾಕೋ ಕುಯ್ತಾ ಇದ್ದಾನೆ ಅಂತ ಅನ್ನಿಸ್ತಾ ? ಮನಸ್ಸಿನಲ್ಲಿ ಇರೋದನ್ನು ಯಾರ ಹತ್ತಿರವಾದರೂ ಹಂಚಿಕೊಳ್ಳುವ ಅಂತ ಅನ್ನಿಸಿತು... ಹಾಗಾಗಿ ಇದನ್ನೆಲ್ಲಾ ಬರೆದೆ...

ಮತ್ತೊಮ್ಮೆ ಬ್ಲಾಗ್ ನ ಅಂಗಳಕ್ಕೆ ಬಂದಾಗ ಇಂಥಾ ಭಾವಗಳ್ಯಾವುವೂ ನನ್ನ ಮನದಲ್ಲಿ ಇರಲಾರವು.. ಇನ್ಯಾವುದೋ ಹೊಸತೊಂದು ಖುಷಿ ಅಥವಾ ದುಃಖ ಅಲ್ಲಿ ಕುಳಿತು ಕಾಯುತ್ತಾ ಇರುತ್ತದೆ... ಮನದ ಭಾವಗಳನ್ನು ಇದ್ದದ್ದು ಇದ್ದ ಹಾಗೆ ನಿಮ್ಮ ಮುಂದೆ ಇರಿಸುವುದೊಂದೇ ನನ್ನ ಕೆಲಸ... "ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ"

Wednesday, June 11, 2008

"ವಿಪರ್ಯಾಸ"

ಕೆಲವೊಂದು ತಿರುವುಗಳು

ಬಹು ಕ್ರೂರವಿಹುದಮ್ಮ,

ಕೆಲವೊಮ್ಮೆ ತಂಗಾಳಿಯೂ

ಸುಡುವ ಬೆಂಕಿ...

ತಂಪ ನೀಡುವ ಬದಲು

ಕಿಚ್ಚು ಹಚ್ಚುವ ಬಂಧ,

ಸಂತೈಸುವುದ ಬಿಟ್ಟು

ಅಣಕಿಪುದು ಬದುಕು...

Saturday, June 7, 2008

"ಚಾರಣ"

ಎತ್ತಿನ ಭುಜಕ್ಕೆ ಚಾರಣ...
ನನ್ನೊಡನೆ ಸಂದೀಪ..
ಭುಜದ ಕೆಳಗೆ!
ಬುಲೆಟ್ (ತೋಟೆ....) ಬೇಕಾ ?
ಭುಜಕ್ಕೆ ಏರಲು ಹೋಗಿ ಬಾಲಕ್ಕೆ ಏರಿದ್ದು !

"ನನ್ನ ಕೇರಳ ಪ್ರವಾಸ"


ಕೊಚಿನ್ ನಲ್ಲಿ ಸಮುದ್ರ ಯಾನ..


ಟೀ ಎಸ್ಟೇಟ್... ರಾಜ ಮಲೈ..
ಕ್ಯಾರೆಟ್ ಬೇಕಾ ??
ಮುನ್ನಾರ್ ನಲ್ಲಿ ದೋಣಿ ಸವಾರಿ.....

ಮುನ್ನಾರ್ ನ ದೃಶ್ಯ..


"ಮುದ್ದು ನೀಲ್ ಘಾಯ್.."

"ರಾಜ ಮಲೈ" ಕೇರಳ, ತಮಿಳುನಾಡು ಗಡಿ ಭಾಗದ ರಕ್ಷಿತಾರಣ್ಯ..
"ನೀಲ ಘಾಯ್" ಎಂಬ ಮುದ್ದು ಜೀವಿಯ ವಾಸ ಸ್ಥಾನ...

Thursday, June 5, 2008

"ಇರುವುದೆಲ್ಲವ ಬಿಟ್ಟು ಇರದಿರದೆಡೆಗೆ ತುಡಿಯುವುದೇ ಜೀವನ" ಅನ್ನೋ ಕವಿ ವಾಣಿ ಎಷ್ಟು ಸತ್ಯ ಅಲ್ವಾ ?

"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ" ಎಂಬ ಜಿ. ಎಸ್. ಎಸ್. ರ ಮಾತು ಈ ಸಂಬಂಧಗಳಿಗೂ ಅನ್ವಯಿಸುತ್ತದೆ ಅಂತ ನಂಗೆ ಅನ್ನಿಸುತ್ತದೆ... ನಮ್ಮ ಹತ್ತಿರವೇ ಇರುವ ನಮಗೋಸ್ಕರ ಎಂಥಾ ತ್ಯಾಗಕ್ಕೂ ಸಿದ್ಧರಾಗಿರುವ ನಮ್ಮ ಸ್ನೇಹಿತರನ್ನು ಬಿಟ್ಟು ನಾವು ಇನ್ಯಾರನ್ನೋ ನಮ್ಮ "ಆತ್ಮೀಯರು" ಎಂದುಕೊಂಡು ಭ್ರಮಿಸುತ್ತೇವೆ ! ನಮ್ಮ ನಿಜದ ಗೆಳೆಯರ ಮನಕ್ಕೆ ನೋವು ಕೊಟ್ಟು ಇನ್ಯಾರನ್ನೋ ಮೆಚ್ಚಿಸ ಹೊರಡುತ್ತೇವೆ.. ವಿಪರ್ಯಾಸ ಅಂದರೆ, we never repent for that !

ಹಾಂ.. ಇವನ್ಯಾವನೋ ದೊಡ್ಡ ವೇದಾಂತಿಯ ಹಾಗೆ ಭಾಷಣ ಹೊಡೀತಾ ಇದ್ದಾನೆ ಅಂತ ಅನ್ಕೋ ಬೇಡಿ... ಇದು ನನ್ನ ಸ್ವಂತ ಅನುಭವ.. ಇಂಥಾ ಅನೇಕ ಘಟನೆಗಳು ನಮ್ಮ ನಿಮ್ಮೆಲ್ಲರ ಬದುಕಲ್ಲೂ ಆಗಿ ಹೋಗಿರುತ್ತದೆ.. ನೀವೂ ಇಂಥದ್ಯಾವುದಾದರೂ ಅನುಭವ ಹೊಂದಿದ್ದರೆ ಮಾತ್ರ ನನ್ನ ಮಾತು ಸತ್ಯ ಅಂತ ಅನ್ನಿಸಬಹುದು.. ಏನಂತೀರಾ ?

ನಮಸ್ತೇ..

ಈ ಸಂಬಂಧಗಳು ತುಂಬಾ ವಿಚಿತ್ರ.. ನಾವು ಯಾರನ್ನು ಬಯಸುತ್ತೇವೋ ಅವರು ನಮಗೆ ಸಿಗುವುದಿಲ್ಲ.. ಯಾರು ನಮ್ಮನ್ನು ಬಯಸುತ್ತಾರೋ ಅವರಿಗೂ ನಾವು ಸಿಗುವುದಿಲ್ಲ (ನಾವು ಅವರೆಡೆಗೆ ಹೋಗುವುದಿಲ್ಲ !!!) ಕೈಗೆ ಸಿಕ್ಕದ ಕನಸುಗಳತ್ತ ಕನವರಿಸುತ್ತೇವೆ ! ನಮ್ಮ ಹತ್ತಿರ ಇರುವವರಿಗೆ ನಿತ್ಯವೂ ನೋವು ಕೊಡುತ್ತೇವೆ.. ದೂರ ಇರುವವ್ರಿಗೊಸ್ಕರ ನಾವು ನೋವು ತಿನ್ನುತ್ತೇವೆ !!!

Wednesday, June 4, 2008

ನನ್ನ ಬ್ಲಾಗ್ ಗೆ ಒಂದು ಸುಂದರ ರೂಪ ಕೊಟ್ಟ ರಮೇಶಣ್ಣ ನಿಗೆ ಧನ್ಯವಾದಗಳು..

"ಆಶಯ"

ಹಸಿರಾಗಬೇಕು ಮನ
ಬಿಸಿಯಾರಬೇಕು...
ಕಟ್ಟಿಟ್ಟ ಭಾವಗಳ
ಕಟ್ಟು ಒಡೆಯಲುಬೇಕು,
ಎದೆಯಾಳದಲಿ ಕುಳಿತ
ಸಿಟ್ಟು ಕಳೆಯಲು ಬೇಕು,

ಹಸಿರಾಗಬೇಕು ಮನ
ಬಿಸಿಯಾರಬೇಕು...

ಹೃದಯಕ್ಕೆ ಮೆತ್ತಿರುವ
ಕೊಳೆಯ ತೊಳೆಯಲುಬೇಕು,
ಕಣ್ಣೀರ ಗಂಗೆಯಲಿ
ಪಾಪ ಕಳೆಯಲುಬೇಕು,
ಹಸಿರಾಗಬೇಕು ಮನ
ಬಿಸಿಯಾರಬೇಕು...

ನಮಸ್ತೇ..

ಎಷ್ಟೋ ಸಲ ನಾವು ನಮ್ಮಿಂದ ಚಿಕ್ಕವರಿಗೆ, ಕಿರಿಯರಿಗೆ, ಮಿತ್ರರಿಗೆ, ಉಪದೇಶ ಮಾಡುತ್ತಾ ಇರುತ್ತೇವೆ... "ಅದನ್ನು ಮಾಡು, ಇದನ್ನು ಮಾಡು, ಹಾಗೆ ಮಾಡಬೇಡ, ಹೀಗೆ ಮಾಡಬೇಡ.... "

ಆದರೆ ಅವರೆಲ್ಲರಿಗಿಂತ ಎಷ್ಟೋ ಹೆಚ್ಚಿನ ತಪ್ಪು ಕೆಲಸ ನಾವು ಮಾಡುತ್ತಿರುತ್ತೇವೆ....

ಉದಾಹರಣೆಗೆ ನನ್ನ ಕಿರಿಯ ಮಿತ್ರರಿಗೆ "ಧೂಮಪಾನ ಕೆಟ್ಟದ್ದು ಬಿಟ್ಟು ಬಿಡು" ಅಂತ ಪ್ರವಚನ ನೀಡುವ ನಾನು, ಎಷ್ಟೋ ಸಲ ಸಿಗರೇಟು ಹಚ್ಚಿ ಹೊಗೆ ಉಗುಳಿದ್ದೇನೆ !!!!

ಊರು ಉದ್ಧಾರ ಮಾಡುವ ಭರದಲ್ಲಿ ನಾವು ನಮ್ಮ ಮನೆ ಅಂಗಳದ ಕಸ ಗುಡಿಸುವುದನ್ನೇ ಮರೆತು ಬಿಡುತ್ತೇವೆ !! ಎಂಥಾ ವಿಪರ್ಯಾಸ ಅಲ್ವಾ ?

ಒಮ್ಮೆ ಒಬ್ಬನೇ ಕುಳಿತು ಆತ್ಮಾವಲೋಕನ ಮಾಡಿಕೊಂಡರೆ ಸಾಕು, ನಮ್ಮ ಬಂಡವಾಳ ನಮಗೇ ತಿಳಿದು ಹೋಗುತ್ತದೆ !!

ಹುಂ.... ಯಾವಾಗ ನಾನು ಈ ಕೆಟ್ಟ ಚಾಳಿಯನ್ನು ಬಿಡುತ್ತೇನೋ ?

ಪರಿವರ್ತನೆ ಜಗದ ನಿಯಮ ಅಲ್ವಾ ? ಪ್ರತಿ ದಿನವೂ ಪ್ರತಿ ಕ್ಷಣವೂ ನಾವು ಬದಲಾಗುತ್ತಾ ಇರುತ್ತೇವೆ, ಬದಲಾಗಬೇಕು ಕೂಡಾ.. ಆದರೆ ಆ ಬದಲಾವಣೆ ಒಳ್ಳೆಯದಕ್ಕಾಗಿರಲಿ.. ನಮ್ಮ ಹೊಸ ಮುಖವು ಹಳೆಯದಕ್ಕಿಂತ ಸುಂದರವಾಗಿರಲಿ, ಸ್ವಚ್ಚವಾಗಿರಲಿ, ಸಹ್ಯವಾಗಿರಲಿ...

ಹೊಸತನದ ತುಡಿತ ಹರುಷದಾಯಕವಾಗಿರಲಿ..

ನಮ್ಮಿಂದ ಆದಷ್ಟು ಮಟ್ಟಿಗೆ ನಾವು ಉತ್ತಮರಾಗೋಣ.. ಕೆಟ್ಟ ಭಾವನೆಗಳನ್ನು ದೂರವಿರಿಸೋಣ.....

ಏನಂತೀರಾ ?

Tuesday, June 3, 2008

ನಮಸ್ತೇ..

ನಮ್ಮ ಸುತ್ತಮುತ್ತಲೇ ನಡೆಯುವ ಕೆಲವೊಂದು ವಿಚಾರಗಳನ್ನ ನಾವು ಗಮನಿಸುವುದೇ ಇಲ್ಲ !! ದಿನ ನಿತ್ಯ ಆಗುವ ಈ ಘಟನೆಗಳಿಂದ ನಾವು ಪಾಠ ಕಲಿಯುವುದೂ ಇಲ್ಲ...

ನಾವು ಯಾವಾಗಲೂ ಹೋಗುವ ಹೋಟೆಲ್ ನ ಸಪ್ಲಯರ್ ನಮಗೆ ನಗು ನಗುತ್ತಾ ಬೇಕಾದ್ದನ್ನು ತಂದಿಡುತ್ತಾನೆ.. ನಿತ್ಯ ನಮ್ಮನ್ನು ಕರೆದೊಯ್ಯುವ ಆಟೋ ಡ್ರೈವರ್ ನಮ್ಮನ್ನು ಕಂಡ ಕೂಡಲೇ ನಿಲ್ಲಿಸಿ ಮುಗುಳ್ನಗುತ್ತಾನೆ.. ಸಂಜೆ "ವಾಕ್" ಹೋಗುವಾಗ ರಸ್ತೆ ಬದಿಯ ಪಾನಿ ಪೂರಿ ಅಂಗಡಿಯಾತ ನಾವು ಬಂದೊಡನೆ ಚಕ ಚಕನೆ ಈರುಳ್ಳಿ ಹೆಚ್ಚಿ ಮಸಾಲೆ ಪೂರಿ ಕೈಗೆ ಕೊಡುತ್ತಾನೆ... ಪರಿಚಯದ ಕಂಡಕ್ಟರ್ ಚಿಲ್ಲರೆ ಇಲ್ಲದಿದ್ದರೂ ಸಹಕರಿಸುತ್ತಾನೆ... ತರಕಾರಿ ಅಂಗಡಿಯ ಮುದುಕಿ ಒಂದೆರಡು ಟೊಮೇಟೊ ಜಾಸ್ತಿ ಕೊಡುತ್ತಾಳೆ... ಹೀಗೆ ನಮ್ಮ ಜೊತೆಜೊತೆಗೇ ಇರುವ ಹಲವಾರು ಮಂದಿ "ನಮ್ಮವರನ್ನು"ನಾವು ಗುರುತಿಸಿ ಗೌರವಿಸಲು ಮರೆಯುತ್ತೇವೆ.... ಅವರೊಡನೆ ಬೆರೆಯಲು ಹಿಂಜರಿಯುತ್ತೇವೆ !!! "ನಮ್ಮ ಸೇವೆ ಅವರ ಕರ್ತವ್ಯ, ಅವರು ಹೊಟ್ಟೆ ಪಾಡಿಗಾಗಿ ಆಯ್ದುಕೊಂಡ ವೃತ್ತಿ" ಎಂದು ಕೊಂಡು ಸುಮ್ಮನೆ ಮುಂದಕ್ಕೆ ಹೋಗುತ್ತೇವೆ... ಅವರೆಡೆಗೆ ಪುಟ್ಟದೊಂದು ಮುಗುಳ್ನಗು "ಎಸೆಯಲು" ನಮ್ಮ "ಪ್ರೆಸ್ಟೀಜ್" ಅಡ್ಡ ಬರುತ್ತದೆ !!!

ನಾವು ದೊಡ್ಡವರೆಂಬ ಭಾವ, ಒಣ ಜಂಭ ನಮ್ಮನ್ನು ಇತರರೊಂದಿಗೆ ಬೆರೆಯಲು ಬಿಡುವುದಿಲ್ಲ.... ಆ ದಪ್ಪ ಮುಖ ಹೊತ್ತು ಕೊಂಡು ನಾವು "ಧುಸು ಧುಸು" ಎನ್ನುತ್ತಾ ನಡೆದರೂ, "ನಮ್ಮ ತಲೆ ಬಿಸಿ ನಮಗೆ ಮಾರಾಯಾ" ಎಂದು ಅವಸರಿಸಿದರೂ ಸೇವಾ ಕ್ಷೇತ್ರದಲ್ಲಿರುವ ಮಿತ್ರರಾರೂ ನಮ್ಮತ್ತ ಕೋಪ ತೋರಿಸುವುದಿಲ್ಲ..

ಇನ್ನು ಮುಂದೆಯಾದರೂ ನಾವು ಹೊರಗೆ ವ್ಯವಹರಿಸುವಾಗ ನಮ್ಮ ಕಣ್ಣು ತೆರೆಯೋಣ... ನಮ್ಮ ಕಷ್ಟ ಏನೇ ಇದ್ದರೂ, ನಮಗಾಗಿ ಬೆವರು ಸುರಿಸುವ ನಮ್ಮವರನ್ನು ಪ್ರೀತಿಯಿಂದ ಮಾತನಾಡಿಸೋಣ... "ಎಲ್ಲರೊಳಗೊಂದಾಗೋಣ"

ಏನಂತೀರಾ ?

Monday, June 2, 2008

"ಬೆಂಗಳೂರಿನ ಬದುಕು"

ಬೆಂದ ಕಾಳೂರಿನಲಿ

ಬೆಂದು ಹೋಗಿದೆ ಜೀವ

ಭರದಿ ಓಡುತಲಿರುವ

ಕಾಲಕ್ಕೆ ಸಿಲುಕಿ...

ದಪ್ಪ ನೋಟಿನ ಕಂತೆ,

ಕೆಟ್ಟ ನೋಟದ ಸಂತೆ,

ಬಿಸಿ ಗಾಳಿ ಬೆವರುಗಳ

ಸಾಗರವ ಕಲುಕಿ...

ನಮಸ್ತೆ.... ಮನಕ್ಕೆ ಮುಸುಕಿದ ಮೋಡ ಮರೆಯಾಗಿದೆ... ಸ್ವಚ್ಚ ಬಾನಿನಲ್ಲಿ ಸುಂದರ ಸೂರ್ಯೋದಯವಾಗಿದೆ.. ಮನದ ಆಳದಲ್ಲಿ ತುಂಬಿಕೊಂಡಿದ್ದ ಕೊಳೆಯನ್ನು ಕಳೆಯುವ ಕಾರ್ಯ ಪ್ರಾರಂಭವಾಗಿದೆ... ಸತ್ಪಥದಲ್ಲಿ ಹೆಜ್ಜೆಯಿಡುವತ್ತ ಸಾಗಿದ್ದೇನೆ..

ತೃಪ್ತಿಯಿದೆ.. ಸಮಾಧಾನವಿದೆ...

ನಗುವಿದೆ... ಗೆಲುವಿದೆ...

Friday, May 30, 2008

ನಮಸ್ಕಾರ....

Wednesday, May 28, 2008

"ವಿಷಾದ"

ಮೊನ್ನೆ ತಾನೇ "ಬೆಂದ ಕಾಳೂರು" ಎಂಬ ಬೆಂಗಳೂರಿನ ಬೀದಿ ಒಂದರಲ್ಲಿ ಹೋಗುತ್ತಿದ್ದಾಗ ಫುಟ್ ಪಾತ್ ಮೇಲೆ ಕುಳಿತು ಸಿಗರೇಟು ಸೇದುತ್ತಿದ್ದ ಪುಟ್ಟ ಹುಡುಗನನ್ನು ನೋಡಿದೆ.... ಎಳಸು ಬಾಲಕನ ಬಾಯಿ ತುಂಬಾ ಹೊಗೆ! ಪಕ್ಕದಲ್ಲೇ ಇನ್ನೊಬ್ಬ ಪೋರ ಕುಳಿತು ತನ್ನ ಸರದಿಗಾಗಿ ಕಾಯುತ್ತಿದ್ದ.. ಬಳಪ ಹಿಡಿಯಬೇಕಾದ ಕೈಯಲ್ಲಿ "ಬತ್ತಿ" !!!

ಇದು ತಪ್ಪು ಎಂದು ಬುದ್ದಿ ಹೇಳುವವರಿಲ್ಲ... ರಾಜಧಾನಿಯ ಮಹಾಜನತೆ ತಮ್ಮ ತಮ್ಮ ಕೆಲಸಗಳಲ್ಲೇ ಮಗ್ನ !

ರಾಜಕೀಯದ ಅತಿರಥ ಮಹಾರಥರೆಲ್ಲರೂ ಚುನಾವಣೆಯಲ್ಲಿ "ಬ್ಯುಸಿ"ಯಾಗಿದ್ದರೆ, ಕನ್ನಡದ ಸೇನಾನಿಗಳೆಲ್ಲ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವುದರಲ್ಲಿ ತಲ್ಲೀನ..

ಪ್ರತಿ "ಕ್ಷಣ"ವೂ ಹಣ ಬೇಡುವ ನಗರವಲ್ಲವೇ ?

ಆ ಪುಟ್ಟ ಕಂದನ ಭವಿಷ್ಯವನ್ನು ನೆನೆದಾಗ ಕಂಡದ್ದು.....

"ವಿಷಾದ"

" ಹೊಗೆಯು ಹೊಮ್ಮುತಲಿಹುದು

ಕೆಮ್ಮು ಚಿಮ್ಮುತಲಿಹುದು

ರಸ್ತೆ ಬದಿ ಕುಳಿತಿರುವ

ಹುಡುಗನೆದೆಯಿಂದ...

ಪುಟ್ಟ ಕಂದನ ಕೈಲಿ

ಸುಡು ಸುಡುವ ಹೊಗೆಬತ್ತಿ...

ಜಗವು ನೋಡುತಲಿಹುದು

ನಿರ್ಭಾವದಿಂದ..."

ಮಳೆಗಾಲಕ್ಕೆ ಮುನ್ನುಡಿ..

ಗೆಳೆಯರೇ... ಮಳೆಗಾಲ ಪ್ರಾರಂಭವಾಗಿದೆ.... ಸುತ್ತಲೂ ಧೋ ಎಂದು ಮಳೆ ಸುರಿಯುತ್ತಿದೆ... ಮನೆಯೊಳಗೆ ಕುಳಿತುಕೊಂಡು ಬೆಚ್ಚಗೆ ಕಾಫಿ ಕುಡಿಯುತ್ತ, ನಮ್ಮ ಇಷ್ಟದ ಪುಸ್ತಕ ಕೈಯಲ್ಲಿ ಹಿಡಿದು ಕುಳಿತರೆ ಸಾಕು ಅದೇ ಸ್ವರ್ಗ.... ಜೊತೆಗೆ ನಾಲ್ಕು ಹಪ್ಪಳ ಸಿಕ್ಕಿದರಂತೂ.... ಆಹಾ... ಅಂದ ಹಾಗೆ ನಾನು ಈ ಬಾರಿಯ ಮಳೆಗಾಲವನ್ನೂ ಮೂಡಿಗೆರೆಯಲ್ಲೇ ಕಳೆಯುವ ಅವಕಾಶ ದೊರಕಿದೆ.. ಮೂಡಿಗೆರೆಯ ಮಳೆಯಂತೂ ತುಂಬಾ ವಿಶಿಷ್ಟ... ಅದರ ಮಜಾವನ್ನು ಅನುಭವಿಸಿಯೇ ಸವಿಯಲು ಸಾಧ್ಯ.. ಚಳಿ ಗಾಳಿ, ಆಕಾಶದ ತುಂಬಾ ಕವಿದ ಮೋಡ, ಸೂರ್ಯನ ಪತ್ತೆಯೇ ಇಲ್ಲ... ಹುಂ.. ಅದೆಲ್ಲ ಬೇಕಾದ್ರೆ ನೀವು ಇಲ್ಲಿಗೇ ಬರಬೇಕು...
ಈ ಧಾರಾಕಾರ ಮಳೆಯ ಮಧ್ಯೆಯೂ ಒಂದು ಸಣ್ಣ ಚಾರಣ ಮಾಡುವ ಯೋಜನೆಯೂ ಇದೆ.. ನನ್ನ ಪ್ರೀತಿಯ ಘಾಟಿ ಕನ್ಯೆ "ಚಾರ್ಮಾಡಿ" ನನ್ನನ್ನ ಕೈ ಬೀಸಿ ಕರೆಯುತ್ತಾ ಇದ್ದಾಳೆ.. ಜೊತೆಗೆ ನನ್ನ ಆಜನ್ಮ ಮಿತ್ರರಾದ ಜಿಗಣೆಗಳೂ.... ಹೋಗದೇ ಇರೋದಿಕ್ಕಗುತ್ತದಾ ? ನೀವೇ ಹೇಳಿ ?
ಒಂದು ಸುಂದರ ಭಾನುವಾರ ನಾನು ಚಾರ್ಮಾಡಿಯತ್ತ ಹೆಜ್ಜೆ ಹಾಕಲಿದ್ದೇನೆ... ಮೋಡಗಳಿಗೆ ಮುತ್ತು ಕೊಡುವ ಆಸೆ ನಂಗೆ.. ನೀವೂ ಬರಬೇಕು ಅಂತ ಅನ್ನಿಸ್ತಿದೆಯಾ ?
ಉಹುಂ... ನಾನು ಒಬ್ಬನೇ ಹೋಗುತ್ತಾ ಇರೋದು....
ಹೋಗಿ ಬಂದ ಮೇಲೆ ಆ ಕತೆ ಹೇಳ್ತೇನೆ... ಆಯಿತಾ ?
ಟಾಟಾ...

Tuesday, May 27, 2008

"ಮುರಿದ ಮನ"

ಸುಡುವ ಭಾವಗಳಿಂದು

ಮನಕೆ ಕಿಡಿ ಹಚ್ಚಿಹವು

ತಣಿಸೋ ತಂಗಾಳಿಯದು

ಬಹು ದೂರವಿಹುದು..

ಸಂತಯಿಸುವಾ ಮಾತು,

ಸ್ಪರ್ಶಕ್ಕಾಗಿಯೇ ಕಾದು

ಮರುಗುತ್ತ ಕುಳಿತಿಹುದು

ಜೀವ ಬೆಂದು...

ಮನದ ಮಾತುಗಳು

ಬ್ಲಾಗ್ ಲೋಕಕ್ಕೆ ಕಾಲಿಡುವಾಗ ಏನೋ ಒಂದು ಭಯ.... ನನ್ನ ಬರಹಗಳನ್ನು, ಹುಚ್ಚು ಭಾವನೆಗಳನ್ನು ಎಲ್ಲರೆದುರು ತೆರೆದಿಡಲು ಏನೋ ಸಂಕೋಚ..... ಬರವಣಿಗೆಯ ಮೊದಲ ಹಂತದಲ್ಲಿ ಕಾಣುವ ಈ ಹಿಂಜರಿತವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದೇನೆ... ಹಾಂ.... ನನಗೆ ಬ್ಲಾಗ್ ತೆರೆಯಲು ಸಹಕರಿಸಿದ ನನ್ನ ಪ್ರೀತಿಯ ರಮೇಶಣ್ಣನಿಗೆ ತುಂಬಾ ತುಂಬಾ ಥ್ಯಾಂಕ್ಸ್ !!!

ನನ್ನ ಈ ಪಯಣದಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ.... ನಿಮ್ಮ ಪ್ರೋತ್ಸಾಹ, ಹಾರೈಕೆಗಳೇ ನನಗೆ ಸ್ಪೂರ್ತಿ.....

ನನ್ನ ಕವನಗಳು, ಕೆಲವೊಂದು ಬರಹಗಳು, ಚಾರಣದ ಕತೆಗಳು, ಹೀಗೆ ಎಲ್ಲವನ್ನೂ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಾ ಇದ್ದೇನೆ.......

ಓದಿ ಅಭಿಪ್ರಾಯ ಬರೆಯುತ್ತೀರಲ್ವ ???

"ಚಿಂತೆ"

ಮನದ ಭಾವಗಳನ್ನು

ಹಂಚಿಕೊಳ್ಳಲು ಬೇಕು,

ಮುಚ್ಚಿಟ್ಟ ದುಃಖವದು ಕಿಚ್ಚಿನಂತೆ....

ಎದೆಯ ತೆರೆಯಲು ಬೇಕು,

ತುಟಿ ಬಿಚ್ಚಿದರೆ ಸಾಕು,

ನೋವು ತಾ ಕರಗುವುದು ಮಂಜಿನಂತೆ....

ನಮಸ್ಕಾರ



ಮೊಟ್ಟ ಮೊದಲ ಬಾರಿಗೆ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಚರಣಗಳಿಗೆ ವಂದಿಸುತ್ತೇನೆ.
ಎಲ್ಲರಿಗೂ ನಮಸ್ಕಾರಗಳು. ನಾನು ಅಕ್ಷಯರಾಮ, ಕಾವಿನಮೂಲೆ....
ನಾನು "ತೋಟಗಾರಿಕೆ" ಯಲ್ಲಿ ಪದವೀಧರ... ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ...