Thursday, August 2, 2012

ಪಯಣ

ಬೆಂಗಳೂರು ರೈಲಿಗೆ ಹತ್ತಿದ ಮೇಲೆ ಅದೆಂಥದೋ ತಳಮಳ.


ಸುಬ್ರಹ್ಮಣ್ಯ ದಾಟಿ ರೈಲು ಘಟ್ಟ ಹತ್ತುಕೆ ಶುರುವಾದ ಮೇಲಂತೂ ಎನೋ ಒಂದು ವಿಚಿತ್ರ ಮನಸ್ಥಿತಿ.!

ಸುರಂಗಗಳ ಒಳಗೆ ಹೋಗಿ ಸಂಕದಾಟಿ ರೈಲು ಮುಂದೆ ಹೋಗ್ತಾ ಇದ್ರೂ ಮನಸ್ಸು ಎಲ್ಲಿಯೋ ಉಳುದು ಹೋದ ಭಾವ.

ಹೊರಗೆ ನೋಡುವಾ ಹೇಳಿ ರೈಲಿನ ಬಾಗಿಲಿಲಿ ಕೂತ್ರೂ ಸಮಾಧಾನ ಇಲ್ಲ. “ಸರಿ ಎಂತಾರೂ ಬರಿವ” ಹೇಳಿ ಪೆನ್ನು ಕಾಗದ ಹಿಡ್ಕೊಂಡು ಕೂತ್ರೆ “ಎಂತ ಬರಿಯುದು ?” ಹೇಳುವ ಪ್ರಶ್ನೆ.

ಬದುಕು ಎಷ್ಟು ವಿಚಿತ್ರ ಅಲ್ವಾ ?

ಎಲ್ಲೆಲ್ಲಿಗೋ ಕರ್ಕೊಂಡು ಹೋಗ್ತೆ.

ಒಂದೇ ದಾರಿಲಿ ಹೋವುಕೆ ಇದೆಂಥ ರೈಲಾ ? ಟ್ರ್ಯಾಕ್ ತಪ್ಪದ್ದೆ ಒಂದೇ ಸಮ ಹೋಗುವಂಥದಲ್ಲ ಬದುಕು.

ನೂರು ಕವಲು, ಸಾವಿರ ದಾರಿ. ಅದೆಷ್ಟೋ ಜೀವ, ಅವು ಕೊಡುವ ಪ್ರೀತಿ, ವಿಶ್ವಾಸ, ಮೃದು ಭಾವ ಬದುಕಿನ ಉದ್ದಕ್ಕೂ ಕಾಡುತ್ತಾ ಇರ್ತೆ.

ಎಲ್ಲಿಯೋ ಹುಟ್ಟಿ ಇಲ್ಲಿಯ ವರೆಗೆ, ಈ ಕ್ಷಣದವರೆಗೆ ಬೆಳೆದು ಬಂದು ನಿಂತ ದಾರಿ ಅದೆ ಅಲ್ವಾ ? ಅದು ನಿಜವಾಗಿಯೂ ವಿಚಿತ್ರ.

 ನಾನು ಸಣ್ಣಾಗಿರುವಾಗ ಅಜ್ಜನ ಕಾಲಿಲಿ ಮನಿಕ್ಕೊಂಡು ಇರ್ತಿದ್ದೆ ಅಂತೆ. ಅಜ್ಜ ನನಿಗೆ ಹಾಲಿಲಿ ಅದ್ದಿದ ರಸ್ಕು ತಿನ್ಸುತ್ತಿದ್ರಂತೆ.

ಅಜ್ಜ ರಾಮಾಯಣ, ಮಹಾಭಾರತ ಕತೆ ಹೇಳ್ತಾ ಇರುವಾಗ ನನಿಗೆ ಬೇರೆ ಎಂತದೂ ಬೇಡ್ವಂತೆ. ರೈಲು ಯಾವುದೋ ಒಂದು ಸಣ್ಣ ಹೊಳೆ ಮೇಲೆ ದಾಟಿತ್ತು. ನೀರು ಬೆಳಿ ಬೆಳಿ ನೊರೆ ಚೆಲ್ಲಿ ಹರಿತ್ತಾ ಅದೆ.

ಯೋಚನಾ ಲಹರಿಗೆ ಸಣ್ಣ ತಡೆ ಆಯ್ತು. ಅಜ್ಜನ ಕಣ್ಣಿಲಿ ಪ್ರೀತಿ. ನಾನು ಅಜ್ಜನ ದೊಡ್ಡ ಪುಳ್ಳಿ (ಮಾಣಿ ಪುಳ್ಳಿ) ನನ್ನ ಕಂಡ್ರೆ ಅಜ್ಜನಿಗೆ ಕೊಂಡಾಟ ಜಾಸ್ತಿ.

ಅಂದು ಫಾದರ್ ಮುಲ್ಲರ್ ಆಸ್ಪತ್ರೆಲಿ ಹಂದದ್ದೆ ಮನಿಕ್ಕೊಂಡಿದ್ದ ಅಜ್ಜನ ಕಾಲು ಮುಟ್ಟಿ ನೋಡಿದೆ. ತಣ್ಣಗಾಗಿತ್ತು. ನನ್ನ ಮನಿಗಿಸಿದ ಕಾಲು, ನನ್ನ ತಾಚಿ ಅಂಟಿದ ಕಾಲು. ಅಜ್ಜನ ದೇಹ ತಣ್ಣಗಾಗಿ ಆಗಿತ್ತು. ಅಜ್ಜ ನನ್ನ ಮೇಲೆ ಇಟ್ಟಿದ್ದ ಪ್ರೀತಿ, ನಂಬಿಕೆ, ಅದೆಷ್ಟು ಸರ್ತಿ ಅದಿಕ್ಕೆ ಭಂಗ ತಂದಿದ್ದೇನೋ ?

ನಾನು ಕೂಗಿದ್ದು ಸತ್ಯ. ಅಜ್ಜನ ಕಾಲು ಕಾಣುವಾಗ ನನಿಗೆ ನೆಂಪಾದ್ದು ನನ್ನ ಬಾಲ್ಯ ಮಾತ್ರ.
ಅಜ್ಜ ತುಂಬಾ ನೆಂಪಾಗ್ತಾ ಇದ್ದಾರೆ ಇಂದು. ಸಣ್ಣಾಗಿರುವಾಗ ನನ್ನ ಎತ್ತಿ ಆಡ್ಸಿದ ಅಜ್ಜ, ಅಡಿಕೆ ಮಾರುಕೆ ಪುತ್ತೂರಿಗೋ ಮಂಗ್ಳೂರಿಗೋ ಹೋಗುವಾಗ ಕೇಳ್ತಾ ಇತ್ತಿದ್ವಂತೆ “ನಿನ್ನಿಗೆಂತ ಬೇಕು ಮಗಾ ?”

ಅಜ್ಜ ನನ್ನ ಬಿಟ್ಟು ಎಲ್ಲಿಗೋ ಹೋಗ್ತಾರೆ ಹೇಳುದೇ ನನಿಗೆ ಅವಗ ದೊಡ್ಡ ವಿಷಯ ಆಗಿತ್ತು. ಎಷ್ಟಾಗ್ತೋ ಅಷ್ಟು ದೊಡ್ಡ ಪಟ್ಟಿ ಹೇಳ್ತಿದ್ದೆ ನಾನು. “ಏಪಾಲು”, “ಉಂಬಿ”, ಕೋಟು”. ಅಜ್ಜ ತಂದು ಕೊಡ್ತಿದ್ರು.

ಈ ದಟ್ಟ ಕಾಡಿಲಿ ಒಳಗೆ ಹೋಗಿ ಕಾಣೆ ಆಗ್ವೇಕು. ಅದೊಂದು ಹುಚ್ಚು ನನಿಗೆ.

ಚಾರಣ, ತಿರುಗುದು ಹೇಳಿರೆ ತುಂಬಾ ಖುಶಿ. ಯಾರೂ ಇಲ್ಲದ್ದ ಕಡೆ, ನಾಣೊಬ್ಬನೇ ಕೂತು ಇಡೀ ದಿನ ಕಳಿವೇಕು.

ನನ್ನತ್ರ ಮಾತಾಡುಕೆ, ಉಪದ್ರ ಮಾಡುಕೆ ಯಾರೊಬ್ಬನೂ ಇರುಕಾಗ್ದು. ಅಮ್ಮನ ಹೊಟ್ಟೆಲಿ ಇರುವಾಗ ಹೇಂಗೆ ಇತ್ತಿದ್ನೋ ಹಾಂಗೆ. ಏಕಾಂತ, ಮೌನ.

ಅಮ್ಮನ ಎದೆ ಬಡಿತ ಮಾತ್ರ ಕೇಳುದು. ಅದು ಮಾತ್ರ ಸಾಕು. ಎಷ್ಟೋ ಸರ್ತಿ ಒಬ್ಬೊಬ್ಬನೇ ಚಾರಣ ಹೋಗಿದ್ದೇನೆ. ಯಡಕುಮೇರಿ ರೈಲ್ವೇ ಟ್ರಾಕಿಲಿ ಇನ್ನೊಂದು ಸರ್ತಿ ನಡ್ಕೊಂಡು ಬರುವೇಕು. ಒಬ್ಬನೇ ಬಂದು ಫೋಟೋ ತೆಕ್ಕೊಂಡು ಕುಶಿಪಡ್ವೇಕು. ಪ್ರಪಂಚದ ಪ್ರತಿಯೊಂದು ಜೀವಿಯ ಒಟ್ಟಿಗೆ ಇದ್ರೂ ನಾನು ಒಬ್ಬನೇ ಹೇಳುವ ನಿರ್ಲಿಪ್ತತೆ ನನ್ನ ಒಳಗೆ ಬರುವೇಕು. ಅವಾಗಳೇ ನಾನು ಬೆಳಿಯುಕೆ ಸಾಧ್ಯ.
ಅಜ್ಜನ ಬಗ್ಗೆ ಎಂತ ಹೇಳುದು ನಾನು ? ನನ್ನಂದಲೂ ಹೆಚ್ಚು ಅಜ್ಜನೊಟ್ಟಿಗೆ ಆತ್ಮೀಯ ಆಗಿತ್ತಿದ್ದಿದ್ದು ಅಪ್ಪ. ಅವಿಬ್ರೂ ಒಳ್ಳೆ ಫ್ರೆಂಡ್ಸ್.

ಎಷ್ಟು ಅರ್ಥ ಮಾಡಿಕೊಂದಿತ್ತಿದ್ವು ? ನನ್ನ ಅಪ್ಪನ “ಅಣ್ಣ” ಹೇಳಿಯೇ ಕರ್ಕೊಂಡು ಇದ್ದದ್ದು ಅಜ್ಜ.
ಸಕಲೇಶಪುರ ಹತ್ರ ಬಂತು. ಅದೆಷ್ಟು ಜನ ಕೆಲಸದವು ? ಧಾರವಾಡ ಕಡೆಯವು ಇದ್ದಾವೆ ರೈಲು ಟ್ರ್ಯಾಕಿನ ಕೆಲಸಕ್ಕೆ.

ಮನೆ, ಜಾಗೆ ಎಲ್ಲ ಬಿಟ್ಟು ಇಲ್ಲಿಗೆ ಬಂದು ದುಡಿತ್ತಾವೆ. ಟರ್ಪಲು ಶೆಡ್ಡು ಹಾಕಿ ಇಲ್ಲಿಯೇ ಗಂಜಿ ಬೇಯ್ಸಿ ತಿಂತಾವೆ. ಅವುಕ್ಕೆ ಇದು ಅನಿವಾರ್ಯ.

ಬರ, ನೆರೆ, ಎರಡೂ ಪ್ರಾಣ ತಿನ್ನುಕೆ ಕಾಯ್ತಾ ಇರುವಾಗ ಅವಾದ್ರೂ ಎಂತ ಮಾಡ್ತಾವೆ ಪಾಪ ? ಹಾಂಗೆ ಹೇಳಿ ತೋಟಕ್ಕೆ ಜನ ಇಲ್ಲ ! ಡಾಮಾರು ಹಾಕುಕೆ, ರೈಲು ಕಂಬಿ ರಿಪೇರಿಗೆ, ಫೋನಿನ ಲೈನು ಗುಂಡಿ ತೆಗಿಯುಕೆ ಬರುವ ಜನ ಅಡಿಕ್ಕೆ ಹೆರ್ಕುಕೆ, ತೋಟದ ಕೆಲಸಕ್ಕೆ ಬಂದಿದ್ರೆ ಅಪ್ಪನ ಟೆನ್ಶನ್ ಸ್ವಲ್ಪ ಕಮ್ಮಿ ಆಗ್ತಿತ್ತು. ಅಂದೊಂದು ಸರ್ತಿ ಕೆಲಸಕ್ಕೆ ಬರ್ತೇವೆ ಹೇಳಿ ದುಡ್ಡು ತೆಕ್ಕೊಂಡು ನಾಮ ಹಾಕಿತ್ತಿದ್ವು ಮೂರು ಜನ ‘ಘಟ್ಟದ ಮೇಲಾಣವು ’.

ಅವು ಹಾಂಗೆ ಮಾಡಿದ್ವು ಹೇಳಿ ಎಲ್ಲವರನ್ನೂ ಒಂದೇ ತಕ್ಕಡಿಲಿ ತೂಗುಕಾಗ್ದು.
ಮನೆಲಿ ಎಂತಾರೂ ವಿಷಯ ಚರ್ಚೆ ಆಗುವಾಗ ಅಪ್ಪ, ಅಜ್ಜ ಇಬ್ರೂ ವಾದ ಮಾಡ್ತಿದ್ವು. ಯಾವುದಾರು ಕೆಲಸ ಮಾಡ್ಸುಕೆ, ಎಂತಾರೂ ಒಂದು ನಿರ್ಧಾರ ತೆಕ್ಕೊಳ್ಳುಕೆ ಮೊದ್ಲು ಚರ್ಚೆಯೇ ಚರ್ಚೆ.

ಹಾಂಗೆ ಹೇಳಿ ಇನ್ನೊಬ್ಬನ ಮನಸ್ಸಿಗೆ ಬೇನೆ ಮಾಡಿ “ನನ್ನದೇ ಆಗ್ವೇಕು, ನಾನು ಹೇಳಿದ ಹಾಂಗೇ” ಹೇಳಿ ಯಾವತ್ತೂ ಮಾಡಿದ ಜನ ಅಲ್ಲ ಅಜ್ಜ. ನಾನು ಬಿ.ಎಸ್ಸಿ. ಹಾರ್‍ಟಿಕಲ್ಚರ್ ಮುಗುಸಿ ಕೆಲಸಕ್ಕೆ ಸೇರುವಾಗಳೂ ಅಷ್ಟೇ. ಅಜ್ಜನಿಗೆ ನಾನು ‘ಎಸ್ಟೇಟ್ ಚಾಕ್ರಿ ’ ಮಾಡುದು ಇಷ್ಟ ಇಲ್ಲದ್ರೂ ಕಳಿಸಿ ಕೊಟ್ರು.
ಹುಂ ! ಕಾಫಿ ಹೂ ಪರಿಮಳ ಬರ್ತಾ ಅದೆ. ನಾನು ‘ಕಾಫಿ ಡೇ’ ಕಂಪೆನಿಲಿ ಕೆಲಸ ಮಾಡಿದ್ದು, ಬಿ.ಎಸ್ಸಿ. ಮಾಡುವಾಗ ಮೂಡಿಗೆರೆಲಿ ನಾಕು ವರ್ಷ ಇದ್ದದ್ದು, ಅಲ್ಲಿಯಾಣ ಕಾಫಿ ಹೂವಿನ ಪರಿಮಳ ಎಲ್ಲಾ ನೆಂಪಾಗ್ತೆ. ಪಶ್ಚಿಮ ಘಟ್ಟ ನನಿಗೆ ತುಂಬಾ ಇಷ್ಟ. ಆ ಕಾಡಿನೊಳಗೆ ಯಾವಾಗ ಬೇಕಾರೂ, ಎಷ್ಟು ಸರ್ತಿ ಬೇಕಾರೂ ಹೋವುಕೆ ರೆಡಿ ನಾನು. ಅಕಾಲಲ್ಲಿ ಮಳೆ ಬಿದ್ದು ಕಾಫಿಗಿಡ ಹೂ ಬಿಟ್ಟದೆ.

ತಂಗಿ ಮದ್ವೆ ಸಂದರ್ಭಲ್ಲಿ ಅಜ್ಜ ಹೇಳಿದ್ದು, “ಅವು ಇಬ್ರೂ ಇಷ್ಟಪಟ್ಟಿದ್ದಾವೆ ಅಲ್ವಾ ? ಮತ್ತೆ ನಮ್ಮದೆಂತ ?” ಮತ್ತೆ ಬೇರೆ ಆಲೋಚನೆಯೇ ಮಾಡಲ್ಲ. “ದಿನ ನೋಡಿ ಕೊಡುದೇ ” ಆ ನಿರ್ಧಾರ ಸರ್ವಾಧಿಕಾರಿಯಾಗಿ ಹೇಳಿದ್ದಲ್ಲ ಅಜ್ಜ. “ಕಷ್ಟವೋ ಸುಖವೋ ಹೊಂದಿಕೊಂಡು ಬಾಳ್ವೇಕಾದವು ಅವು ಇಬ್ರು” ಹೇಳಿ ಹೇಳಿದ ಮಾತು ಚಿನ್ನದ್ದು. ಅಪ್ಪ ಈಗಳೂ ನೆಂಪು ಮಾಡಿಕೊಂಡು ಹೇಳ್ತಾರೆ. ನನ್ನ ವಿಷಯಲ್ಲಿ ಅಪ್ಪ ಹೇಳುದೂ ಅದೇ ಮಾತು. “ನಿನಿಗೆ ಬೇಕಾದ ಅಂಗಿಯ ನೀನೇ ಹೊಲಿಸಿಕೊಳ್ಳುವೇಕು ”.
ಅಜ್ಜ ನಮ್ಮ ಮನೆಗೆ ಬೇಕಾಗಿ ಎಷ್ಟು ಕಷ್ಟಪಟ್ಟಿದ್ದಾವೆ ಹೇಳುದ್ರ ಗ್ರೇಶಿರೇ ಕೂಗುಕೆ ಬರ್ತೆ. ಒಂದಿಡೀ ಜೀವಮಾನ ನವುಗೆ ಬೇಕಾಗಿ ದುಡುದು ಕಳುದ್ರು. ವಾರಕ್ಕೊಂದು ಸರ್ತಿ ಮಾರುವ ಕೊಕ್ಕೊ ಕೊಯ್ಯುಕೆ ಅಜ್ಜ ವಾರ ಇಡೀ ತೋಟ ಸುತ್ತುತ್ತಿದ್ರು. ಕೈಲಿ ಒಂದು ಕೊಕ್ಕೆ, ಒಂದು ಗೋಣಿ ಹಿಡ್ಕೊಂಡು ಬೆಳಿಗ್ಗೆ ಒಂಭತ್ತಕ್ಕೆ ಹೊರಟ್ರೆ, ಹನ್ನೊಂದಕ್ಕೆ ಮನೆಗೆ ಬರುದು. ಅಜ್ಜನ ಮೈ ಮೇಲೆ ಎಲ್ಲಾ ಬೆಗರು. ಅಜ್ಜನ ಮೋರೆಲಿ ಇಳುದ ಆ ಬೆಗರೇ ನಮ್ಮ ಸಾಂಕಿದ್ದು.

ಸಕಲೇಶಪುರ ರೈಲ್ವೇ ಸ್ಟೇಶನ್ ಬಂತು. ಈಗ ಎಂತಾರೂ ತೆಕ್ಕೊಂಡು ಊಟ ಮಾಡ್ವೇಕು.

ಊಟ ಮಾಡಿದ ಮೇಲೆ ಒಂದಷ್ಟು ಹೊತ್ತು ಮೌನ. ರೈಲಿನ ಸ್ಪೀಡು ಜಾಸ್ತಿ ಆಗಿಯೆದೆ. ರೈಲು ಹೋಗುವ ದಾರಿಲಿ ಅಲ್ಲಿ ಅಲ್ಲಿ ನಿತ್ತುಕೊಂಡು ರೈಲಿಗೆ ಟಾಟಾ ಮಾಡುವ ಪುಟ್ಟು ಮಕ್ಳ ಕಂಡ್ರೆ ನನಿಗೆ ತುಂಬಾ ಕುಶಿ. ಅವರ ಮನಸ್ಸಿಲಿ ಎಂತ ಭಾವನೆ ಇದ್ದೀತು ? ಆಲೋಚನೆ ಮಾಡುಕೆ ಸ್ವಲ್ಪ ಕಷ್ಟವೇ. ಆದ್ರೆ ಒಂದು ಮಾತ್ರ ನನಿಗೆ ಕಾಣುದೆಂತ ಹೇಳಿರೆ, ಅವರ ಮನಸ್ಸಿಲಿ ಒಂದು ಬಗೆಯ ಪ್ರೀತಿ ರೈಲಿನ ಮೇಲೆ. ರೈಲಿಲಿ ಹೋಗುವವರ ಮೇಲೆ ಎಂತದೋ ಒಂದು ಆಕರ್ಷಣೆ.

ಹಾಸನ ಹತ್ರ ಬಂತು. ಅದ್ಯಾಕೋ ಗೊತ್ತಿಲ್ಲ, ಘಟ್ಟದ ಕೆಳಗೆ ಹಸಿರು ನೋಡ್ತಾ ಇದ್ರೆ ಅಜ್ಜ ನೆಂಪಾಗ್ತಾರೆ, ಘಟ್ಟದ ಮೇಲೆ ಬಯಲಿಲಿ ಸ್ವಲ್ಪ ಕಮ್ಮಿ. ಅಡಿಕೆ, ತೆಂಗು, ಕೊಕ್ಕೊ ತೋಟ ನೋಡ್ತಾ ಇದ್ರೆ ನನಿಗೆ ಅಜ್ಜನ ಮೋರೆ ಕಣ್ಣಿಗೆ ಕಟ್ಟುತ್ತೆ. ನಾಣು ತೆಗ್ದ ಒಂದು ಫೋಟೋಲ್ಲಿ ಅಜ್ಜನ ಆ ಮೋರೆ ಬಂದದೆ. ಕೊಕ್ಕೊ ಕೊಯಿದು ಬಚ್ಚಿ ಬಚ್ಚಿ ಮನೆಗೆ ಬರುವಾಗ ಅಜ್ಜ ಹೇಂಗೆ ಕಾಣ್ತಿದ್ರು ? ಅಬ್ಬಾ ! ನವುಗಾಗಿ ಜೀವ ತೇಯ್ದ ಅಜ್ಜ.

ಹನ್ನೊಂದು ಘಂಟೆಗೆ ಒಂದು ಗ್ಲಾಸು ಕಾಪಿ ಕುಡುದು ಮತ್ತೆ ಅಡಿಕ್ಕೆ ಸಜ್ಜಿ ಮಾಡುದು. ಹನ್ನೆರೆಡಕ್ಕೆ ಒಂದು ಬಾಳೆಹಣ್ಣು ಅಥವಾ ಒಂದು ತುಂಡು ಬೆಲ್ಲ ಬಾಯಿಗೆ ಹಾಕಿಕೊಂಡು ಪೂಜೆಗೆ ಹೂ ಕೊಯ್ಯುದು. ಮತ್ತೆ ಅಬ್ಬಿಗೆ ಹೋಗಿ ಶ್ರೀ ಸೂಕ್ತ, ದುರ್ಗಾ ಸೂಕ್ತ ಹೇಳಿಕೊಂಡು ಮೀಯುದು. ರಾತ್ರೆ ಮೀಯುವಾಗ್ಳೂ ಶ್ರೀ ಸೂಕ್ತ, ದುರ್ಗಾ ಸೂಕ್ತ. ಗಾಯತ್ರಿ ಹೇಳಿ ಜಪ ಮಾಡಿದ್ರ ನಾನು ಕಾಣಲ್ಲ (ನನಿಗೆ ನೆಂಪಿಲ್ಲ). ಮೊದ್ಲು ಜಪ ಮಾಡಿಕೊಂಡು ಇತ್ತಿದ್ರಂತೆ. ಕುತ್ತಿಗೆ, ಶ್ವಾಸಕೋಶಲ್ಲಿ ಗೆಡ್ಡೆ ಬೆಳ್‌ದ್ರೂ ಅಜ್ಜನ ಕಾಪಾಡಿದ್ದು ಆ ಶ್ರೀ ಸೂಕ್ತ, ದುರ್ಗಾ ಸೂಕ್ತವೇ ಹೇಳಿ ನಾಗೇಶಣ್ಣ ಅಜ್ಜನ ಜಾತಕ ನೋಡಿ ಹೇಳಿತ್ತಿದ್ವು. ಅಜ್ಜ ಪೂಜೆ ಮಾಡುದ್ರ ನೋಡುದೇ ಒಂದು ಚಂದ. ನಿತ್ಯ ರುದ್ರ, ಚಮೆ, ಪುರುಷಸೂಕ್ತ ಹೇಳಿ ಪಂಚಾಯತನ ಪೂಜೆ. ಒಂದು ಪಾವು ಅಕ್ಕಿಯ ಅನ್ನದ ನೈವೇದ್ಯ. ಪೂಜೆ ಆಗದ್ದೆ ಊಟ ಇಲ್ಲ.

ಮದ್ಯಾನ ಊಟ ಆಗಿ ಅಜ್ಜನಿಗೆ ಒಂದು ಸಣ್ಣ ನಿದ್ದೆ. ನನಿಗೆ ಆಟ ಆಡುಕೆ ಆಚೆ ಮನೆಗೆ ( ‘ಹಿಮಗಿರಿ’ಗೆ) ಹೋವುಕೆ ‘ಅರ್ಜೆಂಟು’. ಅಜ್ಜನ ಹತ್ರ ಕೇಳಿರೆ ಪರ್ಮಿಶನ್ ಸಿಕ್ಕೀತು ಹೇಳಿ ಗೊತ್ತದೆ. ಅರ್ಧಂಬರ್ಧ ನಿದ್ದೆ ಹತ್ತುವಲ್ಲಿ ವರೆಗೆ ಅಜ್ಜನ ಹತ್ರವೇ ಕೂತು ಕೇಳುದು, “ಅಜ್ಜ ! ನಾನು ಹಿಮಗಿರಿಗೆ ಹೋಗಿ ಬರ್ತೇನೆ”. ಪಾಪ ಅಜ್ಜ ನಿದ್ದೆಲಿ “ಹಾಂ” ಹೇಳಿ ಹೂಂಗುಟ್ಟಿದ್ದೇ ಸಾಕು ಹೇಳಿ ನಾನು ‘ಪದ್ರಾಡ್’. ಮತ್ತೆ ಮನೆಗೆ ಎತ್ತುದು ಕಸ್ತ್ಲೆ ಆದ ಮೇಲೆಯೇ ! ಅಪ್ಪ, ಅಮ್ಮ ಕೇಳಿರೆ ಹೇಳುದು, “ನಾನು ಅಜ್ಜನ ಹತ್ರ ಕೇಳಿಯೇ ಹೋದ್ದು”.

ಹಾಸನ ದಾಟಿ ಅರಸೀಕೆರೆಗೆ ಹೋಗ್ತಾ ಅದೆ ರೈಲು. ಹೊರಗೆ ನೋಡಿರೆ ಭತ್ತದ ಗದ್ದೆ. ಇನ್ನೂ ಇಲ್ಲಿ ಭತ್ತ, ರಾಗಿ ಬೆಳಿತ್ತಾ ಇರುವ ಕಾರಣವೇ ನಾವೆಲ್ಲಾ ಊಟ ಮಾಡ್ತೇವೆ. ಮೊದ್ಲೆಲ್ಲಾ ಎಷ್ಟು ಭತ್ತ ಬೆಳಿತ್ತಾ ಇತ್ತಿದ್ವು ? ಈಗ ಯಾರೂ ಬೇಸಾಯ ಮಾಡುದಿಲ್ಲ. ನಮ್ಮ ಮನೆಲಿಯೇ ಸುಮಾರು ಗದ್ದೆ ಇತ್ತಂತೆ ಮೊದ್ಲು. ಈಗ ಒಂದು ಚೂರೂ ಇಲ್ಲ. ಹಳೆ ಕತೆಗಳ ಎಲ್ಲಾ ಹೇಳ್ತಿದ್ರು ಅಜ್ಜ. ಅವರ ಅಪ್ಪನ ಕಾಲಲ್ಲಿ ಹೇಂಗಿತ್ತು ?, ಅವರ ಜವ್ವನಲ್ಲಿ ಹೇಂಗಿತ್ತು ? ಎಲ್ಲಾ ಈಗ ನೆಂಪು ಮಾತ್ರ. ನಾನು ಸಣ್ಣಾಗಿರುವಾಗ ಮಳೆಗಾಲಲ್ಲಿ, ಕರೆಂಟಿಲ್ಲದ್ದ ರಾತ್ರಿ, ಚಿಮಿಣಿ ಎಣ್ಣೆ ದೀಪ ಇಟ್ಟುಕೊಂಡು ಪೋರ್ಟಿಕೊದ ಮರದ ಬೆಂಚಿಲಿ ಕೂರುದು. ಅಜ್ಜನ ಕತೆ ಕೇಳುದು. ಹುಂ ! ಆ ದಿನ ಇನ್ನು ಯಾವತ್ತೂ ಬರುಕಿಲ್ಲ ನನ್ನ ಜೀವನಲ್ಲಿ. “ಕಾಲು ಮೇಲೆ ಇಟ್ಟು ಕೂತುಕೋ, ಮೈನ್ ಸುಚ್ಚು ಆಫ್ ಮಾಡಿ ಆಯ್ತಾ ? ಫೋನ್ ಕನೆಕ್ಷನ್ ತೆಗಿರಿ” ಅಜ್ಜನ ಜಾಗ್ರತೆ. “ಮಿಂಚುತ್ತೆ, ಕಿಟ್ಕಿ ಹತ್ರ ಕೂರ್ವೇಡಿ”.

ಅಡಿಕ್ಕೆ ಸೊಲಿಯುದು, ಅದ್ರ ಸಜ್ಜಿ ಮಾಡುದು ಅಜ್ಜನ ಇಷ್ಟದ ಕೆಲಸ. ಪುರ್ಸೊತ್ತು ಇರುವಾಗ ಎಲ್ಲಾ ಅಜ್ಜ ಚಿಟ್ಟೆಲಿ ಕೂತು ಅಡಿಕ್ಕೆ ರಿಪೇರಿ, ಸಜ್ಜಿ ಮಾಡಿಯಾರು. ಒಳ್ಳೆ ಅಡಿಕ್ಕೆ, ಅದ್ರಲ್ಲಿಯೂ ‘ಮೋರ’ ಬೇರೆ, ‘ಚೆಪ್ಪು ಗೋಟು ’, ‘ಪಠೋರ’, ‘ಕೋಕ’ ಎಲ್ಲಾ ಬೇರೆ ಬೇರೆ ಹೆಡಿಗೆಗೆ ಹಾಕಿರೆ ಒಂದೇ ಒಂದು ಅಡಿಕ್ಕೆಯೂ ಆಚೆ ಈಚೆ ಆವುಕಿಲ್ಲ. ಮಧ್ಯೆ ಯಾರಾರೂ ಬಂದ್ರೂ “ಏನು ?” “ಒಳ್ಳೆದು” “ಬಾಯಾರಿಕೆ ಬೇಕಾ ?” ಕೇಳಿ ಸ್ವಲ್ಪ ಮಾತಾಡಿ ಮತ್ತೆ ಅಡಿಕ್ಕೆ ಹೆಡಿಗೆ ಹತ್ರ ಕೂತಾಯ್ತು.

ಹುಂ ! ಈ ನೆನಪ್ಪು ಮನುಷ್ಯ ಕಾಡಿದಷ್ಟು ಮತ್ಯಾರೂ ಕಾಡುದಿಲ್ಲ. ಒಳ್ಳೆದೋ ಹಾಳೋ, ನಾವು ಮಾಡಿದ್ದು, ಬೇರೆಯವು ನವುಗೆ ಮಾಡಿದ್ದು, ಹೇಳಿದ್ದು, ಕೇಳಿದ್ದು, ಪ್ರತಿಯೊಂದೂ ನೆಂಪಾಗ್ತೆ. ಒಟ್ಟಿಗೆ ಇದ್ದವು, ಬಿಟ್ಟು ಹೋದವು, ಕುಶಿ, ಬೇಜಾ‌ಋ ಎಲ್ಲವೂ ನೆಂಪಾಗಿಕೊಂಡೇ ಇರ್ತೆ.

ಅಬ್ಬಾ ! ಎಷ್ಟು ದೂರ ನೋಡಿರೂ ತೆಂಗಿನ ತೋಟವೇ ಕಾಣ್ತಾ ಅದೆ. ಅರಸೀಕೆರೆ, ತಿಪ್ಟೂರು ಸುತ್ತಮುತ್ತ ತೆಂಗು ಜಾಸ್ತಿ. ಎಸ್ ಎಲ್ ಭೈರಪ್ಪನ ಕಾದಂಬರಿ ಓದಿರೆ, ಈ ಹೋಡೆಂii ವಿವರಣೆ ಸಿಕ್ಕುತ್ತೆ. ಹಾಸನ, ಚನ್ನರಾಯಪಟ್ಣ, ಅರಸೀಕೆರೆ, ಬಯಲುಸೀಮೆ ನನ್ನ ಊಹೆಯ ವ್ಯಾಪ್ತಿಗೆ ಮೀರಿದ್ದು. ಬಯಲು ಸೀಮೆಯ ಬಗ್ಗೆ, ಅಲ್ಲಿಯಾಣ ಸಂಸ್ಕೃತಿ, ಜನಂಗಳ ಬಗ್ಗೆ ನನಿಗೆ ಗೊತ್ತಾದ್ದು ಭೈರಪ್ಪನ ಕಾದಂಬರಿಗಳ ಓದುಕೆ ಶುರುಮಾಡಿದ ಮತ್ತೆಯೇ.

‘ತಬ್ಬಲಿಯು ನೀನಾದೆ ಮಗನೇ’ ಕಾದಂಬರಿ ಓದಿ ಕಣ್ಣೀರು ಬಂದಿತ್ತು. ಅಜ್ಜನಿಗೂ ತಂದುಕೊಟ್ಟಿತ್ತಿದ್ದೆ ಓದುಕೆ. ದನಗಳ ಬಗ್ಗೆ, ಮೂಕಪ್ರಾಣಿಗಳ ಬಗ್ಗೆ ನನ್ನ ಅಜ್ಜನಿಗೆ ಇದ್ದ ಪ್ರೀತಿಯ ಮೇಲೆ ಒಂದು ಪುಸ್ತಕವೇ ಬರಿವೋದು. ಮನೆಯ ಹಟ್ಟಿ ತುಂಬ ದನ, ಎಮ್ಮೆ ಇದ್ರೂ ಅಜ್ಜನಿಗೆ ಅದು ಕಮ್ಮಿಯೇ ! ದನವ ಮಾರುವ ಪ್ರಶ್ನೆಯೇ ಇಲ್ಲ. ನಾನು ಸಣ್ಣಾಗಿರುವಾಗ ಅಜ್ಜ ದನ ಮಾರಿದ್ರ ಯಾವತ್ತೂ ನೋಡ್ಲೇ ಇಲ್ಲ. ಬರ್ತಾ ಬರ್ತಾ ಅಪ್ಪ, ಚಿಕ್ಕಯ್ಯ ಅನಿವಾರ್ಯವಾಗಿ ದನ ಮಾರುವೇಕಾಗಿ ಬಂದಾಗುವಾಗ ಅಜ್ಜ ಮನಸ್ಸಿಲ್ಲದ್ದ ಮನಸ್ಸಿಂದ ಒಪ್ಪುತ್ತಿದ್ರು. ಆದ್ರೆ ಕೊಡುವ ದಿನ ಹಟ್ಟಿ ಹೊಡೆಗೆ ಹೋಗ್ತೇ ಇತ್ತಿಲ್ಲ. ದನ ಮಾರಿದ ದಿನ ಅಜ್ಜ ‘ಡಲ್ಲು’. ಹಟ್ಟಿಗೆ ಹೋದಷ್ಟು ಸರ್ತಿ ಹಿಂಡಿ, ಬೈಹುಲ್ಲು ಎಂತಾರೂ ದನಕ್ಕೆ ಹಾಕದ್ರೆ ಸಮಾಧಾನವೇ ಇಲ್ಲ. ಅಪ್ಪ ಎಷ್ಟು ಚರಿಪಿರಿ ಮಾಡಿರೂ ಅಜ್ಜನ ಮೋರೆಲಿ ಒಂದು ಸಣ್ಣ ನೆಗೆ ಮಾತ್ರ.

ರೈಲು ಅರಸೀಕೆರೆಲಿ ನಿತ್ತದೆ. ಇಲ್ಲಿ ಸುಮಾರು ಹೊತ್ತು ನಿಲ್ತೆ. “ಚಾಯ್, ಕಾಫಿ, ಇಡ್ಲಿ, ದೋಸೆ ” ಗಲಾಟೆಯೇ ಗಲಾಟೆ. ಎಲ್ಲಾ ಬಗೆ ಜನ ಇಲ್ಲಿ ಕಾಣ್ವೋದು. ಎಷ್ಟಾದ್ರೂ ರೈಲು ಹೇಳಿರೆ ‘ಮಿನಿ ಭಾರತ’ ಅಲ್ವಾ ?

ಇಲ್ಲಿಂದ ತಿಪ್ಟೂರು, ತುಮ್ಕೂರು, ಯಶ್ವಂತಪುರ, ಅಲ್ಲಿಂದ ಹೆಬ್ಬಾಳಕ್ಕೆ ಬಸ್ಸು. ಬ್ಯಾಟರಾಯನಪುರಲ್ಲಿ ಇಳುದ್ರೆ ಚರಣ್ ಬೈಕ್ ತೆಕ್ಕೊಂಡು ಬರ್ತಾನೆ ಹೇಳಿ ರೂಂಮೇಟ್ ರವಿ ಆಗ್ಲೇ ಫೋನ್ ಮಾಡಿ ಆಗ್ಯೆದೆ. ಮತ್ತೆ ಬೆಂಗ್ಳೂರಿಲಿ ಇರ್ವೇಕು. ಆ ಟ್ರಾಫಿಕ್, ಗಲಾಟೆ, ಹೊಗೆ, ಟೆನ್ಶನ್ ಎಲ್ಲವೂ ಕಾಯ್ತಾ ಅದೆ ನನಿಗೆ. ಅದೆಲ್ಲಾ ನನಿಗೆ ಮಾತ್ರ ಅಲ್ಲ. ಆ ಮಹಾನಗರಕ್ಕೆ ಕಾಲಿಡುವ ಪ್ರತಿಯೊಬ್ಬನಿಗೂ. ಒಬ್ಬೊಬ್ಬನಿಗೆ ಒಂದೊಂದು ಥರ ಕಾಣ್ತೆ ಬೆಂಗ್ಳೂರು. ಜಾಸ್ತಿ ಭಾವುಕ ಆದ್ರೂ ಕಷ್ಟ ಅಲ್ವಾ ?

ಮನೆ ನೆಂಪಾಗ್ತಾ ಅದೆ.

ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಯ್ಯ, ಚಿಕ್ಕಮ್ಮ, ತಮ್ಮಂದ್ರು, ತಂಗಿ, ಭಾವ, ತಂಗಿಯ ಅಮಳಿ ಮಕ್ಳು, ನನ್ನ ಮುದ್ದು ಸೊಸೆಯಂದ್ರು, ದನ, ಕರು, ತೋಟ, ಎಲ್ಲವೂ ನೆಂಪಾಗ್ತಾ ಅದೆ.

ನನ್ನ ಮನೆ, ನನ್ನ ಕನಸು, ನನ್ನ ಕಲ್ಪನೆ, ಮುಂದಾಣ ಬದ್ಕು, ಅಲ್ಲಿ ನಾನು ಹೇಂಗೆ ಇರ್ತೇನೆ ?

ನನ್ನ ಕನಸಿನ ಹುಡುಗಿ, ಅದ್ರ ಮನೆಯವ್ವು, ನನ್ನ ಮದ್ವೆ, ಮೊನ್ನೆಂದ ಕಳ್ದ ನಾಕು ದಿನ, ಸುತ್ತಿದ್ದು, ಮಂಗ್ಳೂರು, ಆಸ್ಪತ್ರೆ, ಪುತ್ತೂರು, ಬಾಲವನ, ಕೃತ್ತಿಕಾ, ಪುತ್ತೂರು ಬಸ್ಟ್ಯಾಂಡು, ರೈಲ್ವೇ ಸ್ಟೇಶನ್, ಬೆಂಗ್ಳೂರು, ಜಿಕೆವಿಕೆ, ನನ್ನ ‘ರೀಸರ್ಚು’, ಎಂಎಸ್ಸಿ ಡಿಗ್ರಿ, ನನ್ನ ಗೈಡು, ಪಾರ್ಟ್ ಟೈಮ್ ಕೆಲಸ, ಜರ್ಬೆರಾ ಗಿಡ, ಈ ರೈಲು, ರೈಲಿನ ಒಳಗೆ ಎಲ್ಲಿಯೋ ಹಾಡ್ತಾ ಇರುವ ಅಂತ್ಯಾಕ್ಷರಿ, ಮಾರುವವ್ರ “ಬಾಳೆಹಣ್ಣು, ಚಾಯ್, ಕಾಫಿ, ಕಾಫಿ, ಕಾಫಿ…… ”No comments: