Friday, May 30, 2008
Wednesday, May 28, 2008
"ವಿಷಾದ"
ಮೊನ್ನೆ ತಾನೇ "ಬೆಂದ ಕಾಳೂರು" ಎಂಬ ಬೆಂಗಳೂರಿನ ಬೀದಿ ಒಂದರಲ್ಲಿ ಹೋಗುತ್ತಿದ್ದಾಗ ಫುಟ್ ಪಾತ್ ಮೇಲೆ ಕುಳಿತು ಸಿಗರೇಟು ಸೇದುತ್ತಿದ್ದ ಪುಟ್ಟ ಹುಡುಗನನ್ನು ನೋಡಿದೆ.... ಎಳಸು ಬಾಲಕನ ಬಾಯಿ ತುಂಬಾ ಹೊಗೆ! ಪಕ್ಕದಲ್ಲೇ ಇನ್ನೊಬ್ಬ ಪೋರ ಕುಳಿತು ತನ್ನ ಸರದಿಗಾಗಿ ಕಾಯುತ್ತಿದ್ದ.. ಬಳಪ ಹಿಡಿಯಬೇಕಾದ ಕೈಯಲ್ಲಿ "ಬತ್ತಿ" !!!
ಇದು ತಪ್ಪು ಎಂದು ಬುದ್ದಿ ಹೇಳುವವರಿಲ್ಲ... ರಾಜಧಾನಿಯ ಮಹಾಜನತೆ ತಮ್ಮ ತಮ್ಮ ಕೆಲಸಗಳಲ್ಲೇ ಮಗ್ನ !
ರಾಜಕೀಯದ ಅತಿರಥ ಮಹಾರಥರೆಲ್ಲರೂ ಚುನಾವಣೆಯಲ್ಲಿ "ಬ್ಯುಸಿ"ಯಾಗಿದ್ದರೆ, ಕನ್ನಡದ ಸೇನಾನಿಗಳೆಲ್ಲ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವುದರಲ್ಲಿ ತಲ್ಲೀನ..
ಪ್ರತಿ "ಕ್ಷಣ"ವೂ ಹಣ ಬೇಡುವ ನಗರವಲ್ಲವೇ ?
ಆ ಪುಟ್ಟ ಕಂದನ ಭವಿಷ್ಯವನ್ನು ನೆನೆದಾಗ ಕಂಡದ್ದು.....
"ವಿಷಾದ"
" ಹೊಗೆಯು ಹೊಮ್ಮುತಲಿಹುದು
ಕೆಮ್ಮು ಚಿಮ್ಮುತಲಿಹುದು
ರಸ್ತೆ ಬದಿ ಕುಳಿತಿರುವ
ಹುಡುಗನೆದೆಯಿಂದ...
ಪುಟ್ಟ ಕಂದನ ಕೈಲಿ
ಸುಡು ಸುಡುವ ಹೊಗೆಬತ್ತಿ...
ಜಗವು ನೋಡುತಲಿಹುದು
ನಿರ್ಭಾವದಿಂದ..."
ಮಳೆಗಾಲಕ್ಕೆ ಮುನ್ನುಡಿ..
ಈ ಧಾರಾಕಾರ ಮಳೆಯ ಮಧ್ಯೆಯೂ ಒಂದು ಸಣ್ಣ ಚಾರಣ ಮಾಡುವ ಯೋಜನೆಯೂ ಇದೆ.. ನನ್ನ ಪ್ರೀತಿಯ ಘಾಟಿ ಕನ್ಯೆ "ಚಾರ್ಮಾಡಿ" ನನ್ನನ್ನ ಕೈ ಬೀಸಿ ಕರೆಯುತ್ತಾ ಇದ್ದಾಳೆ.. ಜೊತೆಗೆ ನನ್ನ ಆಜನ್ಮ ಮಿತ್ರರಾದ ಜಿಗಣೆಗಳೂ.... ಹೋಗದೇ ಇರೋದಿಕ್ಕಗುತ್ತದಾ ? ನೀವೇ ಹೇಳಿ ?
ಒಂದು ಸುಂದರ ಭಾನುವಾರ ನಾನು ಚಾರ್ಮಾಡಿಯತ್ತ ಹೆಜ್ಜೆ ಹಾಕಲಿದ್ದೇನೆ... ಮೋಡಗಳಿಗೆ ಮುತ್ತು ಕೊಡುವ ಆಸೆ ನಂಗೆ.. ನೀವೂ ಬರಬೇಕು ಅಂತ ಅನ್ನಿಸ್ತಿದೆಯಾ ?
ಉಹುಂ... ನಾನು ಒಬ್ಬನೇ ಹೋಗುತ್ತಾ ಇರೋದು....
ಹೋಗಿ ಬಂದ ಮೇಲೆ ಆ ಕತೆ ಹೇಳ್ತೇನೆ... ಆಯಿತಾ ?
ಟಾಟಾ...
Tuesday, May 27, 2008
"ಮುರಿದ ಮನ"
ಸುಡುವ ಭಾವಗಳಿಂದು
ಮನಕೆ ಕಿಡಿ ಹಚ್ಚಿಹವು
ತಣಿಸೋ ತಂಗಾಳಿಯದು
ಬಹು ದೂರವಿಹುದು..
ಸಂತಯಿಸುವಾ ಮಾತು,
ಸ್ಪರ್ಶಕ್ಕಾಗಿಯೇ ಕಾದು
ಮರುಗುತ್ತ ಕುಳಿತಿಹುದು
ಜೀವ ಬೆಂದು...
ಮನದ ಮಾತುಗಳು
ಬ್ಲಾಗ್ ಲೋಕಕ್ಕೆ ಕಾಲಿಡುವಾಗ ಏನೋ ಒಂದು ಭಯ.... ನನ್ನ ಬರಹಗಳನ್ನು, ಹುಚ್ಚು ಭಾವನೆಗಳನ್ನು ಎಲ್ಲರೆದುರು ತೆರೆದಿಡಲು ಏನೋ ಸಂಕೋಚ..... ಬರವಣಿಗೆಯ ಮೊದಲ ಹಂತದಲ್ಲಿ ಕಾಣುವ ಈ ಹಿಂಜರಿತವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದೇನೆ... ಹಾಂ.... ನನಗೆ ಬ್ಲಾಗ್ ತೆರೆಯಲು ಸಹಕರಿಸಿದ ನನ್ನ ಪ್ರೀತಿಯ ರಮೇಶಣ್ಣನಿಗೆ ತುಂಬಾ ತುಂಬಾ ಥ್ಯಾಂಕ್ಸ್ !!!
ನನ್ನ ಈ ಪಯಣದಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ.... ನಿಮ್ಮ ಪ್ರೋತ್ಸಾಹ, ಹಾರೈಕೆಗಳೇ ನನಗೆ ಸ್ಪೂರ್ತಿ.....
ನನ್ನ ಕವನಗಳು, ಕೆಲವೊಂದು ಬರಹಗಳು, ಚಾರಣದ ಕತೆಗಳು, ಹೀಗೆ ಎಲ್ಲವನ್ನೂ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಾ ಇದ್ದೇನೆ.......
ಓದಿ ಅಭಿಪ್ರಾಯ ಬರೆಯುತ್ತೀರಲ್ವ ???
"ಚಿಂತೆ"
ಮನದ ಭಾವಗಳನ್ನು
ಹಂಚಿಕೊಳ್ಳಲು ಬೇಕು,
ಮುಚ್ಚಿಟ್ಟ ದುಃಖವದು ಕಿಚ್ಚಿನಂತೆ....
ಎದೆಯ ತೆರೆಯಲು ಬೇಕು,
ತುಟಿ ಬಿಚ್ಚಿದರೆ ಸಾಕು,
ನೋವು ತಾ ಕರಗುವುದು ಮಂಜಿನಂತೆ....