Thursday, August 2, 2012

ಪಯಣ – 03

ನಾವು ಬೇಡ ಹೇಳಿರೂ, ಬೇಕು ಹೇಳಿರೂ ಬದುಕು ಮುಂದೆ ಹೋಗ್ತಾ ಇರ್ತೆ….

ಕಳುದ ಸರ್ತಿ ಮನಸ್ಸಿನ ಮಾತುಗಳ “ಪಯಣ” ಹೇಳಿ ಹೆಸರಿಟ್ಟು ಬರಿವಾಗ ನಾನು ದೂರದ ಡೆಲ್ಲಿ ಲಿ ಇತ್ತಿದ್ದೆ…….

ಗುರ್ಗಾವ್ ನ ಬದುಕಿನ ಖುಷಿ, ಬಿಸಿಗಳ ಅನುಭವಿಸ್ತಾ ಇತ್ತಿದ್ದೆ….. ಆ ದಿನ ನನಿಗೆ ಖಂಡಿತಾ ಗೊತ್ತಿರಲ್ಲ, ಇನ್ನೊಂದು ಸರ್ತಿ ನಾನು ಬರಿಯುಕೆ ಶುರು ಮಾಡುವಾಗ ಬೆಂಗ್ಳೂರಿಲಿ ಇರ್ತೇನೆ ಹೇಳಿ……

ಬದುಕಿನ ಹುಚ್ಚು ಹೊಳೆ ನನ್ನ ಮತ್ತೆ ಎಳ್ಕೊಂಡು ಬಂತು ಇಲ್ಲಿಗೆ….. ಆರು ತಿಂಗಳಿಲಿ ಮೂರು ಸರ್ತಿ ಕೆಲಸ ಬದಲ್ಸುವ ಹಾಂಗೆ ಆಯ್ತು

ಯಾವುದೇ ಲೇಖನ ಬರಿಯುಕೆ ಎಷ್ಟು ಕಷ್ಟ ಹೇಳುದು ಬರಿವವನಿಗೆ ಮಾತ್ರ ಗೊತ್ತಾಗುದು….. ಮನಸ್ಸು ಖಾಲಿ ಖಾಲಿ ಆಗಿರುವಾಗ, “ಭಾವ ಶೂನ್ಯ” ಸ್ಥಿತಿಲಿ ಇರುವಾಗ ಬರಿಯುಕೆ ಕೂತ್ರೆ ಎಂತದೂ ಬರಿಯುಕೆ ಸಾಧ್ಯ ಇಲ್ಲ, ಎಂತೆಂತದೋ ಬರುದು ಹೋದೀತು !

ಅದೇ ರೀತಿ ಎಂತಾದ್ರೂ ಬರಿವೇಕು ಹೇಳಿ ಕಾಣುವಾಗ ಬರಿಯದ್ದೆ ಇರುಕೂ ಆಗುದಿಲ್ಲ…

ಮೊದಲನೇ ಸರ್ತಿ ನಾನು ಮನಸ್ಸಿಗೆ ಕಂಡ ಸಂಗತಿಗಳ ಮನಸ್ಸಿಗೆ ಬಂದ ಹಾಂಗೆ ಬರ್ದಿತ್ತಿದ್ದೆ, ಅದೂ ರೈಲಿಲಿ ಕೂತುಕೊಂಡು !

ಟೈಮ್ ಪಾಸ್ ಮಾಡುಕೆ ಬರ್ದು ಹೇಳಿ ಹೇಳಿರೂ ತಪ್ಪಾವುಕಿಲ್ಲ….. ಹಾಂಗೆ ಬರ್ದ ಲೇಖನಕ್ಕೆ ಹೆಸರು ಕೊಡುವಾಗ “ಪಯಣ” ಹೇಳಿ ಹಾಕಿತ್ತಿದ್ದೆ….

ಆ ಲೇಖನ ಮತ್ತೆ ಮುಂದುವರಿತ್ತಾ ಅದೆ….

ಎಷ್ಟಾದ್ರೂ ಬದುಕು ಹೇಳುದು ಮುಗಿಯದ್ದ ಪ್ರಯಾಣ ಆಲ್ವಾ ?

ಒಂದೊಂದು ದಿನ ಒಂದೊಂದು ಕ್ಷಣವೂ ಹೊಸತ್ತು ಪಾಠ, ಅನುಭವ ಕೊಡ್ತಾ ಇರ್ತೆ……. ಹಳೆ ನೆನಪ್ಪು ಮತ್ತೆ ಮರುಕಳಿಸ್ತಾ ಇರ್ತೆ…..

ಎಷ್ಟೋ ಸಂದರ್ಭಲ್ಲಿ ಆ ಹಳೆ ನೆನಪ್ಪುಗಳು ಪ್ರಸ್ತುತ ಆಗ್ತೆ…. ನಮ್ಮ ಹಿರಿಯವು ಬಾಳಿ ಬದುಕ್ಕಿದ ಕತೆ, ಪಳಮ್ಮೆ ಕೇಳುಕೆ ಖುಷಿ ಆಗ್ತೆ, ನಮ್ಮ ಬದುಕಿಗೆ ಹೊಸ ಪಾಠವೂ ಕಲ್ತ ಹಾಂಗೆ ಆಗ್ತೆ…….

ಎಷ್ಟಾದ್ರೂ ಹಳೆ ಅಡಿಕೆಗೆ ರೇಟು ಜಾಸ್ತಿ ಆಲ್ವಾ ? ಹಳತ್ತು ಹೊಸತ್ತರ ಸೇರ್ಸಿ ಬಂದ ಅನುಭವಂಗಳ ಶಬ್ದ ರೂಪಕ್ಕೆ ಇಳುಸುವ ಪ್ರಯತ್ನ ಮಾಡ್ತಾ ಇದ್ದೇನೆ…..

ನಮ್ಮ ಭಾಷೆ ಸ್ವಲ್ಪ ವಿಚಿತ್ರ….. ಹವಿಗನ್ನಡದ ಒಂದು ಶಾಖೆ ಅದು…. ಶಾಲೆ ಕನ್ನಡ, ಮಡಿಕೇರಿ ಕನ್ನಡ, ಹಳೆಗನ್ನಡ ಎಲ್ಲವೂ ಸೇರಿ ಆದ “ಅವಿಲು”.

ಕೆಲವೇ ಕೆಲವು ಮನೇಲಿ ಈ ಭಾಷೆ ಮಾತಾಡುದು…. ಇತ್ತೀಚಿಗೆ ಈ ಭಾಷೆಯ ಮಾತಾಡುವವ್ವು ಕಮ್ಮಿ ಆಗ್ತಾ ಇದ್ದಾವೆ….

ಕಾರಣ ಇಷ್ಟೇ…. ಮನೆಗೆ ಹೊಸತ್ತಾಗಿ ಬರುವ ಸೊಸೆಯಕ್ಲಿಗೆ ಈ ಭಾಷೆ ಮಾತಾಡುಕೆ ಇಷ್ಟ ಇಲ್ಲ

ನಮ್ಮ ಕಾವಿನಮೂಲೆ ಮನೆತನಲ್ಲಿಯೇ ಎಷ್ಟೋ ಮನೆಲಿ ಈಗ ನಮ್ಮ ಭಾಷೆ ಮಾತಾಡುದಿಲ್ಲ !! ಮಕ್ಕಳಿಗೆ ಸಹಾ ಕಲಿಯುಕಾಗ್ದು ಹೇಳಿ ತಾಕೀತು !!!

ನಾನು ಯಾರನ್ನೂ ದೂರ್ತಾ ಇಲ್ಲ….. ಆದ್ರೆ ಒಂದು ಅಪರೂಪದ ಭಾಷೆ ನಿಧಾನಕ್ಕೆ ಕಾಣೆ ಆಗ್ತಾ ಅದೆ ಹೇಳುವ ಬೇನೆ ಮಾತ್ರ ಅದೆ ಮನಸ್ಸಿಲಿ…..

ಆದ್ರೆ ಈ ಆರೋಪಕ್ಕೆ ಅಪವಾದವೂ ಅದೆ……

ನನ್ನ ಅಜ್ಜನ ದೊಡ್ಡ ಅಣ್ಣನ ಮನೆಲಿ ಎಲ್ಲಾ ಸೊಸೆಯಕ್ಕಳೂ ನಮ್ಮ ಕನ್ನಡಲ್ಲಿಯೇ ಮಾತಾಡುದು……

ನನ್ನ ಲೇಖನಂಗಳ ಓದಿದ ಎಷ್ಟೋ ಜನ ಈ ಭಾಷೆಯ ಮೇಲೆ ಆಸಕ್ತಿ, ಪ್ರೀತಿ ತೋರ್ಸಿದ್ದಾವೆ…..

ನನ್ನ ಕೈ ಹಿಡುದ ಕೃತ್ತಿಕಾ ಈಗಾಗ್ಲೇ ನಮ್ಮ ಭಾಷೆ ಕಲ್ತಾಗಿಯೆದೆ

ಅದು ಎಷ್ಟು ಲಾಯ್ಕಲ್ಲಿ ನಮ್ಮ ಕನ್ನಡ ಮಾತಾಡ್ತೆ ಹೇಳಿರೆ, ನನ್ನ ಅಪ್ಪ ಅಮ್ಮ, ಎಲ್ಲವ್ಕೂ ಖುಷಿಯೋ ಖುಷಿ

ನಮ್ಮ ನೆಂಟ್ರು ಎಲ್ಲವ್ಕೂ ಆಶ್ಚರ್ಯ ! ಎಷ್ಟು ಬೇಗ ಕಲ್ತತ್ತು ಹೇಳಿ !!!
~*~*~
ಅಪ್ಪ, ಅಜ್ಜ ಮಾತಾಡ್ತಾ ಇದ್ದದ್ದು ನೆಂಪಾಗ್ತೆ…..

ಮೊದಲೊಂದು ಕಾಲ ಇತ್ತಂತೆ….. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಕಾಲ…..

ಕೆಲಸದ ಆಳುಗಳು ಬೆಳಿಗ್ಗೆ ಆರು ಆರೂವರೆಗೆಲ್ಲ ಕೆಲಸಕ್ಕೆ ಬಂದು ಬೈಸಾರಿ ಆರು ಏಳು ಘಂಟೆಗೆ ಕೆಲಸ ಬಿಟ್ಟು ಹೋಗ್ತಿದ್ವಂತೆ….. ಸೂರ್ಯೋದಯಂದ ಸೂರ್ಯಾಸ್ತದ ವರೆಗೆ ದುಡುದ್ರೆ ಅವುಕ್ಕೆ ಸಿಕ್ಕಿಕೊಂಡಿದ್ದದ್ದು ದಿನಕ್ಕೆ ಒಂದು ಸೇರು ಭತ್ತ, ವಾರಕ್ಕೆ ಒಂದೆರೆಡು ಸೇರು ಉಪ್ಪು…..

ಬೈಸಾರಿ ಕೆಲಸ ಮುಗುಸಿ ಅವರವರ ಮನೆಗೆ ಹೋಗಿ, ಭತ್ತ ಗುದ್ದಿ, ಅಕ್ಕಿ ಮಾಡಿ, ಗಂಜಿ ಬೇಯ್ಸಿ ಊಟ ಮಾಡ್ವೆಕು !!! ಮರುದಿನ ಬೆಳಿಗ್ಗೆ ಮತ್ತೆ ಸೂರ್ಯ ಹುಟ್ಟುಕೆ ಮೊದಲೆ ಅಂಗಳಲ್ಲಿ ನಿತ್ತುಕೊಂಡು, “ಅಯ್ಯಾ ಇನಿ ಎಂಚಿನ ಬೇಲೆ ?” ಹೇಳಿ ಕೇಳಿಕೊಂಡು ಇತ್ತಿದ್ವಂತೆ…..

ಅಷ್ಟೂ ಬಡತನ ಇತ್ತು ಊರಿಲಿ….. !!! ಇಂದು ಕಾಲ ಸಾಕಷ್ಟು ಬದಲಾಗ್ಯೆದೆ…… ಎಷ್ಟು ಹೇಳಿರೆ ಮನೆ. ತೋಟದ ಕೆಲಸಕ್ಕೆ ಆಳುಗಳೇ ಸಿಕ್ಕದ್ದಷ್ಟು !! ಈಗ ಅಪ್ಪ ಹೇಳ್ತಾವೆ, “ಅಂದು ನಾವು ಆಳುಗಳಿಗೆ ಬಯ್ಕೊಂಡಿತ್ತು, ಈಗ ದಮ್ಮಯ್ಯ ಹಾಕಿ ಕರುದ್ರೂ ಯಾರೂ ಬರುದಿಲ್ಲ”

ಮೊನ್ನೆ ಇತ್ತ “ನಿಲುಮೆ” ಹೇಳುವ ವೆಬ್ ಸೈಟ್ ಲಿ ಒಂದು ಲೇಖನ ಓದಿದೆ…. “ಒಂದು ತುತ್ತು ಅನ್ನ, ಎರಡು ತೊಟ್ಟು ಕಣ್ಣೀರು” ಹೇಳಿ….. ಮದುವೆ ಮನೆಲಿ ಉಳುದ ಅನ್ನ, ಎಂಜಲು ಬಾಳೆ ಲಿ ಉಳುದ ಆಹಾರಕ್ಕೆ ಮುಗಿ ಬೀಳುವ ಬಡವರ ಬಗ್ಗೆ ರವಿ ಮೂರ್ನಾಡು ಹೇಳುವ ಜನ ಬರ್ದ ಸುದ್ದಿ……

ಓದಿಯಾಗುವಾಗ ನಮ್ಮ ಊರಿಲಿ ಇದ್ದ ಬಡತನ, ಅನ್ನಕ್ಕೆ ಬೇಕಾಗಿ ಜನ ಕಷ್ಟಪಟ್ಟುಕೊಂಡು ಇದ್ದ ದಿನಂಗಳು ನೆನಪ್ಪಾಯ್ತು…..

ಆರಂಡ ಅದ್ದುಲ್ಲ ಇಚ್ಚ ಹೇಳುವ ಒಂದ ಜನ ಅದೆ ಅಂತೆ…..

ಭಾರೀ ಒಳ್ಳೆ ಕೃಷಿಕ, ಒಳ್ಳೆ ಗಾರ್ಡನ್ ಮಾಡುವ ಜನ…. ಈಗ ಪ್ರಾಯ ಆಗಿಯೇದೆ ಆದ್ರೆ ಮೊದಲು ಒಂದು ಕಾಲಲ್ಲಿ ತುಂಬಾ ಕಷ್ಟ ಪಟ್ಟು ದುಡುದ ಜನ….

ಅದು ಎಲ್ಲಿಯೋ ಒಂದು ನಮ್ಮವರ ತೋಟಲ್ಲಿ ಕೆಲಸಕ್ಕೆ ಹೋಯ್ಕೊಂಡಿತ್ತಂತೆ…. ಆ ಕಾಲ ಹೆಂಗಿತ್ತು ಹೇಳಿರೆ ಮರಂದ ಬಿದ್ದ ಹಲಸಿನ ಹಣ್ಣಿಗೂ ಜನ ಹಾತೊರೆಯುವ ಬಡತನ !

ಕೆಲಸದ ಆಳುಗಳು ಯಾರೂ ಹಲಸಿನ ಹಣ್ಣು ಕೊಯ್ದು ತಿನ್ನುವ ಹಾಂಗೆ ಇಲ್ಲ !

ಆ ತೋಟದ ರೈಟರ್ ಒಬ್ಬ ಇತ್ತಿದ್ದಂತೆ ನಮ್ಮವ…… ಅವನೂ ಪಾಪದವನೇ….. ಹೊಟ್ಟೆ ಪಾಡಿಗೆ ಬೇಕಾಗಿ ರೈಟನ ಕೆಲಸ ಮಾಡಿಕೊಂಡಿತ್ತಿದ್ದ…..

ಒಂದು ದಿನ ತೋಟದ ಹಲಸಿನ ಮರಲ್ಲಿ ಒಂದು ಹಲಸಿನ ಹಣ್ಣಿನ ಕಾಕೆ ಒಕ್ಕಿ ತಿಂತಂತೆ….

ಅದ್ಲಿಚ್ಚ ಇನ್ನೊಂದು ಆಳಿನ ಒಟ್ಟಿಗೆ ಹೋಗಿ ಆ ಒಟ್ಟೆ ಆದ ಹಲಸಿನ ಹಣ್ಣಿನ ಕೊಯ್ಯುಕೆ ಹೋಗಿಯಾಗುವಾಗ ರೈಟ ಬಂದು ಜೋರು ಮಾಡಿ ಆಚೆ ಕಳ್ಸಿದ…..

ಆ ಹಣ್ಣಿನ ಕೊಯ್ದು ತೋಟದ ಯಜಮಾನನಿಗೆ ತಲ್ಪಿಸಿದ…..

( ಆ ತೋಟದ ಯಜಮಾನ ಯಾರು ? ರೈಟ ಯಾರು ಹೇಳುದು ಅಪ್ರಸ್ತುತ. ರೈಟ ಅವನ ಕರ್ತವ್ಯ ಮಾಡಿದ ಅಷ್ಟೇ ! ಅವನ ತಪ್ಪಿಲ್ಲ ಅಲ್ವಾ ??)

ಆಗ ಬೇಜಾರಲ್ಲಿ ಅದ್ಲಿಚ್ಚ ಹೇಳಿದ ಮಾತು “ಛೆ ನಮ ಆ ಕಕ್ಕೆ ಆತ್ ಪುಟ್ಟೋಡಿತ್ತ್ ನ್ಡ ಪೆಲಕ್ಕಾಯಿ ಆಂಟಲಾ ತಿನ್ನೋಲಿತ್ತ್ ನ್ದ್” (” ಛೆ ನಾವು ಆ ಕಾಕೆ ಆಗಿ ಹುಟ್ಟಿರ್ತಿದ್ರೆ ಹಲಸಿನ ಹಣ್ಣಾದರೂ ತಿನ್ನುವೋದಿತ್ತು”)

ಅಪ್ಪ ಹೇಳಿದ ಆ ಕತೆ ಯಾವತ್ತಿಗೂ ಮರಿಯುಕೆ ಸಾಧ್ಯ ಇಲ್ಲ…. ಬಡತನದ ಪರಮಾವಧಿ ಇತ್ತು ಊರಿಲಿ…..

ಅನ್ನ ಹೇಳಿರೆ ದೇವರು ಹೇಳಿ ಸುಮ್ಮನೆ ಹೇಳುದಲ್ಲ ಆಲ್ವಾ ? ಜಂಬ್ರದ ದಿನ ಉಂಡ ಬಾಳೆಲೆಯ ಹೊರಗೆ ಬಿಸಾಕುದೆ ತಡ, ಹೊಲೆಯರು, ಅಜಲರು ಎಲ್ಲಾ ಬಂದು ಮುಗಿ ಬೀಳ್ತಿದ್ವಂತೆ ಅದ್ರಲ್ಲಿ ಉಳುದ ಅನ್ನವ ಹಾಳೆ ಪಡಿಗೆಲಿ ತುಂಬ್ಸಿಕೊಂಡು ಹೋಗ್ತಿದ್ವಂತೆ…..

ಊರಿಲಿ ಎಲ್ಲಿಯಾದ್ರೂ ಜಂಬ್ರ ಆಯ್ತು ಹೇಳಿರೆ ಸಾಕು, ಊರಿಗೆ ಊರೇ ಹಾಜರು !!

ಹೇಳಿಕೆ ಹೇಳಿ ಬರುದಲ್ಲ ! ಎಲ್ಲವೂ ಸಾಲುಗಟ್ಟಿ ಬರುದೇ !!! ನನ್ನ ಅಜ್ಜನ ಅಪ್ಪ (ಪಿಜ್ಜ) ನ ವರ್ಶಾಂತಿಕಲ್ಲಿ ಹಾಂಗೆ ಆಗಿತ್ತಂತೆ…..

ಮೊದಲಾಣ ಹಂತಿ ಊಟ ಮುಗ್ಸಿ ದೇರಾಜೆ ಸೀತಾರಾಮಯ್ಯ ಮೊದಲಾದವು ಗೇಟಿಂದ ಹೊರಗೆ ಬರುಕೆ ಸಾಧ್ಯ ಆಗದ್ದಷ್ಟು ನೂಕುನುಗ್ಗಲು !!!

ಹೊರಗೆ ಬರುವವರ ತಳ್ಳಿ ಒಳಗೆ ನುಗ್ಗುವ ಜನಸಾಗರ !!!

ಪುಣ್ಯಕ್ಕೆ ನಮ್ಮ ಊರಿಲಿ ಇಂದು ಆ ಸಂಕಷ್ಟದ ದಿನಂಗಳು ಇಲ್ಲ

ಆದ್ರೆ ಅನ್ನದ ಬೆಲೆಯೂ ಜನಕ್ಕೆ ಗೊತ್ತಿಲ್ಲ ಬೆಂಗ್ಳೂರಿಲಿ ಕೆಲವು ಜಾಗೆಲಿ ಅಂಥಾ ಬಡತನ ಇನ್ನೂ ಅದೆ

ಹಾಂಗೆ ಹೇಳಿ ಜಗತ್ತಿಲಿ ಪೈಸೆ ಓಡಾಡ್ತಾ ಇಲ್ವಾ ???

ಇಂದು ನಾನು ಕೆಲಸ ಮಾಡ್ತಾ ಇರುದು ಲೀಲಾ ಪ್ಯಾಲೇಸ್ ಹೇಳುವ ಫೈವ್ ಸ್ಟಾರ್ ಹೋಟೆಲ್ ಲಿ……

ಇಲ್ಲಿಯಾಣ ಒಂದು ಊಟಕ್ಕೆ ಎರಡು ಸಾವಿರಂದ ನಾಕು ಸಾವಿರ ರುಪಾಯಿ ಅದೆ !!!

ಆದರೂ ಮೊದಲೆ ಬುಕ್ ಮಾಡದ್ರೆ ಕೂರುಕೆ ಜಾಗೆ ಇಲ್ಲ !!!

ಶಿವರಾಮ ಕಾರಂತರು ಹೇಳಿತ್ತಿದ್ವಂತೆ “ಬರ ಬಂತು ಹೇಳಿ ಜನ ಮಸಾಲೆ ದೋಸೆ ತಿನ್ನುದು ಬಿಡ್ತಾವಾ ?”.
~*~*~

ಮಾಳಿಗೆ ಮೇಲೆ ನಿತ್ತುಕೊಂಡಿದ್ದ ಒಂದು ಅಜ್ಜ “ಹಲೋ” ಹೇಳಿ ಕೈ ಬೀಸಿತ್ತು…..

ನಾನು ಇದ್ಯಾಕಪ್ಪಾ ಈ ಜನ ಗುರ್ತ ಇಲ್ಲದ್ದು “ಹಲೋ” ಹೇಳ್ತಾ ಅದೆ ಹೇಳಿ ಆಶ್ಚರ್ಯಲ್ಲಿ ನೋಡಿಕೊಂದಿರುವಾಗಲೇ ನನ್ನ ಬೈಕಿನ ಎದುರಾಣ ಟಯರು ಗಸಕ್ಕನೆ ಗುಂಡಿಗೆ ಬಿತ್ತು

ಮತ್ತೆ ನೋಡಿರೆ ಎಂತ ? ಅಲ್ಲಿ ಒಂದು ಮ್ಯಾನ್ ಹೋಲಿನ ಸುತ್ತ ಮಳೆ ನೀರು ನುಗ್ಗಿ ಒಳ ಚರಂಡಿ ಕುಸುದು ಗುಂಡಿ ಆಗಿತ್ತು….

ಹೊಸತ್ತಾಗಿ ಮಾಡಿದ drainage ಎಲ್ಲಾ ತೊಳ್ಕೊಂಡು ಹೋಗಿ ನೀರು ತುಂಬಿಕೊಂಡಿತ್ತು ಗೋವಿಂದ !!

ನಾನು ಮೊದಲೆ ಆಫೀಸಿಗೆ ಲೇಟಾಯ್ತು ಹೇಳಿ ಗಡಿಬಿಡಿಲಿ ಹೊರಟಿತ್ತಿದ್ದೆ, ಬೈಕು ಗುಂಡಿಗೆ ಪಡ್ಚ !!

ಆಚೆ ಈಚೆ ನೋಡಿರೆ ಮೇಲಾಣ ಮನೆ ಅಜ್ಜ ಹೇಳ್ತಾ ಅದೆ, “I told you know ? There is a pit” ದೇವರೇ ಗತಿ ಹೇಳಿ ಬೈಕಿಂದ ಇಳುದೆ…..

ಅಷ್ಟ್ರಲ್ಲಿ ಅಲ್ಲಿ ಎರಡು ಮೂರು ಜನ ಸಣ್ಣ ಸಣ್ಣ ಮಕ್ಕಳು ಬಂದ್ವು…. ಆರ್ನೆಯೋ ಎಳ್ನೆಯೋ ಕ್ಲಾಸ್ ಇರುವೋದು….

“ಏನಾಯ್ತು ಅಂಕಲ್ ? ಜಾಸ್ತಿ ಏನೂ ಆಳ ಇಲ್ಲ ಅಂಕಲ್ ಬನ್ನಿ ಎತ್ತೋಣ” ಹೇಳಿ ಹೇಳಿಕೊಂಡು ಒಂದು ಹುಡುಗ ಎದುರಾಣ ಟಯರು, ಇನ್ನೊಂದು ಹುಡುಗ ಹಿಂದಾಣ ಚಕ್ರ ಹಿಡ್ಕೊಂಡು ನಾನು handle ಹಿಡ್ಕೊಂಡು ನೇಚಿ ಈಚೆ ಇಟ್ಟಾಯ್ತು

ನನಿಗೆ ಸಾಕೋ ಸಾಕು ಹೇಳಿ ಕಂಡತ್ತು……

ಸ್ವಲ್ಪ ಮುಂದೆ ಹೋಗಿ ನೋಡಿರೆ ಪೂರ್ತಿ ನೀರೇ ನೀರು ! ಎಲ್ಲಾ ಖಾಲಿ ಸೈಟಿನೊಳಗೆ ನೀರು ತುಂಬಿಕೊಂಡದೆ !

ನನ್ನ ಶೂವಿನ ಒಳಗೂ ಎರಡು ಪಾಟೆ ಆಗುವಷ್ಟು ನೀರು

ಮಳೆಗಾಲಲ್ಲಿ ಊರಿನ ತೋಡು, ಉಜಿರುಕಣಿ ತುಂಬಿ ಪಾಜಪಳ್ಳ ಹೊಳೆ ತುಂಬಿ ಮಾರ್ಗಲ್ಲೆಲ್ಲಾ ನೀರು ನಿತ್ರೆ ಹೆಂಗಿರ್ತೋ ಹಾಂಗೆ !!!

ಅಂತೂ ಬೈಕು ತೋಡು ದಾಟ್ಸಿದ ಅನುಭವ !! ಬೆಂಗಳೂರಿನಂಥಾ ಮಹಾ ನಗರಲ್ಲಿಯೂ ಊರಿನ ನೆನಪ್ಪು ತಂದುಕೊಟ್ಟ ರಾಜಕಾರಣಿಗಳಿಗೆ ಥ್ಯಾಂಕ್ಸ್ ಹೇಳ್ವೇಕು ಹೇಳಿ ನೆಗೆ ಮಾಡಿಕೊಂಡು ಹೊರಟೆ…….
~*~*~

ದಿನ ಎಷ್ಟು ಬೇಗ ಕಳಿತ್ತೆ ಹೇಳಿ ಗ್ರೆಶಿರೆ ಆಶ್ಚರ್ಯ ಆಗ್ತೆ !

ತೀರಾ ಇತ್ತೀಚಿಗೆ ಡೆಲ್ಲಿ ಲಿ ಕೆಲಸಲ್ಲಿ ಇತ್ತಿದ್ದೆ, ಮೊನ್ನೆ ಮೊನ್ನೆ ಲೀಲಾ ಪ್ಯಾಲೇಸ್ ಲಿ ಕೆಲಸಲ್ಲಿ ಇತ್ತಿದ್ದೆ, ಇಂದು ಆ ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಮಾಡ್ತಾ ಇದ್ದೇನೆ !

ವರ್ಷಕ್ಕೆ ಮೂರು ಕಡೆ job change ಮಾಡುದು resume ನ ಆರೋಗ್ಯಕ್ಕೆ ಒಳ್ಳೇದಲ್ಲ ಹೇಳಿ ಗೊತ್ತಿದ್ದೂ ನಾನು “ಕಂಪೆನಿಯಾಂತರ” (ಪಕ್ಷಾಂತರಕ್ಕೆ ಹೀಂಗೊಂದು ಹೆಸರು ಇಟ್ರೆ ಹೆಂಗೆ ?) ಮಾಡಿದ್ದೇನೆ !

ಈ ಎಲ್ಲಾ ಹಾರಾಟಕ್ಕೂ ನನ್ನದೇ ಆದ ‘ಸಕಾರಣ’ ಅದೆ. ಆದರೂ ಇದು ಒಳ್ಳೇದಲ್ಲ ಅಲ್ವಾ ??

ನಾನು ಬೆಂಗಳೂರಿಗೆ ಬಂದ ಶುರುವಿಗೆ ಬರೆದ ಒಂದು ಪದ್ಯ ನೆನಪ್ಪಾಗ್ತಾ ಅದೆ.

ಬೆಂದ ಕಾಳೂರಿನಲಿ
ಬೆಂದು ಹೋಗಿದೆ ಜೀವ
ಭರದಿ ಓಡುತಲಿರುವ
ಕಾಲಕ್ಕೆ ಸಿಲುಕಿ…

ದಪ್ಪ ನೋಟಿನ ಕಂತೆ,
ಕೆಟ್ಟ ನೋಟದ ಸಂತೆ,
ಬಿಸಿಗಾಳಿ ಬೆವರುಗಳ
ಸಾಗರವ ಕಲುಕಿ…..

ಬದುಕು ನನ್ನ ತೆಕ್ಕೊಂಡು ಹೋದ ಹಾಂಗೆ ನಾನು ಹೋಗ್ತಾ ಇದ್ದೇನೆ. ಎಷ್ಟೋ ಸರ್ತಿ ನಾನು ಗ್ರೆಶುತ್ತೇನೆ, ನಾನು ಬದುಕಿನ ಸೀರಿಯಸ್ ಆಗಿ ತೆಕ್ಕೊಳ್ಳುದೇ ಇಲ್ಲ ಹೇಳಿ !

ನಾನು ಇಂದು ಏನಾಗಿದ್ದೇನೆ, ಮುಂದೆ ಏನಾಗ್ವೇಕು ಹೇಳಿ ಯೋಚನೆ ಮಾಡಿ ತಲೆ ಹಾಳುಮಾಡಿಕೊಂಡ ದಿನವೂ ಇಲ್ಲದ್ದೆ ಅಲ್ಲ. ಆದ್ರೆ ಬಂದದ್ರ ಬಂದ ಹಾಂಗೆ ಸ್ವೀಕಾರ ಮಾಡಿರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಹೇಳಿ ನನ್ನ ಭಾವನೆ.
~*~*~

ಸಾವು ನಮ್ಮ ಕಾದಿದಷ್ಟು ಬೇರೆ ಯಾವುದೂ ಕಾಡುದಿಲ್ಲ ಹೇಳುದು ನನ್ನ ಭಾವನೆ. ಹುಟ್ಟು ಸಾವು ಎರಡೂ ನಮ್ಮ ಕೈಲಿ ಇಲ್ಲ ಹೇಳಿ ಗೊತ್ತಿದ್ದೂ ಸಾವು ನಮ್ಮ ಕೊರಿತ್ತೆ.

ಮೊನ್ನೆ ಇತ್ತ ನನ್ನ ಗುರ್ತದ ಒಬ್ಬ ಮಾಣಿ ತೀರಿಕೊಂಡ. ಸಣ್ಣ ಪ್ರಾಯ. ಆ ಸುದ್ದಿ ಕೇಳಿ ಮನಸ್ಸು ಎಷ್ಟು ಆಘಾತ ಆಯಿತು ಹೇಳಿರೆ, ಮನುಷ್ಯನ ಬದುಕು ಹೇಳಿರೆ ಇಷ್ಟೆಯಾ ಹೇಳಿ ಕಂಡತ್ತು.

ಹುಟ್ಟು ನಮ್ಮ ಹೆಚ್ಚು ಕಾಡುದಿಲ್ಲ ಆದ್ರೆ ಸಾವು ಮಾತ್ರ ಮನಸ್ಸಿನ ಕೊರಿತ್ತೆ. ದೀರ್ಘ ಆಲೋಚನೆಗೆ ತೊಡಗಿಸುತ್ತೆ. ನಾವು ಎಲ್ಲವೂ ಸಾಯುವವೇ ಆದ್ರೆ ಆ ಸತ್ಯ ಜೀರ್ಣ ಮಾಡಿಕೊಳ್ಳುಕೆ ಮಾತ್ರ ಕಷ್ಟ ಆಗ್ತೆ…..

ಪ್ರತಿ ದಿನ ಪ್ರತಿ ಕ್ಷಣವೂ ನಾವು ಸಾವಿನ ಮಹಾ ಮನೆಯ ಕಡೆಗೆ ಹೆಜ್ಜೆ ಹಾಕುತ್ತಾ ಇರ್ತೇವೆ.

ಗೊತ್ತಿದ್ದೋ ಗೊತ್ತಿಲ್ಲದ್ದೆಯೋ ನಾವು ಆ ಮಹಾ ಪ್ರಸ್ಥಾನಕ್ಕೆ ಮುಖ ಮಾಡಿಯೇ ಇರ್ತೇವೆ ಅಲ್ವಾ ?

ಆ ನಿತ್ಯ ಸತ್ಯದ ಕಡೆಗೆ ನಮ್ಮ ಎಲ್ಲರದ್ದೂ ಕೊನೆಯಿಲ್ಲದ “ಪಯಣ”.



~*~*~

1 comment:

Ravishankara Shastry C said...

ಅಕ್ಷಯ .....ನಗರ ಜೀವನದ ಭರಾಟೆಯಲ್ಲಿ ನಾವು ಕಳೆದು ಹೋದೆವಾ ಅಂತ ಬಹಳ ಸಲ ಅನಿಸುತ್ತದೆ... ಹಾಗಿರುವಾಗ ಇಂತಹ ಲೇಖನ ಓದಿ, ಮ(ಕ)ನಸು ಮತ್ತೆ ಚಿಗುರುತ್ತದೆ. ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.... ನಿರಂತರವಾಗಿ ಲೇಖನಗಳು ಹರಿದು ಬರಲಿ....